ಮಂಗಳವಾರ, ಮೇ 11, 2021
24 °C
ಪ್ರವಾಸೋದ್ಯಮ ಕ್ಷೇತ್ರ ಬಲಪಡಿಸಲು ಜಿಲ್ಲಾಡಳಿತ ಚಿಂತನೆ: ಶೀಘ್ರದಲ್ಲೇ ಸಭೆ

ಆನೆಗೊಂದಿ ಅಭಿವೃದ್ಧಿಗೆ ನೀಲನಕ್ಷೆ: ಶೀಘ್ರದಲ್ಲೇ ಸಭೆ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಆನೆಗೊಂದಿ, ಅಂಜನಾದ್ರಿ ಸೇರಿ 20ಕ್ಕೂ ಹೆಚ್ಚು ಸ್ಥಳಗಳನ್ನು ಅಂತರರಾಷ್ಟ್ರೀಯ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಈ ಸಂಬಂಧ ಚರ್ಚಿಸಲು ಏ.16 ರಂದು ಪ್ರಮುಖರ ಸಭೆ ಕರೆಯಲಾಗಿದೆ.

ಈಚೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆ ಭಾಗದ ಉದ್ಯಮಿಗಳು, ಕಲಾವಿದರು ಹಾಗೂ ಪ್ರಮುಖರ ಸಭೆ ನಡೆದಿತ್ತು.

ಪ್ರವಾಸಿ ಸ್ಥಳಗಳಿಗೆ ಸಂಪರ್ಕ, ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ವಿವಿಧ ವಿಷಯಗಳ ಕುರಿತು ಈ ವೇಳೆ ಚರ್ಚಿಸಲಾಗಿತ್ತು.

ಅಕ್ರಮ ರೆಸಾರ್ಟ್‌ಗಳ ಕಾರಣಕ್ಕೆ ಕುಖ್ಯಾತಿ ಪಡೆದಿದ್ದ ವಿರುಪಾಪುರ ಗಡ್ಡೆಯಲ್ಲಿನ ಕಟ್ಟಡಗಳನ್ನು ತೆರವುಗೊ
ಳಿಸಿದ ನಂತರ ಪ್ರವಾಸಿಗರ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ.

ಕೈಗೆಟುಕುವ ದರದಲ್ಲಿ ಹಾದಿ, ಬೀದಿಯಲ್ಲಿ ತಲೆ ಎತ್ತಿದ್ದ ರೆಸಾರ್ಟ್‌ಗಳು ತಮ್ಮ ಸಹಜ ಸೌಂದರ್ಯ, ವಾಸಕ್ಕೆ ಯೋಗ್ಯವಾದ ಪರಿಸರ ಬೆಟ್ಟ, ನದಿ, ಕುರುಚಲು ಕಾಡಿನ ಕಾರಣಕ್ಕೆ ಆಕರ್ಷಣೀಯ ತಾಣಗಳಾಗಿದ್ದವು. ನಿಷೇಧಿತ ಪ್ರದೇಶ, ಅರಣ್ಯ ವ್ಯಾಪ್ತಿ, ಅತಿಕ್ರಮಣ, ಮಾದಕ ವಸ್ತುಗಳ ಬಳಕೆ, ಕೃಷಿ ಜಮೀನು ದುರ್ಬಳಕೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಕಳೆದ 2 ವರ್ಷಗಳ ಹಿಂದೆ ಸಂಪೂರ್ಣ ತೆರವುಗೊಳಿಸಲಾಗಿತ್ತು.

ದೇಶ-ವಿದೇಶದ ಪ್ರವಾಸಿಗರು ನವೆಂಬರ್‌ನಿಂದ ಜೂನ್‌ವರೆಗೆ ಇಲ್ಲಿಯೇ ಠಿಕಾಣಿ ಹೂಡಿ, ಸೈಕಲ್, ರಿಕ್ಷಾ ಮೂಲಕ ಸಂಚರಿಸುತ್ತಿರುವುದನ್ನು ಕಂಡಾಗ ಮಿನಿ ಗೋವಾದಂತೆ ಭಾಸವಾಗುತ್ತಿತ್ತು. 2019ರಲ್ಲಿ 18 ಸಾವಿರ ಪ್ರವಾಸಿಗರು ಇಲ್ಲಿ ಮೂರು ತಿಂಗಳು ವಾಸ್ತವ್ಯ ಮಾಡಿ, ಇಲ್ಲಿನ ಪರಿಸರಕ್ಕೆ ಮಾರು ಹೋಗಿದ್ದರು. ಈ ಎಲ್ಲ ಕಾರಣಗಳಿಂದ ನೂರಾರು ಕೋಟಿ ಆದಾಯ ತರುತ್ತಿದ್ದ ಮತ್ತು ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯೋಗಕ್ಕೆ ಕಾರಣವಾಗಿದ್ದ ರೆಸಾರ್ಟ್‌ಗಳ ತೆರವಿನಿಂದ ಪ್ರವಾಸೋದ್ಯಮ ಕ್ಷೇತ್ರ ಬಹುತೇಕ ನೆಲಕಚ್ಚಿದೆ ಎನ್ನಬಹುದು.

ಮೊದಲಿನ ಪ್ರವಾಸೋದ್ಯಮದ ವೈಭವವನ್ನು ಮರಕಳಿಸುವಂತೆ ಮಾಡಲು, ಅಧಿಕೃತ ರೆಸಾರ್ಟ್, ಪರಿಸರ, ಪ್ರವಾಸಿ, ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಏನೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬ ಕುರಿತು ಚರ್ಚೆ ನಡೆಯಿತು ಎಂದು ತಿಳಿದು ಬಂದಿದೆ.

ಯಾವ, ಯಾವ ಸ್ಥಳ ಆಕರ್ಷಣೆ: ಆಂಜನೇಯ ಜನಿಸಿದ ಅಂಜನಾದ್ರಿ, ಆನೆಗೊಂದಿ ಕೋಟೆ ಮತ್ತು ಪಾರಂಪರಿಕ ಗ್ರಾಮ, ಪಂಪಾ ಸರೋವರ, ನವವೃಂದಾವನ ಗಡ್ಡೆ, ತುಂಗಭದ್ರಾ ನದಿಯ ವೈವಿಧ್ಯಮಯ ಪರಿಸರ, ನೀರು ನಾಯಿ ಸಂರಕ್ಷಣೆ, ದುರ್ಗಾ ದೇಗುಲ, ಋಷ್ಯಮುಖ ಪರ್ವತ, ವಾಲಿ ಕೋಟೆ, ಮೊರೇರ ಬೆಟ್ಟ, ಸಣಾಪುರ ಕೆರೆ ಮತ್ತು ಕೊರಕಲು ಕೊಳ್ಳಗಳ ಲೇಸರ್ ಶೋ, ವಾಟರ್ ಪಾರ್ಕ್ ಸೇರಿದಂತೆ ಅನೇಕ ಕ್ಷೇತ್ರ, ಸ್ಥಳಗಳು ಇಲ್ಲಿ ಇದ್ದು, ಅವುಗಳ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು