ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಕ್ಕಡಿ ಹಿಡಿದ ಮಾವು ಬೆಳೆಗಾರ

ಲಾಕ್‌ಡೌನ್‌ ದಿನಗಳಲ್ಲೂ 10 ಕ್ವಿಂಟಲ್‍ಗೂ ಹೆಚ್ಚು ಹಣ್ಣುಗಳ ಮಾರಾಟ
Last Updated 17 ಮೇ 2021, 3:23 IST
ಅಕ್ಷರ ಗಾತ್ರ

ಹನುಮಸಾಗರ: ಹಿಂದಿನ ಲಾಕ್‍ಡೌನ್ ಸಮಯದಲ್ಲಿ ತಾವು ಬೆಳೆದಿದ್ದ ದಾಳಿಂಬೆ ಹಣ್ಣುಗಳನ್ನು ದೂರದ ವ್ಯಾಪಾರಿಗೆ ನೀಡಿ ಕೈ ಸುಟ್ಟುಕೊಂಡಿದ್ದ ಇಲ್ಲಿನ ರೈತ ದ್ಯಾಮಣ್ಣ ಹೂನೂರ, ಈ ಬಾರಿ ಯಾವ ವ್ಯಾಪಾರಿಗೂ ಫಸಲು ನೀಡಿ ಮೋಸ ಹೋಗದೆ ಸ್ವತಃ ತಾವೇ ತಕ್ಕಡಿ ಹಿಡಿದು ವ್ಯಾಪಾರಕ್ಕೆ ನಿಂತಿದ್ದಾರೆ.

ಎರಡು ಎಕರೆಯಲ್ಲಿ ವಿವಿಧ ತಳಿಗಳ ಮಾವು ಬೆಳೆದಿರುವ ಈ ರೈತ, ಹಂತ ಹಂತವಾಗಿ ಮಾವು ಕೊಯ್ಲು ಮಾಡಿ ಟಂಟಂ ವಾಹನದ ಮೂಲಕ ಹತ್ತು ಕ್ವಿಂಟಲ್‍ಗೂ ಹೆಚ್ಚು ಹಣ್ಣುಗಳನ್ನು ಮಾರಾಟ ಮಾಡಿದ್ದಾರೆ.

‘ಸಾಮಾನ್ಯವಾಗಿ ರೈತರು ತಕ್ಕಡಿ ಹಿಡಿಯುವುದರ ಬದಲು ದಲ್ಲಾಳಿಗಳ ಮೊರೆ ಹೋಗುವುದು ಸಾಮಾನ್ಯ. ಲಾಕ್‍ಡೌನ್ ವೇಳೆ ರೈತರು ಮೋಸ ಹೋಗುವ ಸಾಧ್ಯತೆ ಹೆಚ್ಚು. ಹೀಗಾಗಿ ಸ್ವತಃ ತಕ್ಕಡಿ ಹಿಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂಬುದು ನಮಗೀಗ ಗೊತ್ತಾಗಿದೆ. ಆರಂಭದಲ್ಲಿ ಸ್ವಲ್ಪ ತೊಂದರೆ ಆಗಬಹುದು ಆದರೆ ಮೋಸವಿಲ್ಲ’ ಎಂದು ರೈತ ದ್ಯಾಮಣ್ಣ ಹೂನೂರ ಸಂತಸದಿಂದ ಹೇಳಿದರು.

ಮಾರುಕಟ್ಟೆಯ ಬೆಲೆಗಿಂತ ಕೊಂಚ ಕಡಿಮೆ ಬೆಲೆಯಲ್ಲಿಯಲ್ಲಿಯೇ ಮಾರಾಟ ಮಾಡಿರುವ ಕಾರಣವಾಗಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಾವು ಖರೀದಿಸಿದ್ದರಿಂದ ಎರಡು ದಿನದಲ್ಲಿ ಇಡೀ ಫಸಲು ಮಾರಾಟವಾಗಿದೆ. ಪ್ರತಿ ದಿನ ಬೆಳಿಗ್ಗೆ ಎರಡು ಗಂಟೆಯಷ್ಟು ಸಮಯದಲ್ಲಿ ನಾಲ್ಕಾರು ಬಡಾವಣೆಯಲ್ಲಿ ಹೋಗಿ ಮಾರಾಟ ಮಾಡಿದ್ದಾರೆ.

‘ಉತ್ತಮ ಗುಣಮಟ್ಟದ ಹಣ್ಣುಗಳನ್ನು ನೀಡುವುದು ಒಂದೆಡೆಯಾದರೆ, ಕಡಿಮೆ ಬೆಲೆಯಲ್ಲಿ ಮನೆಯ ಮುಂದೆ ಹೋಗಿ ಕೊಡುತ್ತಿರುವುದರಿಂದ ಜನ ಹೆಚ್ಚಾಗಿ ಖರೀದಿಸುತ್ತಾರೆ’ ಎಂದು ದ್ಯಾಮಣ್ಣ ಹೂನೂರ ಅವರ ಹಿರಿಯ ಮಗ ಹನುಮಂತ ಹೇಳಿದರು.

‘2020ರ ಲಾಕ್‌ಡೌನ್ ಸಮಯದಲ್ಲಿ ತೋಟಗಾರಿಕೆ ಇಲಾಖೆಯಿಂದ ಬೆಂಗಳೂರಿನ ದಲ್ಲಾಳಿಗಳ ಪರಿಚಯವಾಗಿತ್ತು. ಆ ದಲ್ಲಾಳಿ ಅರೆಬರೆ ಹಣ ನೀಡಿ ವಂಚಿಸಿದರು. ಸುಮಾರು ₹60ಸಾವಿರ ಹಣ ದೊರೆಯಲಿಲ್ಲ’ ಎಂದು ಹನುಮಂತ ನೋವು ತೋಡಿಕೊಂಡರು.

ಈ ಬಾರಿ ಸ್ಥಳೀಯವಾಗಿ ಮಾವಿನ ಹಣ್ಣುಗಳನ್ನು ಮಾರಿದ್ದರಿಂದ ಹಣ್ಣು ತಿಂದ ಜನರೂ ಖುಷಿ ಇದ್ದಾರೆ. ನಾವು ಲಾಭದಲ್ಲಿದ್ದೇವೆ ‌‌‌‌ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT