ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಶಾಲೆಗೆ ಸುಣ್ಣಬಣ್ಣ ನೆಪ, ನಕಲಿ ಬಿಲ್‌ ಸೃಷ್ಟಿ

ಶಾಖಾಪುರ ಶಾಲೆ ಹೆಸರು, ತಾ.ಪಂನ ₹4 ಲಕ್ಷ ಅನಿರ್ಬಂಧಿತ ಅನುದಾನ
Published 19 ಮಾರ್ಚ್ 2024, 5:08 IST
Last Updated 19 ಮಾರ್ಚ್ 2024, 5:08 IST
ಅಕ್ಷರ ಗಾತ್ರ

ಕುಷ್ಟಗಿ: ಗ್ರಾಮಸ್ಥರ ಅಭಿಮಾನ ಮತ್ತು ಆರ್ಥಿಕ ದೇಣಿಗೆಯಲ್ಲಿ ತಾಲ್ಲೂಕಿನ ಶಾಖಾಪುರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಗೊಂಡು ಮಾದರಿಯಾಗಿರುವುದು ಒಂದೆಡೆಯಾದರೆ, ಅಭಿವೃದ್ಧಿ ಹೆಸರಿನಲ್ಲಿ ಬೋಗಸ್‌ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರದ ₹4 ಲಕ್ಷ ದುರ್ಬಳಕೆ ಬಿಲ್‌ ಸಿದ್ಧಪಡಿಸಿರುವುದು ಬೆಳಕಿಗೆ ಬಂದಿದೆ.

ಶಾಲೆಯ ಅಭಿವೃದ್ಧಿ, ತಮ್ಮ ಮಕ್ಕಳ ಕಲಿಕೆಗೆ ಪ್ರೋತ್ಸಾಹ ದೊರೆಯಲಿ ಎಂಬ ಕಾರಣಕ್ಕೆ ಗ್ರಾಮಸ್ಥರು ಶಾಲೆಯ ಅಂದ ಹೆಚ್ಚಿಸುವ ಸಲುವಾಗಿ ದೇಣಿಗೆ ನೀಡಿದ್ದಾರೆ. ಊರಿನ ದೈವದ ವತಿಯಿಂದ ₹50 ಸಾವಿರ ಮತ್ತು ಸಾರ್ವಜನಿಕರು ಪ್ರತ್ಯೇಕವಾಗಿ ಅಂದಾಜು ₹80 ಸಾವಿರ ನೀಡಿದ್ದಾರೆ. ಶಿಕ್ಷಕರ ಪರಿಶ್ರಮದಿಂದ ಹಣ ಸದ್ಬಳಕೆಯಾಗಿದ್ದು, ಶಾಲೆಯ ಅಭಿವೃದ್ಧಿಗೆ ಸಮುದಾಯ ಕೈಜೋಡಿಸಿದ್ದರಿಂದ ಜಿಲ್ಲೆಯಲ್ಲಿಯೇ ಮಾದರಿಯಾಗಿದೆ.

ಬೋಗಸ್‌ ಬಿಲ್‌: ಆದರೆ ಇದೇ ಶಾಲೆಯ ಹೆಸರಿನಲ್ಲಿ ತಾಲ್ಲೂಕು ಪಂಚಾಯಿತಿಯಲ್ಲಿ 2023-24ನೇ ವರ್ಷದ ಅನಿರ್ಬಂಧಿತ ಅನುದಾನದಲ್ಲಿ ₹4 ಲಕ್ಷ ಗುಳುಂ ಮಾಡಲು ಪ್ರಯತ್ನಿಸಿರುವುದು ಗೊತ್ತಾಗಿದೆ. ಈಗಾಗಲೇ ಸಿದ್ಧಪಡಿಸಿರುವ ಬಿಲ್‌ ಪಾವತಿಸುವಂತೆ ಅಧಿಕಾರಸ್ಥ ರಾಜಕಾರಣಿಯೊಬ್ಬರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂಬುದನ್ನು ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ. ಅಲ್ಲದೆ ಪತ್ರಿಕೆಗೆ ಲಭ್ಯವಾಗಿರುವ ಅಧಿಕೃತ ಬಿಲ್‌ಗಳ ಪ್ರಕಾರ ಬಾಲಕೃಷ್ಣ ಪರಕಿ ಎಂಬ ಗುತ್ತಿಗೆದಾರನ ಹೆಸರಿನಲ್ಲಿ ಸದ್ಯ ₹3.38 ಲಕ್ಷ ಸಂದಾಯಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಮ್ಮತಿಸಿರುವುದು ಸ್ಪಷ್ಟವಾಗಿದೆ. ಅಷ್ಟೇ ಅಲ್ಲ ಊರಿನವರು ಮಾಡಿದ ಕೆಲಸಕ್ಕೆ ಪಂಚಾಯತ್‌ ರಾಜ್ ಎಂಜಿನಿಯರ್‌ ವಿಭಾಗದ ಎಂಜಿನಿಯರ್‌ಗಳು ಎಂ.ಬಿ ಸಿದ್ಧಪಡಿಸಿ ಬಿಲ್‌ ಪಾವತಿಗೆ ಶಿಫಾರಸು ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಲೆಯ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಲಕ್ಕಲಕಟ್ಟಿ ಮತ್ತು ಎಸ್‌ಡಿಎಂಸಿ ಸದಸ್ಯ ಹನುಮಂತ ಶಿರವಾರ, ‘ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಅಭಿಮಾನದಿಂದ ದೇಣಿಗೆ ನೀಡಿದ್ದಾರೆ. ಸರ್ಕಾರದ ಹಣ ಇದಕ್ಕೆ ಬಂದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇಒ ಹೇಳಿದ್ದು: ಮಾಹಿತಿ ನೀಡಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನಿಂಗಪ್ಪ ಮಸಳಿ, ‘ಪಿಆರ್‌ಡಿ ಇಲಾಖೆ ಏಜೆನ್ಸಿಯಾಗಿದೆ. ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು ಸುಣ್ಣ ಬಣ್ಣ, ಸಣ್ಣಪುಟ್ಟ ದುರಸ್ತಿ ಮಾಡಿದ್ದು ಕಂಡುಬಂದಿದೆ. ಊರಿನವರು ಹಣ ನೀಡಿದ್ದು ಗೊತ್ತಿಲ್ಲ. ಗುತ್ತಿಗೆದಾರ ಕೆಲಸ ನಿರ್ವಹಿಸಿದ್ದಾರೆ ಎಂದೆ ಮುಖ್ಯಶಿಕ್ಷಕ ತಿಳಿಸಿದರು’ ಎಂದರು. ಪರಿಶೀಲಿಸಲು ಪಿಆರ್‌ಡಿಗೆ ಪತ್ರ ಬರೆಯುತ್ತೇವೆ. ಒಂದೊಮ್ಮೆ ಹಣ ದುರ್ಬಳಕೆಯಾಗಿದ್ದರೆ ಮರು ವಸೂಲಿಗೆ ತಾಕೀತು ಮಾಡುವುದಾಗಿ ಸ್ಪಷ್ಟಪಡಿಸಿದರು.

