ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರವಾನಗಿ ಅಕ್ರಮ; ಕ್ರಮಕ್ಕೆ ಆಗ್ರಹ

ನಗರಸಭೆ ಸಾಮಾನ್ಯ ಸಭೆ: ಅಭಿವೃದ್ಧಿ ಹೊಂದಿದ ಕೊಳಚೆ ಪ್ರದೇಶ ಕೈಬಿಡುವ ಕುರಿತು ಚರ್ಚೆ
Last Updated 6 ಜುಲೈ 2022, 16:12 IST
ಅಕ್ಷರ ಗಾತ್ರ

ಕೊಪ್ಪಳ: ವ್ಯಾಪಾರ ಪರವಾನಗಿಯನ್ನು ಕೆಲವರು ಅಕ್ರಮವಾಗಿ ಪಡೆದಿದ್ದು, ಅವರ ವಿರುದ್ಧ ತನಿಖೆ ನಡೆಸಬೇಕು ಎನ್ನುವ ಚರ್ಚೆ ಬುಧವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಜರುಗಿತು.

11ನೇ ವಾರ್ಡ್‌ನ ಸದಸ್ಯ ರಾಜಶೇಖರ ಆಡೂರು ಈ ವಿಷಯ ಸಭೆಯ ಗಮನಕ್ಕೆ ತಂದರು. ‘ಕೆಲವರು ವ್ಯಾಪಾರ ಪರವಾನಗಿಯನ್ನು ಅಕ್ರಮವಾಗಿ ಪಡೆದಿದ್ದಾರೆ. ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅದೇ ಪರವಾನಗಿ ಪತ್ರ ಬಳಸುತ್ತಿದ್ದಾರೆ. ಇದರಿಂದ ನಗರಸಭೆ ಬೊಕ್ಕಸಕ್ಕೆ ಮತ್ತು ಅಸಲಿ ಉದ್ಯಮಿಗಳಿಗೆ ಸಾಕಷ್ಟು ನಷ್ಟವಾಗುತ್ತಿದೆ‘ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತಹನುಮಂತಪ್ಪ ಎನ್‌. ಭಜಕ್ಕನವರ ’ಅಕ್ರಮ ಪರವಾನಗಿ ಪಡೆಯುವುದು ಅಪರಾಧ. ಸಾರ್ವಜನಿಕರು ನಗರಸಭೆಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು‘ ಎಂದು ತಿಳಿಸಿದರು.

ಕೊಳಚೆ ಪ್ರದೇಶ ಕೈಬಿಡಿ: ನಗರದಲ್ಲಿ ಅಭಿವೃದ್ಧಿ ಹೊಂದಿದ ಕೊಳಚೆ ಪ್ರದೇಶಗಳನ್ನು ಬಿಡಬೇಕು. ಅಭಿವೃದ್ಧಿ ಹೊಂದದ ಹೊಸ ಬಡಾವಣೆಗಳನ್ನು ಕೊಳಚೆ ಪ್ರದೇಶಗಳಾಗಿ ಘೋಷಿಸಬೇಕು ಎಂದು ಕೆಲ ಸದಸ್ಯರು ಆಗ್ರಹಿಸಿದರು.

‘ಈಗ ರಸ್ತೆ, ಚರಂಡಿ ಮತ್ತು ಮನೆ ಇಲ್ಲದ ಬಡಾವಣೆಗಳನ್ನೂ ಕೊಳಚೆ ಪ್ರದೇಶ ಎಂದು ಕರೆಯಲಾಗುತ್ತಿದೆ. 40 ವರ್ಷಗಳಿಂದ 13 ಬಡಾವಣೆಗಳು ಕೊಳಚೆ ಪ್ರದೇಶಗಳೆಂದು ಇದ್ದು, ನಾಲ್ಕು ದಶಕ ಕಳೆದರೂ ಅಭಿವೃದ್ಧಿಯಾಗಿಲ್ಲವೇ? ಅಭಿವೃದ್ಧಿ ಹೊಂದಿದ ಪ್ರದೇಶಗಳನ್ನು ಕೈ ಬಿಟ್ಟು ಹೊಸ ಬಡಾವಣೆಗಳನ್ನು ಸೇರ್ಪಡೆ ಮಾಡಿ’ ಎಂದು ಸದಸ್ಯ ಮುತ್ತುರಾಜ್‌ ಕುಷ್ಟಗಿ ಆಗ್ರಹಿಸಿದರು.

‘ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವಜನಪಹಣಿಬೇಕು ಎನ್ನುತ್ತಿದ್ದಾರೆ. ಇದಕ್ಕಾಗಿ ನಗರಸಭೆ ವ್ಯವಸ್ಥೆ ಮಾಡಬೇಕು‘ ಎಂದು ಸದಸ್ಯ ಚನ್ನಪ್ಪ ಕೋಡಿಹಾಳ ಮನವಿ ಮಾಡಿದರು.

ಚರ್ಚೆ: ಜಮಾ, ಖರ್ಚು, ಲ್ಯಾಪ್‌ಟಾಪ್‌ ವಿತರಣೆ, ಅಂಗವಿಕಲರಿಗೆ ಸಹಾಯಧನ, ಫಾರ್ಮ್ ನಂಬರ್‌ 3, ಹೆಚ್ಚಿನ ಸ್ವಚ್ಛತಾ ಕಾರ್ಮಿಕರ ಕೊರತೆ, ಉದ್ಯಮ ಪರವಾನಗಿ ಸೇರಿದಂತೆ ಒಟ್ಟು 18 ವಿಷಯಗಳ ಬಗ್ಗೆ ಚರ್ಚೆಯಾಯಿತು. ಸದಸ್ಯರ ಬಹಳಷ್ಟು ಪ್ರಶ್ನೆಗಳಿಗೆ ಅಧಿಕಾರಿಗಳು ಸಮಂಜಸ ಉತ್ತರ ನೀಡಲಿಲ್ಲ.

ಸಿಗದ ಉತ್ತರ: ಹೊಸದಾಗಿ ನಿರ್ಮಾಣಗೊಂಡ ಮಿತ್ರಾ ಎನ್ ಕ್ಲೇವ್ ಮತ್ತು ಕವಲೂರು ಬಡಾವಣೆಗಳಿಗೆ ಕುಡಿಯುವ ನೀರಿನ ಕೊಳವೆ ಹಾಕುವ ಸಂಬಂಧ ನಡೆದ ಚರ್ಚೆ ವೇಳೆ 'ಕುಡಿಯುವ ನೀರು, ವಿದ್ಯುತ್, ರಸ್ತೆ ಇತ್ಯಾದಿ ಮೂಲಸೌಲಭ್ಯಗಳೇ ಇಲ್ಲದ ಆ ಬಡಾವಣೆಗಳಿಗೆ ಅನುಮತಿ ದೊರೆತಿದ್ದಾದರೂ ಹೇಗೆ‘ ಎಂಬ ಸದಸ್ಯರ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವೇ ಇರಲಿಲ್ಲ.

ನಗರಸಭೆ ಅಧ್ಯಕ್ಷೆ ಶಿವಗಂಗಮ್ಮ ಭೂಮಕ್ಕನವರ್, ಉಪಾಧ್ಯಕ್ಷೆ ಆಯಿಷಾ ರುಬಿನಾ , ಎಇಇ ಶಿವಾನಂದ ರಡ್ಡೇರ್, ಸದಸ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಯಲ್ಲಮ್ಮ

ಕೊಪ್ಪಳ: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 12ನೇ ವಾರ್ಡ್‌ನ ಸದಸ್ಯೆ ಯಲ್ಲಮ್ಮ ರಮೇಶ್ ಗಿಣಿಗೇರಿ ಆಯ್ಕೆಯಾದರು. ಬುಧವಾರದ ಸಭೆಯಲ್ಲಿ 11 ಜನ ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸದಸ್ಯರು: ಅಶ್ವಿನಿ ಗದಗಿನಮಠ (2ನೇ ವಾರ್ಡ್‌), ಉಮಾ ಪಾಟೀಲ (27), ನಾಗರತ್ನ ಕುಕನೂರು (14), ದುರಗವ್ವ ಎಚ್‌.ಬಿ. ಹಳ್ಳಿ (23), ಸುನಿತಾ ಗಾಳಿ (8), ಸಬೀಯಾ ಪಟೇಲ್ (18), ಅಜಮುದ್ದೀನ್ ಅತ್ತಾರ್‌ (7), ಬಸಯ್ಯ ಶಿವಯ್ಯ ಹಿರೇಮಠ (6), ಅಕ್ಬರ್‌ ಪಾಷಾ (4) ಮತ್ತು ವಿರೂಪಾಕ್ಷಪ್ಪ ಮೋರನಾಳ (22).

’ಫಾರಂ ನಂ.3 ಯಾವಾಗ’

ಕೊಪ್ಪಳ: ನಿವೇಶನ ಖರೀದಿ ನಗರಸಭೆಯಿಂದ ನೀಡುವ ಫಾರಂ ನಂ.3 ಅನ್ನು ಇನ್ನೂ ನೀಡದೇ ಇರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಆದಷ್ಟು ಬೇಗನೇ ಅದನ್ನು ನೀಡುವ ವ್ಯವಸ್ಥೆ ಆಗಬೇಕಿದೆ ಎಂದು ಸದಸ್ಯರು ಒತ್ತಾಯಿಸಿದರು. ‘ಮುಂದಿನ ತಿಂಗಳಿನಿಂದ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪೌರಾಯುಕ್ತರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT