ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ |ಅಂಧರ ವಿಶ್ವಕಪ್‌ ತಂಡಕ್ಕೆ ಯಡಹಳ್ಳಿಯ ಲೋಕೇಶ್

ರೈತನ ಪುತ್ರನ ಅನನ್ಯ ಸಾಧನೆ, ಹಳ್ಳಿ ಅಂಗಳದಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ ತನಕ...
Last Updated 3 ಡಿಸೆಂಬರ್ 2022, 7:41 IST
ಅಕ್ಷರ ಗಾತ್ರ

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಚಿಕ್ಕಬೆಣಕಲ್‌ನಿಂದ ಐದು ಕಿ.ಮೀ. ದೂರದಲ್ಲಿರುವ ಯಡಹಳ್ಳಿ ಎನ್ನುವ ಗ್ರಾಮ ಎಲ್ಲಿದೆ ಎನ್ನುವುದೇ ಬಹುತೇಕ ಜನರಿಗೆ ಗೊತ್ತಿಲ್ಲ. ಆದರೆ, ಈ ಗ್ರಾಮದ ಪ್ರತಿಭಾನ್ವಿತ ಕ್ರಿಕೆಟ್‌ ಆಟಗಾರ ಲೋಕೇಶ್‌ ಭಾರತದಲ್ಲಿ ಡಿ. 6ರಿಂದ ನಡೆಯಲಿರುವ ಅಂಧರ ಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.

ಯಡಹಳ್ಳಿ ಗ್ರಾಮದಲ್ಲಿ ಸರಿಯಾಗಿ ಮೊಬೈಲ್‌ ಸಂಪರ್ಕ ಸಿಗುವುದಿಲ್ಲ. ಗ್ರಾಮಕ್ಕೆ ಹೋಗಲು ಉತ್ತಮ ರಸ್ತೆಯೂ ಇಲ್ಲ. ಇಂಥ ಗ್ರಾಮದ ಹೆಸರು ಈಗ ಲೋಕೇಶ್ ಸಾಧನೆಯಿಂದಾಗಿ ದೇಶವ್ಯಾಪಿ ಗೊತ್ತಾಗಿದೆ. ವಿಶ್ವಕಪ್‌ ಟೂರ್ನಿಗೆ ಆಯ್ಕೆಯಾದ ಭಾರತ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರು ಇದ್ದು, ಇದರಲ್ಲಿ ಲೋಕೇಶ್ ಕೂಡ ಒಬ್ಬರು. ಆಲ್‌ರೌಂಡ್‌ ಆಟಗಾರ ಲೋಕೇಶ್ 2016ರ ಏಷ್ಯಾಕಪ್‌ ಟೂರ್ನಿಯಲ್ಲಿ ನೇಪಾಳ ವಿರುದ್ಧ ಆಡುವ ಮೂಲಕ ಅಂತರರಾಷ್ಟ್ರೀಯ ಮಾದರಿಗೆ ಪದಾರ್ಪಣೆ ಮಾಡಿದ್ದರು. ಆ ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಆಗಿತ್ತು. ಈಗ ಮೊದಲ ಬಾರಿಗೆ ‘ವಿಶ್ವಕಪ್’ ತಂಡದಲ್ಲಿ ಅವಕಾಶ ಗಿಟ್ಟಿಸಿದ್ದಾರೆ.

2019ರ ಡಿಸೆಂಬರ್‌ನಲ್ಲಿ ನೇಪಾಳ ವಿರುದ್ಧ ಉತ್ತರ ಪ್ರದೇಶದ ಕಾನ್ಪುರದಲ್ಲಿ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ್ದರು. 2019–20ನೇ ಸಾಲಿನಲ್ಲಿ ನಡೆದಿದ್ದ ’ನಾಗೇಶ್‌ ಟ್ರೋಫಿ’ಯ ’ಬಿ2’ ವಿಭಾಗದಲ್ಲಿ ಒಟ್ಟು ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದ್ದರು. ಲೋಕೇಶ್‌ ಕ್ರಿಕೆಟ್‌ ಜೊತೆಗೆ ಕ್ಲೈಂಬಿಂಗ್‌, ಅಥ್ಲೆಟಿಕ್ಸ್‌ನಲ್ಲಿಯೂ ಭಾಗವಹಿಸಿದ್ದಾರೆ.

ಮೂರು ತಿಂಗಳು ಮಗುವಾಗಿದ್ದಾಗ ಬಲಭಾಗದ ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಲೋಕೇಶ್ ‘ಬಿ2’ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿದ್ದು, ಉತ್ತಮ ಫೀಲ್ಡರ್‌ ಮತ್ತು ಚುರುಕಾಗಿ ಓಡಬಲ್ಲ ಆಟಗಾರ ಎನಿಸಿದ್ದಾರೆ. ರೇಣುಕಪ್ಪ–ಹುಲಿಗೆಮ್ಮ ದಂಪತಿಯ ನಾಲ್ಕು ಜನ ಮಕ್ಕಳಲ್ಲಿ ಲೋಕೇಶ್ ಕೊನೆಯವರು. ಗಂಗಾವತಿಯಲ್ಲಿ ನೀಲಕಂಠೇಶ್ವರ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು, ಜೂನಿಯರ್‌ ಕಾಲೇಜಿನಲ್ಲಿ ಎಂಟನೇ ತರಗತಿ ತನಕ ಓದಿ ನಂತರದ ಹೈಸ್ಕೂಲು ಮತ್ತು ಪದವಿ ಶಿಕ್ಷಣ ಬೆಂಗಳೂರಿನಲ್ಲಿ ಪಡೆದರು.

ಅಂಧ ಮಕ್ಕಳ ಬೆಳವಣಿಗೆಗೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಸಮರ್ಥನಂ ಸಂಸ್ಥೆ ದೇಶದಲ್ಲಿ ಅಂಧರಿಗೆ ಸಂಬಂಧಿಸಿದ ಕ್ರಿಕೆಟ್‌ ಚಟುವಟಿಕೆಗಳನ್ನು ನಿರ್ವಹಣೆ ಮಾಡುತ್ತಿದೆ. ಈ ಸಂಸ್ಥೆಯನ್ನು 2009ರಲ್ಲಿ ಸೇರಿಕೊಂಡ ಬಳಿಕ ಲೋಕೇಶ್‌ ಬದುಕು ಬದಲಾಯಿತು. ಕ್ರಿಕೆಟ್‌ ಬಗ್ಗೆ ತಮಗಿದ್ದ ಆಸಕ್ತಿಗೆ ಈ ಸಂಸ್ಥೆ ವೇದಿಕೆ ಕಲ್ಪಿಸಿತು. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು ಲೋಕೇಶ್‌ ಈಗ ವಿಶ್ವಕಪ್‌ ತಂಡದಲ್ಲಿ ಅವಕಾಶ ಗಿಟ್ಟಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

***

ಅಂಧರ ವಿಶ್ವಕಪ್‌ ತಂಡದಲ್ಲಿ ಒಮ್ಮೆಯಾದರೂ ಆಡಬೇಕು ಎನ್ನುವ ಜೀವನದ ದೊಡ್ಡ ಕನಸು ಈಗ ನನಸಾಗಿದೆ. ಬದುಕಿನಲ್ಲಿ ಇದಕ್ಕಿಂತ ದೊಡ್ಡ ಸಂಭ್ರಮ ಇನ್ನೊಂದಿಲ್ಲ.
- ಲೋಕೇಶ್‌, ಭಾರತ ತಂಡದ ಆಟಗಾರ

ಅಂಧರು ಎಂದಾಕ್ಷಣ ಬದುಕೇ ಕತ್ತಲು ಎನ್ನುವ ನಿರಾಶಭಾವ ಬೇಡ. ಎಲ್ಲರಂತೆ ದೊಡ್ಡ ಸಾಧನೆ ಮಾಡಲು ಹೇರಳ ಅವಕಾಶಗಳು ಇವೆ. ಇದಕ್ಕೆ ಲೋಕೇಶ್‌ ಸಾಧನೆಯೇ ಸಾಕ್ಷಿ.
- ಮಹಾಂತೇಶ್ ಜಿ. ಅಧ್ಯಕ್ಷ, ಭಾರತ ಅಂಧರ ಕ್ರಿಕೆಟ್‌ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT