ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ವರ್ಷಗಳ ಬಳಿಕ ಗವಿಮಠ ಜಾತ್ರೆಯಲ್ಲಿ ಕುಸ್ತಿ: ಪಟ್ಟು ಹಾಕಲು ಪೈಲ್ವಾನರ ಕಸರತ್ತು

ಆರು ವರ್ಷಗಳ ಬಳಿಕ ಗವಿಮಠ ಜಾತ್ರೆಯಲ್ಲಿ ನಡೆದ ಕುಸ್ತಿಯಲ್ಲಿ ಭಾರಿ ಪೈಪೋಟಿ
Published 28 ಜನವರಿ 2024, 15:55 IST
Last Updated 28 ಜನವರಿ 2024, 15:55 IST
ಅಕ್ಷರ ಗಾತ್ರ

ಕೊಪ್ಪಳ: ಒಂದೆಡೆ ಕುಸ್ತಿ ಸಂಭ್ರಮ, ಇನ್ನೊಂದೆಡೆ ಜನರ ಕೂಗಾಡ, ಚೀರಾಟ. ನಮ್ಮವರೇ ಗೆಲ್ಲಬೇಕು ಎನ್ನುವ ಹಾರೈಕೆ. ನಿಲ್ಲಲು ಜಾಗವಿಲ್ಲದಿದ್ದರೂ ಅಕ್ಕಪಕ್ಕದವರ ಜೊತೆ ನಿಂತು ಹೇಗಾದರೂ ಮಾಡಿ ಕುಸ್ತಿ ನೋಡಬೇಕು ಎನ್ನುವ ಕಾತರ ಅವರಲ್ಲಿ.

ಇದು ಕೊಪ್ಪಳದ ಗವಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ಅರು ವರ್ಷಗಳ ಬಳಿಕ ಹಮ್ಮಿಕೊಂಡಿದ್ದ ಜಂಗೀ ನಿಕಾಲಿ ಕುಸ್ತಿ ಸ್ಪರ್ಧೆಯಲ್ಲಿ ಕಂಡು ಬಂದ ಚಿತ್ರಣ. ಮಠದ ಆವರಣದಲ್ಲಿ ಭಾನುವಾರ ನಡೆದ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ಸ್ಪರ್ಧಿಗಳು ಪಟ್ಟು ಹಾಕಲು ಭಾರಿ ಪೈಪೋಟಿ ನಡೆಸಿದರೆ ಕೆಲ ಪಂದ್ಯಗಳು ನೀರಸವಾಗಿ ಸಮಬಲದ ಪೈಪೋಟಿಯಲ್ಲಿ ಅಂತ್ಯ ಕಂಡವು. 

ಪುರುಷರ ವಿಭಾಗದಲ್ಲಿ 22 ಹಾಗೂ ಮಹಿಳಾ ವಿಭಾಗದಲ್ಲಿ ನಾಲ್ಕು ಜೋಡಿ ಕುಸ್ತಿ ಅಖಾಡದಲ್ಲಿ ಪಟ್ಟು ಹಾಗೂ ಮರು ಪಟ್ಟು ಹಾಕಿದರು. ಪೈಲ್ವಾನರು ಮಣ್ಣಿನ ಅಖಾಡದಲ್ಲಿ ಕುಸ್ತಿ ಆಡುತ್ತಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕ್ರೀಡಾ ಅಭಿಮಾನಿಗಳು ಆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದರು. ಜನಸಂದಣಿ ನಿಯಂತ್ರಿಸಲು ಪೊಲೀಸರು ಸುತ್ತಲೂ ಬ್ಯಾರಿಕೇಡ್ ಹಾಕಿದ್ದರೂ ಅದನ್ನು ತಳ್ಳಿ ಒಳಗೆ ಬರಲು ಕುಸ್ತಿ ನಡೆಸುತ್ತಿದ್ದರು. ಸ್ಪರ್ಧಿ ಎದುರಾಳಿಯ ಎದುರು ಪಟ್ಟು ಹಾಕಿ ಕೊರಳಲ್ಲಿ ವಿಜಯದ ಹೂಮಾಲೆ ಧರಿಸಿದಾಗ ಜನರಲ್ಲಿ ಹರ್ಷೋದ್ಗಾರ ಕಂಡು ಬಂತು.

ಗವಿಮಠ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘದ ಸಹಯೋಗದಲ್ಲಿ ನಡೆದ ಸ್ಪರ್ಧೆಯನ್ನು ಅಂತರರಾಷ್ಟ್ರೀಯ ಕುಸ್ತಿಪಟು ಗದಗಿನ ಪ್ರೇಮಾ ಹುಚ್ಚಣ್ಣನವರ ಉದ್ಘಾಟಿಸಿ ಮಾತನಾಡಿ ‘ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಕ್ರೀಡೆಗಳು ಪ್ರೇರಣೆ ನೀಡುತ್ತವೆ. ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯಿಂದಾಗಿ ಅಂಚೆ ಇಲಾಖೆಯಲ್ಲಿ ನೌಕರಿ ಗಳಿಸಲು ಸಾಧ್ಯವಾಯಿತು’ ಎಂದರು.

ಕಿಡದಾಳದಲ್ಲಿರುವ ಶಾರದಾ ಇಂಟರ್‌ನ್ಯಾಷನಲ್‌ ವಿದ್ಯಾಸಂಸ್ಥೆಯ ಮುಖ್ಯಸ್ ಬಿ.ಆರ್.ಪಾಟೀಲ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ನಿರ್ಣಾಯಕರಾಗಿದ್ದ ಕೊಪ್ಪಳದ ಭೀಮಸಿ ಗಾಳಿ, ಮುಸ್ತಫಾ ಚಪರಾಸಿ, ಮುಸ್ತಫಾ ಬಡೇಘರ, ಗಿರೀಶ, ಮರಿಯಪ್ಪ ಬೆಲ್ಲದ, ಕಂಪ್ಲಿಯ ಶಬ್ಬೀರ್ ಪೈಲ್ವಾನ್, ಕುಸ್ತಿ ತರಬೇತುದಾರರಾದ ಹನುಮಂತ ಪಾಟೀಲ, ಕಾಡೇಶ ನ್ಯಾಮಗೌಡ, ತುಕಾರಾಮ ಹಳಿಯಾಳ, ಈಶಪ್ಪ ದೊಡ್ಡಮನಿ, ವಿನೋದ ಮುದಿಬಸನಗೌಡರ, ಸಾಧಿಕ್ ಅಲಿ ದಫೇದಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಗವಿಮಠದ ಜಾತ್ರೆಯಲ್ಲಿ ಭಾನುವಾರ ನಡೆದ ಕುಸ್ತಿ ಸ್ಪರ್ಧೆಯ ನೋಟ 
ಗವಿಮಠದ ಜಾತ್ರೆಯಲ್ಲಿ ಭಾನುವಾರ ನಡೆದ ಕುಸ್ತಿ ಸ್ಪರ್ಧೆಯ ನೋಟ 
ಗವಿಮಠದ ಸ್ವಾಮೀಜಿಯ ಸಹಕಾರದಿಂದ ಜಾತ್ರೆಯಲ್ಲಿ ಉತ್ತಮ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಯಿತು. ಇದು ಜಿಲ್ಲೆಯಲ್ಲಿ ಮುಂದೆ ಕುಸ್ತಿ ಬೆಳವಣಿಗೆಗೆ ಅನುಕೂಲವಾಗಲಿದೆ.
ವಿಠ್ಠಲ ಜಾಬಗೌಡರ ಸಹಾಯಕ ನಿರ್ದೇಶಕ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ

ಕುಸ್ತಿ ಸ್ಪರ್ಧೆಯ ವಿಜೇತರು

ಪುರುಷರ ವಿಭಾಗದಲ್ಲಿ ಕೊಪ್ಪಳ ನಾಗರಾಜ ದೊಡ್ಡಮನಿ ಲಕ್ಕುಂಡಿಯ ಸುನೀಲ್ ಮಂಜು ದಾವಣಗೆರೆಯ ಪ್ರಜ್ವಲ್ ದಾದಾಪೀರ್ ಲಕ್ಕುಂಡಿಯ ಪರಶುರಾಮ ಪುಣೆಯ ರೂಪೇಶ್ ಪವಾರ್ ದಾವಣಗೆರೆಯ ಸಂತೋಷಆಕಾಶ್ ಮುಬಾರಕ್ ಮರಮನಹಳ್ಳಿಯ ಅಬಿ  ಹರಪನಹಳ್ಳಿಯ ಕೆಂಚಪ್ಪ ಮರಿಯಮ್ಮನಹಳ್ಳಿಯ ಹನುಮಂತ ಅಥಣಿಯ ಮಹೇಶ್ ಕುಮಾರ್ ಲಂಗೋಟಿ ಗೆಲುವು ಸಾಧಿಸಿದರು. ಮಹಿಳಾ ವಿಭಾಗದಲ್ಲಿ ಮುಧೋಳದ ವಿದ್ಯಾಶ್ರೀ ಗೆನೆನವರ ಕೊಲ್ಹಾಪುರದ ಸುನಿತಾ ಮಗದುಮ್ ಪುಣೆಯ ವೈಷ್ಣವಿ ಗೆಲುವಿನ ‘ಪಟ್ಟು’ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT