ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಕೊರತೆ: ಬಾಡುತ್ತಿರುವ ಬೆಳೆ

ಕಾಫಿ ಕೃಷಿಗೆ ಮಳೆಯ ಕೊರತೆ- ಬೆಳೆಗಾರ ಕಂಗಾಲು, ಬೆಂಕಿಗೆ ಸಿಲುಕಿದ ಪೇರೂರಿನ ತೋಟಗಳು
Last Updated 16 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ನಾಪೋಕ್ಲು: ಬೇಸಿಗೆ ಬಂತೆಂದರೆ ಎಲ್ಲೆಲ್ಲೂ ನೀರಿಗೆ ತತ್ವಾರ. ನೀರು ಬೇಕು ಎನ್ನುವ ಕೂಗು ಪಟ್ಟಣಗಳಲ್ಲಿ ಮಾತ್ರವಲ್ಲ. ಗ್ರಾಮಗಳಲ್ಲೂ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ ಈಚಿನ ವರ್ಷಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ. ಕೃಷಿಗಾಗಿಯೂ ನೀರಿನ ಅವಲಂಬನೆ ಹೆಚ್ಚಿದೆ. ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಕಾಫಿ- ಕಾಳುಮೆಣಸು ಕೃಷಿ ಪ್ರಮುಖವಾಗಿದ್ದು ಹೆಚ್ಚಿನ ಬೆಳೆಗಾರರು ಇಳುವರಿಗಾಗಿ ಮಳೆಯನ್ನೇ ಅವಲಂಬಿಸಿದ್ದಾರೆ. ಈ ವರ್ಷ ಫೆಬ್ರುವರಿ ಮೊದಲ ವಾರ ಮಳೆ ಸುರಿದಿದ್ದು ಮತ್ತೆ ಒಂದು ತಿಂಗಳ ಬಳಿಕ ಅಲ್ಪಮಳೆ ಸುರಿದಿದೆ.

ಸುಮಾರು ಒಂದು ತಿಂಗಳು ಮಳೆ ಸುರಿಯದೇ ಕಾಫಿಯ ಇಳುವರಿಗಾಗಿ ಸಾಕಷ್ಟು ನೀರು ಹಾಯಿಸುವ ಯತ್ನವನ್ನು ಬೆಳೆಗಾರರು ಮಾಡಿದ್ದಾರೆ. ಪ್ರಮುಖ ವಾಣಿಜ್ಯ ಬೆಳೆಯಾದ ಕಾಫಿಗೆ ಹೂಮಳೆ ಅನಿವಾರ್ಯ. ಕೆಲವು ಭಾಗಗಳನ್ನು ಹೊರತುಪಡಿಸಿದರೆ ಹಲವೆಡೆ ಮಳೆಯಾಗಿಲ್ಲ.

ಕಾವೇರಿ ಹರಿವಿನ ತಾಣಗಳಲ್ಲಿ ಭಾಗಮಂಡಲದಿಂದ ಆರಂಭಿಸಿ ಉದ್ದಕ್ಕೂ ನದಿಯಿಂದ ಕೃಷಿ ಪಂಪ್‌ಗಳ ಮೂಲಕ ನೀರನ್ನು ತೋಟಕ್ಕೆ ಹಾಯಿಸುವತ್ತ ಬೆಳೆಗಾರರು ಮಗ್ನರಾಗಿದ್ದಾರೆ. ಕಾಫಿ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ತಪ್ಪಿಸುವುದಕ್ಕಾಗಿ ಹಣ ಹಾಗೂ ಶ್ರಮವನ್ನು ವ್ಯಯಿಸುತ್ತಿದ್ದಾರೆ.

ದೊಡ್ಡ ಹಿಡುವಳಿದಾರರು ಸ್ಪ್ರಿಂಕ್ಲರ್ ಬಳಸಿ ಕಾಫಿಗೆ ನೀರು ಹನಿಸಿದ್ದರೆ ಸಣ್ಣ ಬೆಳೆಗಾರರಿಗೆ ಕೆರೆ ನದಿಗಳಲ್ಲಿ ನೀರಿಲ್ಲದೇ ಪರಿತಪಿಸುವ ಸ್ಥಿತಿ ಉಂಟಾಗಿದೆ. ನೀರಿಲ್ಲದೇ ಕಾಫಿಯ ಮೊಗ್ಗು ಹೂವಾಗುವುದಿಲ್ಲ. ಬೆಳೆಯೂ ಬರುವುದಿಲ್ಲ. ಅಂತೆಯೇ ಕಾವೇರಿ ನೀರಿಗಾಗಿ ಅಲ್ಲಲ್ಲಿ ಬೆಳೆಗಾರರ ನಡುವೆ ತಾಕಲಾಟವೂ ಕಂಡುಬಂದಿದೆ. ಕೃಷಿಯನ್ನೇ ನೆಚ್ಚಿ ಬದುಕುವ ಮಂದಿ ಕಾಫಿಯ ಫಸಲಿಗಾಗಿ ಕಾವೇರಿ ನದಿಯನ್ನು ಅವಲಂಬಿಸಿದ್ದು ನೀರಿನ ಬಳಕೆಯಿಂದ ಕೊಟ್ಟಮುಡಿ, ಕಕ್ಕಬ್ಬೆ, ಬಲಮುರಿ, ಬೇತು ಮತ್ತಿತರ ಭಾಗಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಕೆರೆ– ತೋಡುಗಳಲ್ಲಿನ ನೀರು ಕೃಷಿಗೆ ಸಾಕಾಗುತ್ತಿಲ್ಲ ಎಂಬುದು ಬೆಳೆಗಾರರ ಅಳಲು.

ನೀರಿನ ಬಳಕೆ ಹೆಚ್ಚಿದಂತೆ ನದಿಯಲ್ಲಿ ಹರಿಯುವ ನೀರು ಕಡಿಮೆಯಾಗುತ್ತಿದೆ. ಹೆಚ್ಚುತ್ತಿರುವ ನಗರೀಕರಣದಿಂದ ಕಾವೇರಿ ನದಿಯ ನೀರು ತನ್ನತನ ಕಳೆದುಕೊಳ್ಳುತ್ತಿದೆ. ನಾಪೋಕ್ಲುವಿನಂತಹ ಪುಟ್ಟ ಪಟ್ಟಣದಲ್ಲೂ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು ತ್ಯಾಜ್ಯವೆಲ್ಲಾ ಕಾವೇರಿ ನದಿಯನ್ನು ಸೇರುತ್ತಿದೆ.

ನಾಪೋಕ್ಲು ಪಟ್ಟಣ ಪ್ರವೇಶಿಸುವಲ್ಲಿಯೇ ಕಾವೇರಿ ನದಿ ನೀರು ಹರಿಯುತ್ತಿದ್ದು ಪಟ್ಟಣದ ತ್ಯಾಜ್ಯಗಳನ್ನು ನೀರಿಗೆ ಸುರಿಯುತ್ತಿರುವುದರಿಂದ ನೀರು ಕಲುಷಿತಗೊಳ್ಳುತ್ತಿದೆ.

ಕಾಡಿಗೆ, ತೋಟಕ್ಕೆ ಬೆಂಕಿ: ಸುಡು ಬಿಸಿಲು ಗ್ರಾಮೀಣ ಜನರನ್ನು ಕಾಡುತ್ತಿದೆ. ಈಚೆಗೆ ಪೇರೂರು ಗ್ರಾಮ ವ್ಯಾಪ್ತಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕಾಫಿಯ ತೋಟಗಳು ಬೆಂಕಿಗೆ ಆಹುತಿಯಾದ ಘಟನೆ ಮಾಸುವ ಮುನ್ನ ಮತ್ತೆ ಪೇರೂರು ಬೆಟ್ಟದಲ್ಲಿ ಬೆಂಕಿ ವ್ಯಾಪಿಸಿದೆ. ಹಲವು ಕಾಫಿ ಬೆಳೆಗಾರರ ತೋಟಗಳು ಬೆಂಕಿಯಿಂದಾಗಿ ನಾಶವಾಗಿವೆ. ಒಂದೆಡೆ ಮಳೆಯಿಲ್ಲದೇ ತೋಟಗಳು ಸೊರಗಿದರೆ ಮತ್ತೊಂದೆಡೆ ಪೇರೂರು ಗ್ರಾಮದ ತೋಟಗಳು ಬೆಂಕಿ ಆಕಸ್ಮಿಕಕ್ಕೆ ಸಿಲುಕಿ ಸುಟ್ಟು ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT