ಕೊಪ್ಪಳ: ಕಿರಿದಾದ ಜಾಗದಲ್ಲಿ ಪ್ರತಿನಿತ್ಯ ನೂರಾರು ಮಕ್ಕಳು ಪಾಠ ಕೇಳುವ ಕೊಪ್ಪಳ ತಾಲ್ಲೂಕಿನ ಕಾಮನೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರ ನಿರಂತರ ಪ್ರಯತ್ನದಿಂದಾಗಿ ಈಗ ಹೊಸ ಜಾಗ ಸಿಕ್ಕಿದೆ.

ಈ ಜಾಗ ಖರೀದಿಗೆ ಬೇಕಾದ ಹಣವನ್ನು ಶಿಕ್ಷಕರು ನೀಡಿದ್ದು, ಬೇರೆಯವರಿಂದಲೂ ಸಂಗ್ರಹಿಸಿದ್ದಾರೆ. ಸೋಮವಾರ (ಇಂದು) ರಾಜ್ಯಪಾಲರ ಹೆಸರಿನಲ್ಲಿ ಜಾಗ ನೋಂದಣಿಯಾಗಲಿದೆ. ಇದಕ್ಕಾಗಿ ಶಿಕ್ಷಕರು ಹಲವು ವರ್ಷಗಳಿಂದ ಛಲಬಿಡದೇ ಶ್ರಮಿಸಿದ್ದಾರೆ.

ಕಾಮನೂರು ಮಹಾತ್ಮ ಗಾಂಧೀಜಿ ಅವರ ಆದರ್ಶಗಳನ್ನು ರೂಢಿಸಿಕೊಂಡ ಗ್ರಾಮವಾಗಿದ್ದು, ಈ ಗ್ರಾಮದಲ್ಲಿ ಇಂದಿಗೂ ಮದ್ಯ ಮಾರಾಟ ಮಾಡುವುದಿಲ್ಲ. ಗ್ರಾಮದ ಅಂಗಡಿಗಳಲ್ಲಿ ತಂಬಾಕು, ಗುಟ್ಕಾ ಸಿಗುವುದಿಲ್ಲ. ಇಂಥ ಹಿನ್ನಲೆಯ ಕಾಮನೂರಿನಲ್ಲಿ 1960ರಲ್ಲಿ ಏಳು ಗುಂಟೆ ಜಾಗದಲ್ಲಿ ಆರಂಭವಾದ ಶಾಲೆಯಲ್ಲಿ ಈಗ 1ರಿಂದ 8ರ ತನಕ ತರಗತಿಗಳು ನಡೆಯುತ್ತಿವೆ. 272 ವಿದ್ಯಾರ್ಥಿಗಳು, ಹತ್ತು ಜನ ಶಿಕ್ಷಕರು ಇದ್ದಾರೆ. ಇಕ್ಕಟ್ಟಾದ ಜಾಗದಲ್ಲಿ ಏಳು ಕೊಠಡಿಗಳು ಇವೆ. ಇದರಲ್ಲಿಯೇ ಅಡುಗೆ ಕೊಠಡಿಗೂ ವ್ಯವಸ್ಥೆ ಮಾಡಲಾಗಿದೆ.

ಕೊಠಡಿಗಳ ಕೊರತೆಯಿಂದಾಗಿ ನಿತ್ಯ ಒಂದೆರಡು ತರಗತಿಗಳನ್ನು ಕೂಡಿಸಿ ಪಾಠ ಮಾಡಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ ಶಾಲೆಯ ಮುಖ್ಯೋಪಾಧ್ಯಾಯ ಯುವರಾಜ ಬಡಿಗೇರ ಹಾಗೂ ಶಿಕ್ಷಕರು ಶಾಲೆಗೆ ಹೊಸ ಜಾಗ ಖರೀದಿಗೆ ಪ್ರಯತ್ನ ಆರಂಭಿಸಿದರು. ಮೊದಲು ಶಿಕ್ಷಕರೆಲ್ಲರೂ ಸೇರಿ ತಮ್ಮ ವೇತನದಿಂದ ಹಣ ನೀಡಿ ₹ 1.48 ಲಕ್ಷ ಸಂಗ್ರಹಿಸಿದರು. ಬಳಿಕ ಸಾರ್ವಜನಿಕರು, ಕಾಮನೂರು ವ್ಯಾಪ್ತಿ ಹೊಂದಿರುವ ಲೇಬಗೇರಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಜನಪ್ರತಿನಿಧಿಗಳ ನೆರವಿನಿಂದ ಒಟ್ಟು ₹ 21 ಲಕ್ಷ ಸಂಗ್ರಹವಾಗಿದೆ. ಇದೇ ಹಣದಲ್ಲಿ ಈಗ ಗ್ರಾಮದ ಶಿಬಾರಿಕಟ್ಟಿ ಬಳಿ ಒಂದು ಎಕರೆ 20 ಗುಂಟೆ ಜಾಗ ಖರೀದಿಸುತ್ತಿದ್ದಾರೆ.

ಕಾಮನೂರು ಗ್ರಾಮವನ್ನು ಕೊಪ್ಪಳ ಜಿಲ್ಲಾ ಪಂಚಾಯಿತಿ ನರೇಗಾ ಯೋಜನೆಯಡಿ ದತ್ತು ಗ್ರಾಮವನ್ನಾಗಿ ಸ್ವೀಕರಿಸಿದ್ದು ವಿಶೇಷ ಅನುದಾನವನ್ನೂ ನೀಡುವುದಾಗಿ ಘೋಷಿಸಿದೆ. ಇದೇ ಅನುದಾನದಲ್ಲಿ ಸರ್ಕಾರಿ ಶಾಲೆಯ ಹೊಸ ಜಾಗಕ್ಕೆ ಶೌಚಾಲಯ ಹಾಗೂ ಕಾಂಪೌಂಡ್ ನಿರ್ಮಿಸುವುದಾಗಿ ತಿಳಿಸಿದೆ.

ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸವಡಿ ಗ್ರಾಮದ ಯುವರಾಜ ಬಡಿಗೇರ ಹಿಂದೆ ಕೊಪ್ಪಳ ತಾಲ್ಲೂಕಿನ ಕೊಡದಾಳ ಹಾಗೂ ತಾಳಕನಕಾಪುರದಲ್ಲಿ ಮುಖ್ಯೋಪಾಧ್ಯಾಯರಾಗಿದ್ದಾಗ ಸಾರ್ವಜನಿಕರ ದೇಣಿಗೆಯಿಂದ ಶಾಲೆಗೆ ಆಸ್ತಿ ಮಾಡಿದ್ದಾರೆ. ಈಗ ತಮ್ಮ ಗ್ರಾಮದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರೂ ಕೈ ಜೋಡಿಸಿದ್ದರಿಂದ ಕಾಮನೂರು ಗ್ರಾಮಸ್ಥರೂ ಖುಷಿಯಾಗಿದ್ದಾರೆ.

ಈಗಿರುವ ಶಾಲೆ ಬಹಳ ಇಕ್ಕಟ್ಟಾಗಿದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಎಲ್ಲರ ನೆರವಿನಿಂದ ದೇಣಿಗೆ ಸಂಗ್ರಹಿಸಿ ಹೊಸ ಜಾಗ ಖರೀದಿಸಲಾಗಿದ್ದು ನೋಂದಣಿ ಮಾಡಿಕೊಳ್ಳುತ್ತಿದ್ದೇವೆ

–ಯುವರಾಜ ಬಡಿಗೇರ ಕಾಮನೂರು ಶಾಲೆಯ ಮುಖ್ಯೋಪಾಧ್ಯಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.