ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಿಗಿ ಸಮಗ್ರ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್: ಸಚಿವ ರಾಮಲಿಂಗಾರೆಡ್ಡಿ

Published 19 ಡಿಸೆಂಬರ್ 2023, 8:09 IST
Last Updated 19 ಡಿಸೆಂಬರ್ 2023, 8:09 IST
ಅಕ್ಷರ ಗಾತ್ರ

ಕೊಪ್ಪಳ: ಲಕ್ಷಾಂತರ ಭಕ್ತರು ಭೇಟಿ ನೀಡುವ ಜಿಲ್ಲೆಯ ಹುಲಿಗಿಯ ಹುಲಿಗೆಮ್ಮ ದೇವಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನಮ್ಮ ಸರ್ಕಾರ ‌ಬದ್ದವಾಗಿದ್ದು, ಮಾಸ್ಟರ್ ಪ್ಲಾನ್ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಮಂಗಳವಾರ ಹುಲಿಗೆಯಲ್ಲಿ ದೇವಿ ದರ್ಶನ ಪಡೆದು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಹುಲಿಗಿಯಲ್ಲಿ ಶೌಚಾಲಯ, ಕುಡಿಯುವ ನೀರು, ಸಿಬ್ಬಂದಿ ಕೊರತೆ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ತ್ವರಿತವಾಗಿ ಈ ಕುರಿತು ಪ್ರಸ್ತಾವ ಕಳಿಸಲು ಸೂಚಿಸಿದ್ದೇನೆ ಎಂದರು.

ತಮ್ಮ ಮಾತಿನ ಆರಂಭದಲ್ಲಿ ಪ್ರಜಾವಾಣಿಯ ಒಳನೋಟದಲ್ಲಿ ಪ್ರಕಟವಾಗಿದ್ದ 'ಭಕ್ತರಿಗಿಲ್ಲ ಮೂಲ ಸೌಕರ್ಯದ ಪ್ರಸಾದ' ವರದಿಯನ್ನು ಸಚಿವರು ಉಲ್ಲೇಖಿಸಿದರು‌.

ವರದಿ ನೋಡಿದಾಗ ಹುಲಿಗಿಯಲ್ಲಿ ಮೂಲ ಸೌಕರ್ಯಗಳ ಕೊರತೆ ಬಗ್ಗೆ ಗೊತ್ತಾಯಿತು. ಆದ್ದರಿಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದರು.

ರಾಜ್ಯದ ಹಲವು ಕಡೆ ಅಭಿವೃದ್ಧಿ ಪ್ರಾಧಿಕಾರ ಮಾಡಿದಂತೆ ಹುಲಿಗಿ ಹಾಗೂ ಅಂಜನಾದ್ರಿ ಅಭಿವೃದ್ದಿ ಪ್ರಾಧಿಕಾರ ಆರಂಭಿಸುವ ಚಿಂತನೆ ನಡೆದಿದೆ ಎಂದು ತಿಳಿಸಿದರು.

ಹುಲಿಗಿ ದೇವಸ್ಥಾನಕ್ಕೆ ಅನುದಾನದ ಕೊರತೆಯಿಲ್ಲ. ದೇವಸ್ಥಾನದ ಖಾತೆಯಲ್ಲಿಯೇ ಕೋಟ್ಯಂತರ ರುಪಾಯಿ ಹಣವಿದೆ. ಮೂಲ ಸೌಕರ್ಯ ಕಲ್ಪಿಸಲು ಆದಷ್ಟು ಬೇಗನೆ ಕ್ರಮ ಕೈಗೊಳ್ಳಲಾಗುವುದು. ಮಾಸ್ಟರ್ ಪ್ಲಾನ್ ಯೋಜನೆಯಂತೆ ಎರಡು ವರ್ಷಗಳಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಲಾಗುವುದು ಎಂದು ಹೇಳಿದರು.

ದೇವಿ ದರ್ಶನ: ರಾಮಲಿಂಗಾರೆಡ್ಡಿ, ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ದೇವಿ ದರ್ಶನ ಪಡೆದರು. ಪುರೋಹಿತರಾದ ಗೋಪಾಲಕೃಷ್ಣ ಜೋಶಿ, ಶ್ರೀನಿವಾಸ ಶರ್ಮಾ ಮತ್ತು ನಾಗರಾಜ ಭಟ್ ವಿಶೇಷ ಪೂಜೆ ನೆರವೇರಿಸಿದರು‌.

ಮುಜರಾಯಿ ಇಲಾಖೆಯ ಆಯುಕ್ತ ಬಸವರಾಜೇಂದ್ರ ಎಚ್., ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಮುಖಂಡರಾದ ಬಸವರಾಜ ಹಿಟ್ನಾಳ, ಕೊಪ್ಪಳ ತಹಶೀಲ್ದಾರ್ ವಿಠ್ಠಲ್ ಚೌಗಲಾ, ದೇವಾಲಯದ ಆಡಳಿತಾಧಿಕಾರಿ ಅರವಿಂದ ಸುತಗುಂಡಿ, ತಾಲ್ಲೂಕು ಪಂಚಾಯಿತಿ ಇಒ ದುಂಡಪ್ಪ ತುರಾದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT