ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ವರ್ಷದ ಕೊನೆಯ ಸೂರ್ಯಾಸ್ತದ ಪುಳಕ

Published 1 ಜನವರಿ 2024, 5:46 IST
Last Updated 1 ಜನವರಿ 2024, 5:46 IST
ಅಕ್ಷರ ಗಾತ್ರ

ಕೊಪ್ಪಳ: ಜನ ನಿತ್ಯ ಸೂರ್ಯೋದಯ ಹಾಗೂ ಸೂರ್ಯಾಸ್ತದ ಕ್ಷಣಗಳನ್ನು ಕಣ್ತುಂಬಿಕೊಂಡರೂ ಅವರಲ್ಲಿ ಭಾನುವಾರ ಅದೇನೋ ವಿಶೇಷ ಸಂಭ್ರಮ.

ವರ್ಷದ ಕೊನೆಯ ದಿನ ಸೂರ್ಯ ಉದಯಿಸುವ ಮತ್ತು ಅಸ್ತಮಿಸುವ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಬೇಕು ಎನ್ನುವ ಕಾತರ. ಇದಕ್ಕಾಗಿ ಬೆಳಿಗ್ಗೆಯೇ ಸಾಕಷ್ಟು ಜನ ಸೂರ್ಯ ಅರಳುವುದನ್ನೇ ಕಾದು ತಮ್ಮ ಮೊಬೈಲ್‌ಗಳಲ್ಲಿ ಆ ಕ್ಷಣಗಳನ್ನು ದಾಖಲಿಸಿಕೊಳ್ಳುತ್ತಿದ್ದರು. ವಾರದ ರಜೆಯ ದಿನವೂ ಆಗಿದ್ದರಿಂದ ಸೂರ್ಯಾಸ್ತದ ಕೆಂಬಣ್ಣದ ಹೊಳಪುಗಳನ್ನು ಅನೇಕರು ಮೊಬೈಲ್‌ಗಳಲ್ಲಿ ಸೆರೆ ಹಿಡಿದರು.

ನಗರದ ಜಿಲ್ಲಾ ಕ್ರೀಡಾಂಗಣ, ಕೊಪ್ಪಳ ತಾಲ್ಲೂಕಿನ ಗಿಣಿಗೇರಾದ ಕೆರೆದಡ, ಗವಿಮಠದ ಗುಡ್ಡದ ಮೇಲಿನ ಜಾಗ, ಮಳೆ ಮಲ್ಲೇಶ್ವರ ಬೆಟ್ಟ ಹೀಗೆ ಎತ್ತರದ ಹಲವು ಸ್ಥಳಗಳಲ್ಲಿ ನಿಂತುಕೊಂಡು ಸೂರ್ಯ ಅಸ್ತಮಿಸುವ ಚಿತ್ರಗಳನ್ನು ಕಣ್ತುಂಬಿಕೊಂಡರು. ಕೆರೆಯ ದಡದಲ್ಲಿ ಸೂರ್ಯ ಹೊಂಬಣ್ಣವನ್ನು ಸೂಸುತ್ತಾ, ಕೆರೆಯ ನೀರಿನ ಮೇಲೆ ಬಂಗಾರದ ವರ್ಣಗಳ ಚಿತ್ತಾರ ಅರಳಿಸುವ ಸುಂದರ ಚಿತ್ರಗಳನ್ನು ಜನ ಸಂಭ್ರಮಿಸಿದರು.

ಅನೇಕ ನೋವು ನಲಿವುಗಳಿಗೆ ಸಾಕ್ಷಿಯಾದ 2023ಕ್ಕೆ ಸಂಭ್ರಮದಿಂದಲೇ ವಿದಾಯ ಹೇಳಿ ಹೊಸ ವರ್ಷ 2024 ಸ್ವಾಗತಿಸಿಕೊಳ್ಳಲು ಜನ ಬೆಳಿಗ್ಗೆಯಿಂದಲೇ ತಯಾರಿ ಮಾಡಿಕೊಂಡಿದ್ದರು. ಕೊಪ್ಪಳ ತಾಲ್ಲೂಕು ವ್ಯಾಪ್ತಿಯ ಹಲವು ಗ್ರಾಮಗಳು, ಸಾಣಾಪುರ, ಆನೆಗೊಂದಿ, ಅಂಜನಾದ್ರಿ ಸೇರಿದಂತೆ ಅಲ್ಲಿನ ಸುತ್ತಮುತ್ತಲಿನ ಸ್ಥಳಗಳಲ್ಲಿ ರೆಸಾರ್ಟ್‌ಗಳಲ್ಲಿ ವಿದ್ಯುತ್‌ ದೀಪಗಳು ಝಗಮಗಿಸುತ್ತಿದ್ದವು. ಅನೇಕ ವಿದೇಶಿ ಪ್ರವಾಸಿಗಳು ಪ್ರಕೃತಿ ಮಡಿಲಿನ ಸೌಂದರ್ಯದ ನಡುವೆ ಮತ್ತೊಂದು ಹೊಸ ವರ್ಷ ಬರಮಾಡಿಕೊಂಡರು.

ಕೇಕ್‌ ಭರಾಟೆ; ಜನರ ಆಸೆ ಹಾಗೂ ನಿರೀಕ್ಷೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಮಳಿಗೆಗಳು ಅಲಂಕೃತಗೊಂಡಿದ್ದವು. ಬೇಕರಿಗಳಿಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಿದ್ದರಿಂದ ಅವುಗಳು ಆಕರ್ಷಕವಾಗಿ ಕಾಣುತ್ತಿದ್ದವು. ಬ್ರೆಡ್‌ನ ಕೇಕ್‌ಗಳು ಪ್ರತಿ ಕೆ.ಜಿ.ಗೆ ₹300 ಹಾಗೂ ಪೇಷ್ಟ್ರ್ತಿ ಕೇಕ್‌ಗೆ ಪ್ರತಿ ಕೆ.ಜಿಗೆ. ₹600ರಿಂದ ₹700 ತನಕ ದರ ನಿಗದಿ ಮಾಡಲಾಗಿತ್ತು. ಸಾಮಾನ್ಯ ದಿನಗಳಲ್ಲಿ ಇರುವಷ್ಟೇ ಬೆಲೆ ಇದ್ದ ಕಾರಣ ಕೇಕ್‌ಗಳ ಮಾರಾಟವೂ ಜೋರಾಗಿತ್ತು.

ಇಲ್ಲಿನ ಲೇಬರ್‌ ವೃತ್ತದ ಬಳಿಯಿರುವ ಬೆಂಗಳೂರು ಬೇಕರಿಯಲ್ಲಿ ಗ್ರಾಹಕರಿಗೆ ಕೇಕ್‌ ನೀಡುವಲ್ಲಿ ನಿರತರಾಗಿದ್ದ ಸಿಬ್ಬಂದಿಯೊಬ್ಬರನ್ನು ಮಾತನಾಡಿಸಿದಾಗ  ’ಬಹಳ ಬ್ಯುಸಿ ಸರ್, ನಿಮಗೆ ಏನು ಬೇಕು ಬೇಗ ಹೇಳಿ’ ಎಂದರು. ಸಾಮಾನ್ಯ ದಿನಗಳಲ್ಲಿ ದಿನಕ್ಕೆ 50 ಕೇಕ್‌ಗಳು ಮಾರಾಟವಾದರೆ ಅದೇ ಹೆಚ್ಚು ಎನ್ನುವ ಪರಿಸ್ಥಿತಿಯಿತ್ತು. ಆದರೆ, ಭಾನುವಾರ ಒಂದೇ ದಿನ ಒಂದು ಸಾವಿರಕ್ಕೂ ಹೆಚ್ಚು ಕೇಕ್‌ಗಳನ್ನು ಮಾರಾಟ ಮಾಡಿದ್ದೇನೆ ಎಂದು ಅವರು ಹೇಳಿದರು.

ಅನೇಕರು ಸ್ನೇಹಿತರ ಜೊತೆಗೂಡಿ ಹೊಸ ವರ್ಷ ಸ್ವಾಗತಿಸಿದರೆ, ಇನ್ನೂ ಕೆಲವರು ಕುಟುಂಬ ಸದಸ್ಯರ ಜೊತೆಗಿದ್ದು ಕೇಕ್‌ ಕತ್ತರಿಸಿದರು. ಅನೇಕರು ತಮ್ಮ ಬಡಾವಣೆಗಳಲ್ಲಿ ಹಾಡು, ನೃತ್ಯ, ಸಂಗೀತದ ಮೂಲಕ ಹೊಸ ವರ್ಷದ ಪ್ರವೇಶದ ಸಮಯಕ್ಕೆ ಕಾದರು. ಆ ಸಮಯ ಬರುತ್ತಿದ್ದಂತೆ ಕುಣಿದು ಸಂಭ್ರಮಿಸಿದರು. 2024ರ ಹೊಸ ವರ್ಷದ ಮೊದಲ ಸೂರ್ಯೋದಯದ ಸೊಬಗು ಕಣ್ತುಂಬಿಕೊಳ್ಳಲು ಅಣಿಯಾದರು.

ವರ್ಷದ ಕೊನೆಯ ಸೂರ್ಯಾಸ್ತವನ್ನು ಕೈಯಲ್ಲಿ ಹಿಡಿದಿಡುವ ಯುವಕನ ಸಾಹಸ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಹೀಗೆ ಚಿತ್ರ/ಅಮೀನ್‌ ಅತ್ತಾರ್
ವರ್ಷದ ಕೊನೆಯ ಸೂರ್ಯಾಸ್ತವನ್ನು ಕೈಯಲ್ಲಿ ಹಿಡಿದಿಡುವ ಯುವಕನ ಸಾಹಸ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಹೀಗೆ ಚಿತ್ರ/ಅಮೀನ್‌ ಅತ್ತಾರ್
ಕೊಪ್ಪಳದಲ್ಲಿ ಕೇಕ್‌ ಖರೀದಿಯಲ್ಲಿ ತೊಡಗಿದ್ದ ಯುವತಿಯರು
ಕೊಪ್ಪಳದಲ್ಲಿ ಕೇಕ್‌ ಖರೀದಿಯಲ್ಲಿ ತೊಡಗಿದ್ದ ಯುವತಿಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT