ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳಕ್ಕೆ ಸಂಗಣ್ಣ ಕರಡಿ ಬದಲು ವೈದ್ಯ ಬಸವರಾಜ ಕ್ಯಾವಟರ್‌ಗೆ ಬಿಜೆಪಿ ಟಿಕೆಟ್‌

ವೃತ್ತಿಯಲ್ಲಿ ವೈದ್ಯರಾಗಿರುವ ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್‌ ನೀಡಲಾಗಿದೆ.
Published 13 ಮಾರ್ಚ್ 2024, 14:38 IST
Last Updated 13 ಮಾರ್ಚ್ 2024, 14:38 IST
ಅಕ್ಷರ ಗಾತ್ರ

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಬಿಜೆಪಿಯಿಂದ ಸಂಸದರಾಗಿದ್ದ ಸಂಗಣ್ಣ ಕರಡಿ ಅವರಿಗೆ ಈ ಬಾರಿ ಟಿಕೆಟ್‌ ಲಭಿಸಿಲ್ಲ. ಅವರ ಬದಲು ವೃತ್ತಿಯಲ್ಲಿ ವೈದ್ಯರಾಗಿರುವ ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್‌ ನೀಡಲಾಗಿದೆ.

ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯರೂ ಆದ ಬಸವರಾಜ ಪಕ್ಷದ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದು ಕಡಿಮೆಯಾದರೂ ಹೈಕಮಾಂಡ್‌ ಅವರಿಗೆ ಮೊದಲ ಬಾರಿಗೆ ಅವಕಾಶ ನೀಡಿದೆ. ಕಳೆದ ಲೋಕಸಭಾ ಚುನಾವಣೆ ವೇಳೆಯೇ ಬಸವರಾಜ ಅವರ ಹೆಸರು ಕೇಳಿಬಂದಿತ್ತು.

ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ 1994ರಲ್ಲಿ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿದ್ದ ಕೆ. ಶರಣಪ್ಪ ಅವರ ಪುತ್ರ ಬಸವರಾಜ ಅವರಿಗೆ ನೇರವಾಗಿ ರಾಜಕೀಯ ನಂಟು ಇದ್ದಿದ್ದು ಇತ್ತೀಚೆಗಿನ ವರ್ಷಗಳಲ್ಲಿ ಮಾತ್ರ. ಶರಣಪ್ಪ ಒಂದು ಸಲ ಶಾಸಕರಾಗಿ ಬಳಿಕ ಮೂರು ಬಾರಿ ಸ್ಪರ್ಧಿಸಿ ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡಿದ್ದರು. ಹಿಂದಿನ ಲೋಕಸಭಾ ಚುನಾವಣೆ ವೇಳೆ ಶರಣಪ್ಪ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದರು. ಆಗ ಬಸವರಾಜ ಕೂಡ ಅಪ್ಪನ ಹಾದಿಯಲ್ಲಿ ಸಾಗಿದ್ದರು.

ತಂದೆಯ ರಾಜಕೀಯ ನೆರಳಿನಲ್ಲಿ ಸಾಗಿದ್ದ ಬಸವರಾಜ ನೇರವಾಗಿ ರಾಜಕೀಯದಲ್ಲಿ ಪಾಲ್ಗೊಂಡಿದ್ದು ಇತ್ತೀಚೆಗಿನ ವರ್ಷಗಳಲ್ಲಿ ಮಾತ್ರ. ಆದರೆ ಎಲ್ಲ ಪಕ್ಷಗಳ ಮುಖಂಡರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದರು. ತಂದೆಯ ಪ್ರಭಾವದಿಂದ ಮಗನ ವರ್ಚಸ್ಸು ಕೂಡ ಹಂತಹಂತವಾಗಿ ಬೆಳೆಯಿತು.

ಟಿಕೆಟ್‌ ಲಭಿಸಿದ ಖುಷಿಯನ್ನು ಹಂಚಿಕೊಂಡ ಬಸವರಾಜ ’ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನ ಮಾಡಿದ್ದೆ. ಈಗ ಫಲ ಲಭಿಸಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನಾತ್ಮಕವಾಗಿ ಚುನಾವಣೆ ಎದುರಿಸುತ್ತೇನೆ. ಮೊದಲ ಬಾರಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಖುಷಿಯಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ರಾಜಕೀಯ ನಂಟು

ಬಸವರಾಜ ಅವರ ಸಹೋದರ ಕೆ. ಮಹೇಶ ಬಿಜೆಪಿಯಿಂದಲೇ ಕುಷ್ಟಗಿ ತಾಲ್ಲೂಕಿನ ಹಿರೇಮನ್ನಾಪುರ ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿದ್ದರು. ಹೀಗಾಗಿ ಇವರ ಕುಟುಂಬಕ್ಕೆ ಮೊದಲಿನಿಂದಲೂ ರಾಜಕೀಯ ನಂಟು ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT