ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಅಂಗಾಂಗ ದಾನ ಮಾಡಿ ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಮಲ್ಲಪ್ಪ

Published 4 ಜನವರಿ 2024, 4:44 IST
Last Updated 4 ಜನವರಿ 2024, 4:44 IST
ಅಕ್ಷರ ಗಾತ್ರ

ಕೊಪ್ಪಳ: ಬೈಕ್‌ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದ ಆರನೇ ವಾರ್ಡ್‌ನ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಪ್ಪ ಉದ್ದಾರ (36) ಕೊನೆಗೂ ಬದುಕುಳಿಯಲಿಲ್ಲ.

ಆದರೆ, ಅವರ ಕುಟುಂಬದವರು ಅತ್ಯಂತ ನೋವಿನ ಸಂದರ್ಭ ಹಾಗೂ ಒತ್ತರಿಸಿ ಬರುತ್ತಿದ್ದ ದುಃಖದ ನಡುವೆಯೂ ದಿಟ್ಟ ಮಾನವೀಯ ನಿರ್ಧಾರ ಕೈಗೊಂಡು ಮಲ್ಲಪ್ಪ ಅವರ ದೇಹದ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಈ ಮೂಲಕ ಸಾವಿನ ನಂತರವೂ ಮಲ್ಲಪ್ಪ ನಾಲ್ಕು ಜನರ ಬದುಕಿಗೆ ‘ಮರುಜೀವ’ ನೀಡಿದಂತಾಗಿದೆ. ಅವರ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ. ಮಲ್ಲಪ್ಪ ಅವರಿಗೆ ತಾಯಿ, ಆರು ಜನ ಸಹೋದರರು ಹಾಗೂ ಮೂವರು ಸಹೋದರಿಯರು ಇದ್ದಾರೆ.

ಡಿ.25ರಂದು ರಾತ್ರಿ ಕುಕನೂರು ತಾಲ್ಲೂಕಿನ ಭಾನಾಪುರದ ಸಮೀಪ ಗೊಂಬೆ ಫ್ಯಾಕ್ಟರಿ ಹತ್ತಿರ ಎರಡು ಬೈಕ್‌ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮಲ್ಲಪ್ಪ ಗಂಭೀರವಾಗಿ ಗಾಯಗೊಂಡಿದ್ದರು. ಆಂಬುಲೆನ್ಸ್‌ ಸಿಬ್ಬಂದಿ ಅವರನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅವರನ್ನು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಆರಂಭಿಕ ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಳ್ಳುವ ಹಂತದಲ್ಲಿದ್ದರು.

ಆದರೆ, ದಿಢೀರನೇ ಕಾಣಿಸಿಕೊಂಡ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರು. ಬಳಿಕ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು ಖಚಿತವಾಗಿದೆ. ಈ ವಿಷಯವನ್ನು ಅಲ್ಲಿನ ವೈದ್ಯರು ಮಲ್ಲಪ್ಪ ಅವರ ಆಪ್ತರು ಹಾಗೂ ಕುಟುಂಬ ಸದಸ್ಯರಿಗೆ ತಿಳಿಸಿ ಅಂಗಾಂಗ ದಾನದ ಬಗ್ಗೆಯೂ ತಿಳಿಹೇಳಿದ್ದಾರೆ.

ವೈದ್ಯರ ಸಲಹೆ ಮತ್ತು ಆಪ್ತರ ಜೊತೆಗಿನ ಚರ್ಚೆಯ ಬಳಿಕ ಮಲ್ಲಪ್ಪ ಅವರ ದೇಹದ ಅಂಗಾಂಗಗಳನ್ನು ದಾನ ಮಾಡಲು ಕುಟುಂಬದವರು ಒಪ್ಪಿಕೊಂಡಿದ್ದಾರೆ. ಮಲ್ಲಪ್ಪ ಅವರ ಹೃದಯವನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ 50 ವರ್ಷದ ಪುರುಷನಿಗೆ, ಇದೇ ಆಸ್ಪತ್ರೆಯ 46 ವರ್ಷದ ಪುರುಷನಿಗೆ ಯಕೃತ್ತು, ಬಲಭಾಗದ ಮೂತ್ರಪಿಂಡವನ್ನು ಧಾರವಾಡದ ಎಸ್‌ಡಿಎಂನ ಮಹಿಳೆಯೊಬ್ಬರಿಗೆ ಮತ್ತು ಎಡಭಾಗದ ಮೂತ್ರಪಿಂಡವನ್ನು 53 ವರ್ಷದ ವ್ಯಕ್ತಿಗೆ ಸುಚಿರಾಯು ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.

ಭಾವುಕರಾದ ವೈದ್ಯರು: ಮಲ್ಲಪ್ಪ ಅವರ ದೇಹದ ಅಂಗಗಳನ್ನು ಸುಚಿರಾಯು ಆಸ್ಪತ್ರೆಯಿಂದ ಬೇರೆ ಕಡೆ ತೆಗೆದುಕೊಂಡು ಹೋಗುವಾಗ ಅಲ್ಲಿ ಅತ್ಯಂತ ಭಾವುಕ ಸನ್ನಿವೇಶ ನಿರ್ಮಾಣವಾಗಿತ್ತು. ದೇಹದ ಅಂಗ ಹೊತ್ತು ಆಸ್ಪತ್ರೆ ಸಿಬ್ಬಂದಿ ಬರುತ್ತಿದ್ದರೆ ಅವರ ಜೊತೆಯಲ್ಲಿದ್ದ ಮಲ್ಲಪ್ಪ ಅವರ ಸಹೋದರ ದುಃಖ ತಾಳಲಾಗದೇ ಕಣ್ಣೀರು ಹಾಕಿದರು. ಅವರನ್ನು ತಬ್ಬಿಕೊಂಡು ಅಲ್ಲಿನ ವೈದ್ಯರು ಭಾವುಕರಾಗಿ ಸಮಾಧಾನಪಡಿಸಿದರು.

‘ಮಲ್ಲಪ್ಪ ಕುಟುಂಬದವರಿಗೆ ಅಂಗಾಂಗದಾನದ ಬಗ್ಗೆ ಮಾಹಿತಿಯಿತ್ತು. ಆದರೆ ಪ್ರಕ್ರಿಯೆಗಳ ಬಗ್ಗೆ ಹೆಚ್ಚಿನ ವಿಷಯ ಗೊತ್ತಿರಲಿಲ್ಲ. ವೈದ್ಯರು ಇದರ ಬಗ್ಗೆ ತಿಳಿಸಿಕೊಟ್ಟರು. ದೇಹ ಮಣ್ಣಲ್ಲಿ ಮಣ್ಣಾಗಿ ಹೋಗುವ ಬದಲು ಹಲವರಿಗೆ ಉಪಯೋಗವಾದರೂ ಆಗುತ್ತದೆ ಎಂದು ನಾವೆಲ್ಲರೂ ಹೇಳಿದೆವು. ಅದಕ್ಕೆ ಐದೇ ನಿಮಿಷದಲ್ಲಿ ಅವರ ಕುಟುಂಬ ಸದಸ್ಯರು ಸಮ್ಮತಿ ಸೂಚಿಸಿದರು’ ಎಂದು ಸುಚಿರಾಯು ಆಸ್ಪತ್ರೆಯಲ್ಲಿ ಜೊತೆಯಲ್ಲಿದ್ದ ಕಿನ್ನಾಳದ ಮಂಜುನಾಥ ಶಿರಿಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು. ಮಹಾದೇವಯ್ಯ ಹಿರೇಮಠ, ವಿರೂಪಾಕ್ಷಪ್ಪ ಐತಾಪುರ ಜೊತೆಯಲ್ಲಿದ್ದರು. ಬುಧವಾರ ಸಂಜೆ ಕಿನ್ನಾಳದಲ್ಲಿ ಅಂತ್ಯಕ್ರಿಯೆ ನೆರವೇರಿತು.

ದೇಹದ ಒಂದೊಂದು ಅಂಗಕ್ಕಾಗಿ ಸಾಕಷ್ಟು ಜೀವಗಳು ಆಸೆಗಣ್ಣಿನಿಂದ ಕಾಯುತ್ತಿವೆ. ಮಲ್ಲಪ್ಪ ಅವರ ಕುಟುಂಬದವರಂತೆ ಬೇರೆಯವರೂ ನಿರ್ಧಾರ ಕೈಗೊಂಡರೆ ಸಂಕಷ್ಟದಲ್ಲಿರುವವರಿಗೆ ಅನುಕೂಲವಾಗುತ್ತದೆ
– ರಾಜು ಕದಂ, ನರರೋಗ ತಜ್ಞ ಸುಚಿರಾಯು ಆಸ್ಪತ್ರೆ ಹುಬ್ಬಳ್ಳಿ

ಉತ್ತಮ ರಸ್ತೆಗಾಗಿ ಹೋರಾಡಿದ್ದ ಸದಸ್ಯ

ಜಿಲ್ಲಾ ಕೇಂದ್ರ ಕೊಪ್ಪಳದಿಂದ ತಮ್ಮೂರು ಕಿನ್ನಾಳಕ್ಕೆ ರಸ್ತೆ ನಿರ್ಮಾಣ ಮಾಡಬೇಕು ಎನ್ನುವುದು ಸೇರಿದಂತೆ ಹಲವು ಸಮಾಜಮುಖಿ ಹೋರಾಟಗಳಲ್ಲಿ ಮಲ್ಲಪ್ಪ ಉದ್ದಾರ ಭಾಗಿಯಾಗಿದ್ದರು. ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಅವರು ‘ಕಿನ್ನಾಳಕ್ಕೆ ಬರುವ ಮಾರ್ಗ ಸಾಕಷ್ಟು ದುರಸ್ತಿಗೆ ಕಾದಿರುವುದರಿಂದ ಅನೇಕರು ಕೈಕಾಲು ಮುರಿದುಕೊಂಡಿದ್ದಾರೆ. ಹಲವರು ಅಂಗವಿಕಲರಾಗಿದ್ದಾರೆ. ಆದ್ದರಿಂದ ತುರ್ತಾಗಿ ರಸ್ತೆ ದುರಸ್ತಿ ಮಾಡಿಸಿ’ ಎಂದು ಮನವಿ ಮಾಡಿದ್ದರು. ವಿಪರ್ಯಾಸವೆಂದರೆ ಅವರು ರಸ್ತೆ ಅಪಘಾತದಲ್ಲಿಯೇ ಪ್ರಾಣ ಕಳೆದುಕೊಂಡರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT