ಬುಧವಾರ, ಮಾರ್ಚ್ 3, 2021
22 °C
ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಕರ್ತ ಬಾಚಲಾಪುರ ವಿಷಾಧ

ಮಾಧ್ಯಮ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿ ಮಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಮಾಧ್ಯಮ ರಂಗದಲ್ಲಿ ಸಾಮಾಜಿಕ ಕಳಕಳಿ ಮಾಯವಾಗುತ್ತಿರುವುದು ಬೇಸರದ ಸಂಗತಿ. ಈ ನಿಟ್ಟಿನಲ್ಲಿ ಪತ್ರಕರ್ತರು ಗಮನಹರಿಸಬೇಕು ಎಂದು ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಮೀಡಿಯಾ ಕ್ಲಬ್ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರೆಲ್ಲರೂ ಉದ್ಯಮಿಗಳ ಭಾಗವಾಗಿದ್ದೇವೆ. ಇದರಿಂದ ಸಮಾಜ ಸುಧಾರಣೆಯಾಗುವುದಿಲ್ಲ. ಮಾಧ್ಯಮ ಮೊದಲು ಜನರ ಧ್ವನಿಯಾಗಿತ್ತು. ಅಲ್ಲದೆ, ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.‌ ಆದರೆ, ಈಗ ಪತ್ರಿಕೆಗಳು ಎಬಿಸಿ ಮತ್ತು ವಾಹಿನಿಗಳು ಟಿಆರ್‌ಪಿ ಹಿಂದೆ ಬಿದ್ದಿವೆ ಎಂದರು.

ಪ್ರಸ್ತುತ  ಸನ್ನಿವೇಶಗಳು ಪತ್ರಕರ್ತರ ಬಗ್ಗೆ ಅಪನಂಬಿಕೆ ಹುಟ್ಟುಹಾಕಿವೆ. ಪತ್ರಕರ್ತರು ತಾತ್ಸಾರ ಭಾವನೆ ಬಿಡಬೇಕು. ಪತ್ರಕರ್ತರನ್ನು ಕೆಲಸ ಮಾಡುವ ಮಾಧ್ಯಮ ಸಂಸ್ಥೆಯಿಂದಲೇ ಗುರುತಿಸುತ್ತಾರೆ. ನಾವು ಏನೇ ತಪ್ಪು ಮಾಡಿದರೂ ಸಂಸ್ಥೆಯ ಹೆಸರು ಹಾಳಾಗುತ್ತದೆ. ಹಾಗಾಗಿ ನಮ್ಮತನ, ಸತ್ಯತೆ, ಪ್ರಾಮಾಣಿಕತೆಯನ್ನು ‍ಪತ್ರಕರ್ತರು ಮೈಗೂಡಿಸಿಕೊಳ್ಳಬೇಕು. ಪತ್ರಕರ್ತರು ಆತ್ಮವಿಮರ್ಶೆ ಮತ್ತು ಸ್ವವಿಮರ್ಶೆ ಮಾಡಿಕೊಳ್ಳಬೇಕು ಎಂದರು.

1891ರ ಜುಲೈ 1ರಂದು ಹರ್ಮನ್ ಮೊಗ್ಲಿಂಗ್‌ ಅವರು ಕನ್ನಡದ ಮೊದಲ ಪತ್ರಿಕೆಯಾದ ‘ಮಂಗಳೂರು ಸಮಾಚಾರ’ವನ್ನು ಆರಂಭಿಸಿದರು. ಇದರ ಸ್ಮರಣಾರ್ಥವಾಗಿ ಜುಲೈ 1ರಂದು ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.‌

ಧಾರವಾಡ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ್ ಮಾತನಾಡಿ, ಮಾಧ್ಯಮ ಇಂದು ಉದ್ಯಮವಾಗಿದೆ. ಮಾಧ್ಯಮಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಮಾಲೀಕರ ಸಂಖ್ಯೆ ಕಡಿಮೆ ಇದೆ. ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಪತ್ರಕರ್ತರಿಗೆ ಆಂತರಿಕ ಮತ್ತು ಮುಕ್ತವಾಗಿಯೂ ಸ್ವಾತಂತ್ರ್ಯ ಇಲ್ಲವಾಗಿದೆ. ಆದರೆ ಈ ಸ್ವಾತಂತ್ರ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಇವೆ ಎಂದರು.

ಆದರೆ ಜಾಲತಾಣಗಳ ದುರ್ಬಳಕೆಯೂ ಹೆಚ್ಚಿದೆ. ರಾಜಕಾರಣಿಗಳ ಜತೆ ಒಡನಾಟ ಇರಬೇಕು. ಆದರೆ, ಅಷ್ಟೇ ಅಂತರ ಕಾಯ್ದು ಕೊಳ್ಳಬೇಕಾಗುತ್ತದೆ. ಟಿಆರ್‌ಪಿಯಿಂದ ಪ್ರೇಕ್ಷರ ಸಂಖ್ಯೆಯನ್ನು ನಿರ್ಣಯಿಸುವುದು ಸರಿಯಲ್ಲ ಎಂದು ಹೇಳಿದರು.

‌ಹಿರಿಯ ಪತ್ರಕರ್ತ ಶ್ರೀಪಾದ ಆಯಾಚಿತ್ ಮತ್ತು ಹಿರಿಯ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರನ್ನು ಸನ್ಮಾನಿಸಲಾಯಿತು. ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೀಡಿಯಾ ಕ್ಲಬ್ ಅಧ್ಯಕ್ಷ ಸಂತೋಷ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು.  ಪತ್ರಕರ್ತರಾದ ಸೋಮರಡ್ಡಿ ಅಳವಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ್‌ ಕರುಗಲ್‌ ನಿರೂಪಿಸಿದರು. ವಿಡಿಯೊ ಜರ್ನಲಿಸ್ಟ್‌ ಮಾರುತಿ ಕಟ್ಟಿಮನಿ ವಂದಿಸಿದರು.

**

ಪ್ರಸ್ತುತ ಛಾಯಾಗ್ರಾಹಕರಿಗೆ ಪ್ರೋತ್ಸಾಹ ಇಲ್ಲವಾಗಿದೆ. ಈ ಕ್ರಮ ಸರಿಯಲ್ಲ. ವರದಿಗಾರರು ವಿಡಿಯೊಗಳನ್ನು ನೋಡಿ, ವರದಿ ಮಾಡಬೇಕು. ಇದರಿಂದ ಇನ್ನು ಹೆಚ್ಚಿನ ವಿಷಯ ಲಭ್ಯವಾಗುತ್ತದೆ
- ಶಿವಕುಮಾರ ಹುಲಿಪುರ, ವಿಡಿಯೊ ಜರ್ನಲಿಸ್ಟ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.