ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ: ಗಣೇಶ ವಿಸರ್ಜನೆ ‌ಮೆರವಣಿಗೆ ವೇಳೆ ಮಸೀದಿ ಎದುರು ಪೂಜೆಗೆ ಆಕ್ಷೇಪ

Published 4 ಅಕ್ಟೋಬರ್ 2023, 15:32 IST
Last Updated 4 ಅಕ್ಟೋಬರ್ 2023, 15:32 IST
ಅಕ್ಷರ ಗಾತ್ರ

ಗಂಗಾವತಿ (ಕೊಪ್ಪಳ ಜಿಲ್ಲೆ): ಇಲ್ಲಿನ ಎಂ.ಜಿ. ರಸ್ತೆಯಲ್ಲಿರುವ ಜಾಮಿಯಾ ಮಸೀದಿ ಮುಂಭಾಗ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮಂಗಳವಾರ ರಾತ್ರಿ ಕೆಲವರು ಕುಂಡದಲ್ಲಿ ಬೆಂಕಿಹಚ್ಚಿ, ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಇದಕ್ಕೆ ಮುಸ್ಲಿಂ ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದು, ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮೆರವಣಿಗೆ ಮಸೀದಿ ಬಳಿ ಬರುತ್ತಿದ್ದಂತೆ ವೀರಗಾಸೆ ಪುರವಂತಿಕೆ ತಂಡದವರು ಸಂಪ್ರದಾಯ ಪಾಲನೆ ಗಲಾಟೆಗೆ ಕಾರಣವಾಯಿತು. ಸಂಪ್ರದಾಯದಂತೆ ಸುಣ್ಣದಿಂದ ಷಟ್‌ಸ್ಥಲ ನಿರ್ಮಿಸಿ ಕಾರ್ಯಕ್ರಮಕ್ಕೆ ಮುಂದಾಗಿದ್ದರು. ಮಸೀದಿ ಮುಂದೆ ಈ ರೀತಿಯ ಹಿಂದೂ ಧಾರ್ಮಿಕ ಆಚರಣೆ ಸರಿಯಲ್ಲ ಎಂದು ಕೆಲ ಮುಸ್ಲಿಮರು ಹೇಳಿದರು.

ಕಳೆದ ವಾರ ಹಿಂದೂ ಮಹಾಮಂಡಳಿ ಗಣೇಶ ವಿಸರ್ಜನೆ ವೇಳೆ ಕೆಲ ರೌಡಿಶೀಟರ್‌ಗಳು ಜಾಮಿಯಾ ಮಸೀದಿ ಎದುರಿಗೆ ಮಂಗಳಾರತಿ ಮಾಡಿ, ಗಂಗಾಧರೇಶ್ವರ ಮಹಾರಾಜ ಕೀ ಜೈ ಎಂದು ಘೋಷಣೆಗಳು ಕೂಗಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಘಟನೆಗೆ ಸಂಬಂಧಿಸಿ ಐದು ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಅದರ ಬೆನ್ನಲ್ಲೇ ಈಗ ಮಸೀದಿ ಮುಂಭಾಗದಲ್ಲಿ ಪೂಜೆ ಸಲ್ಲಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಸೀದಿ ಮುಂದೆ ಪೂಜೆ ಸಲ್ಲಿಸುತ್ತಿದ್ದಾಗ ಸ್ಥಳದಲ್ಲಿದ್ದ ಪೊಲೀಸರು ನೀರು ಹಾಕಿ ಸುಣ್ಣ ಅಳಿಸಿ ಹಾಕಿದ್ದರು. ಡಿ.ಜೆ. ಮೂಲಕ ನಡೆಯುತ್ತಿದ್ದ ಮೆರವಣಿಗೆ ಬಂದ್‌ ಮಾಡಿಸಿ ಮಸೀದಿಯಿಂದ ಮುಂದಕ್ಕೆ ಮೆರವಣಿಗೆ ಕಳುಹಿಸಿದ್ದರು.

ಮಸೀದಿ ಮುಂದೆ ಪೂಜೆ ಸಲ್ಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಸ್ಲಿಂ ಸಮುದಾಯದ ಮುಖಂಡರು ಹಲವರು ಉದ್ದೇಶ ಪೂರ್ವಕವಾಗಿ, ಕೋಮುಗಲಭೆ ಸೃಷ್ಟಿಸಲು ಪೂಜೆ ಮಾಡಿದ್ದಾರೆ. ಈಗಿನ ಘಟನೆ ಮತ್ತು ಮಸೀದಿ ಎದುರು ಮಂಗಳಾರತಿ ಮಾಡಿದ ಘಟನೆಯ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ನಗರ ಪೊಲೀಸ್‌ ಠಾಣೆಗೆ ಬಂದು ಇಲಾಖೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು. ಆಗ ಪೊಲೀಸರು ಮುಸ್ಲಿಂ ಸಮುದಾಯದ ಹಿರಿಯರ ಜೊತೆ ಚರ್ಚಿಸಿ ಇನ್ನು ಮುಂದೆ ಈ ರೀತಿಯ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿ ಮನವೊಲಿಸಿದರು.

ಗಲಾಟೆಯಾಗದಂತೆ ಎಚ್ಚರಿಕೆ ವಹಿಸಲು ಘಟನಾ ಸ್ಥಳಕ್ಕೆ ತಹಶೀಲ್ದಾರ್‌ ಮಂಜುನಾಥ, ನಗರಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಡಿವೇಶ, ಗ್ರಾಮೀಣ ಠಾಣೆ ಪಿಐ ಮಂಜುನಾಥ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಸೇರಿದಂತೆ ಅನೇಕರು ಮೊಕ್ಕಾಂ ಹೂಡಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಕೂಡ ಸ್ಥಳದಲ್ಲಿಯೇ ಬಂದೋಬಸ್ತ್‌ ಉಸ್ತುವಾರಿ ವಹಿಸಿದ್ದರು.

ಪೆಟ್ರೋಲಿಂಗ್: ಮಸೀದಿ ಮುಂಭಾಗ ಯಾವುದೇ ಅಹಿತಕರ ಘಟನೆ, ಜಗಳ ನಡೆಯದಂತೆ ಪೊಲೀಸ್ ಅಧಿಕಾರಿಗಳು ಪೆಟ್ರೋಲಿಂಗ್ ನಡೆಸಿ, ಜನರು ಗುಂಪಾಗಿ ತಿರುಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಅನ್ಸಾರಿ ಭೇಟಿ: ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಸ್ಥಳಕ್ಕೆ ಭೇಟಿ ನೀಡಿ ‘ಹಬ್ಬ ಆಚರಣೆಗಳು ನಡೆಯಲಿ. ಅವು ಕೋಮುಗಲಭೆ ಸೃಷ್ಟಿಸುವ ರೀತಿಯಲ್ಲಿರಬಾರದು. ಕೂಡಲೇ ಪರಿಸ್ಥಿತಿ ತಿಳಿಗೊಳಿಸಿ ಶಾಂತಿ ಕಾಪಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರವೂ ಪ್ರಮುಖ ಮೂರು ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಇದ್ದ ಕಾರಣ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಹಿತಕರ ಘಟನೆ ನಡೆದಯಂತೆ ಎಚ್ಚರಿಕೆ ವಹಿಸಲು ಮಸೀದಿ ಮುಂಭಾಗದಲ್ಲಿ ಕಟ್ಟಿಗೆ ಹಾಗೂ ಬ್ಯಾರಿಕೇಡ್ ಹಾಕಿ ಜನರು ಗುಂಪಾಗಿ ನಿಲ್ಲದಂತೆ ಎಚ್ಚರಿಕೆವಹಿಸಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT