ಭಾನುವಾರ, ಸೆಪ್ಟೆಂಬರ್ 15, 2019
26 °C
ಮೊಬೈಲ್‌ ಬಳಕೆಗೆ ನಿಷೇಧ: ಬಸ್ ಚಾಲಕಗೆ ಎರಡು ದಿನದ ನಂತರ ಮಾಹಿತಿ

ಬಸ್ ಚಾಲಕಗೆ ಮಗಳು ಮೃತಪಟ್ಟ ಸುದ್ದಿ ತಿಳಿಸದೇ ಕರ್ತವ್ಯಕ್ಕೆ ನಿಯೋಜನೆ

Published:
Updated:
Prajavani

ಗಂಗಾವತಿ (ಕೊಪ್ಪಳ ಜಿಲ್ಲೆ): ಕರ್ತವ್ಯ ನಿರತ ಬಸ್‌ ಚಾಲಕರೊಬ್ಬರಿಗೆ ಎರಡು ದಿನಗಳಾದರೂ ಮಗಳು ಮೃತಪಟ್ಟ ವಿಷಯವನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಘಟಕದ ಅಧಿಕಾರಿಗಳು ತಿಳಿಸದಿರುವ ಅಂಶ ಬೆಳಕಿಗೆ ಬಂದಿದೆ.

ಇಲ್ಲಿಯ ಸಾರಿಗೆ ಘಟಕದಲ್ಲಿ ಬಸ್ ಚಾಲಕರಾಗಿರುವ ಮಂಜುನಾಥ, ಬಾಗಲಕೋಟೆ ಜಿಲ್ಲೆಯ ರಾಂಪೂರ ಗ್ರಾಮದವರು. ಮಗಳು ಕವಿತಾಗೆ ಅನಾರೋಗ್ಯ ಕಾಡುತ್ತಿದ್ದ ಕಾರಣ ಆಕೆಯನ್ನು ಗ್ರಾಮಕ್ಕೆ ಕಳುಹಿಸಿದ್ದರು. ಬುಧವಾರ ಏಕಾಏಕಿ ತೊಂದರೆ ಕಾಣಿಸಿಕೊಂಡು ಮೃತಪಟ್ಟಳು. ಕುಟುಂಬಸ್ಥರು ಮಗಳು ಮೃತಪಟ್ಟಿರುವ ಸುದ್ದಿಯನ್ನು ಘಟಕದ ಹಿರಿಯ ಅಧಿಕಾರಿಗಳಿಗೆ ಮುಟ್ಟಿಸಿದ್ದಾರೆ‌.

ಆದರೆ, ಅಧಿಕಾರಿಗಳು ಚಾಲಕ ಮಂಜುನಾಥ ಅವರಿಗೆ ಮಾಹಿತಿ ನೀಡದೆ, ಗಂಗಾವತಿ–ಕೊಲ್ಹಾಪುರ ಮಾರ್ಗದ ಬಸ್‌ನ ಕರ್ತವ್ಯಕ್ಕೆ ನಿಯೋಜಿಸಿದ್ದಾರೆ. ಎರಡು ದಿನದ ನಂತರ ಶುಕ್ರವಾರ ಮಂಜುನಾಥ ಅವರು ಗಂಗಾವತಿಗೆ ಬಂದ ನಂತರ ಮಗಳು ಮೃತಪಟ್ಟಿರುವ ವಿಷಯ ತಿಳಿಸಿದ್ದಾರೆ.

ಮಗಳ ಸಾವಿನ ವಿಷಯವನ್ನು ಎರಡು ದಿನ ತಡವಾಗಿ ತಿಳಿದ ನಂತರ ಆಘಾತಗೊಂಡ ಅವರು, ‘ಮಗಳ ಮುಖವನ್ನೂ ನೋಡಲು ಆಗಲಿಲ್ಲ’ ಎಂದು ಕಣ್ಣೀರು ಹಾಕಿದರು.

ಈ ಕುರಿತು ಪ್ರತಿಕ್ರಿಯಿಸಿದ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಮಹಮ್ಮದ್ ಫಯಾಜ್, ‘ಬುಧವಾರ ಬೆಳಿಗ್ಗೆ 10ಕ್ಕೆ ಮಂಜುನಾಥ ಕರ್ತವ್ಯದ ಮೇರೆಗೆ ಕೊಲ್ಹಾಪುರಕ್ಕೆ ಬಸ್‌ನಲ್ಲಿ ತೆರಳಿದ್ದು, ಮಧ್ಯಾಹ್ನ 12ಕ್ಕೆ ಮಗಳ ಸಾವಿನ ಸುದ್ದಿ ಬಂದಿದೆ. ಮಂಜುನಾಥ ಅವರ ಬಳಿ ಮೊಬೈಲ್ ಇರಲಿಲ್ಲ. ನಾವು ಪ್ರಯತ್ನಿಸಿದರೂ ಅವರು ಸಂಪರ್ಕಕಕ್ಕೆ ಸಿಗಲಿಲ್ಲ. ನಮಗೂ ಮಾನವೀಯತೆ ಇದೆ. ಸಂಪರ್ಕ ಕೊರತೆಯಿಂದ ಮಾಹಿತಿ ನೀಡಲು ಆಗಲಿಲ್ಲ’ ಎಂದರು.

Post Comments (+)