ಶಾಲೆಯ ಏಳಿಗೆಗೆ ಸಮುದಾಯ ಕೈಜೋಡಿಸಿದ್ದು ಜಿಲ್ಲೆಯಲ್ಲೇ ಮಾದರಿಯಾಗಿತ್ತು. ಈಗ ನಕಲಿ ಬಿಲ್‌ ತಯಾರಿಸಿ ಹಣ ದುರ್ಬಳಕೆಗೆ ಯತ್ನಿಸಿರುವುದು ಶಾಲೆಯ ಹೆಸರಿಗೆ ಕೆಲ ವ್ಯಕ್ತಿಗಳು ಕಳಂಕ ತಂದಿದ್ದಾರೆ. -ಹನುಮಂತ ಶಾಖಾಪುರ ಗ್ರಾಮಸ್ಥ

ಶಾಲೆ ಅಭಿವೃದ್ದಿ ಹೆಸರಿನಲ್ಲಿ ಹಣ ದುರ್ಬಳಕೆಯಾಗಿದ್ದರೆ ಮರು ವಸೂಲಿಗೆ ಕ್ರಮ ಕೈಗೊಳ್ಳಲು ಪಿಆರ್‌ಡಿಗೆ ಪತ್ರ ಬರೆಯುತ್ತೇವೆ.

-ನಿಂಗಪ್ಪ ಮಸಳಿ ತಾಲ್ಲೂಕು ಪಂಚಾಯಿತಿ ಇಒ

ಜನರ ಅಭಿಮಾನಕ್ಕೆ ಧಕ್ಕೆ

ಶಾಲೆಯ ಶಿಕ್ಷಕರ ಆಸಕಿ ಪರಿಶ್ರಮ ಮತ್ತು ಸಮುದಾಯದ ಸಹಾಯ ಸಹಕಾರದಿಂದ ಎಲ್ಲ ರೀತಿಯಿಂದಲೂ ಅಭಿವೃದ್ಧಿ ಹೊಂದಿದ ಸರ್ಕಾರಿ ಶಾಲೆ ಜಿಲ್ಲೆಯಲ್ಲಿಯೇ ಮಾದರಿಯಾಗಿ ಗಮನ ಸೆಳೆಯುತ್ತಿದೆ. ಶಾಲೆಯ ಹೊರ ಮತ್ತು ಒಳ ಆವರಣದೊಳಗಿನ ಬಣ್ಣ ಬಣ್ಣದ ಚಿತ್ತಾರದ ಚಿತ್ರಗಳು ಮಕ್ಕಳ ಕಲಿಕೆಗೆ ಪೂರಕವಾಗಿವೆ. ಅಂಥ ವಾತಾವರಣ ಕಲಿಕೆ ಮತ್ತು ಜ್ಞಾನಾರ್ಜನೆಗೆ ಮಕ್ಕಳಲ್ಲಿ ಹೆಚ್ಚು ಆಸಕ್ತಿ ಅರಳಿಸುವಂತಿದೆ. ನಮ್ಮೂರಿನ ಶಾಲೆ ಎಂದೇ ಊರಿನ ಜನ ಅಭಿಮಾನ ಮೆರೆದಿದ್ದಾರೆ. ಕೂಲಿ ದುಡಿಯುವವರಿಂದ ಹಿಡಿದು ಎಲ್ಲ ಜನರೂ ಕೈಲಾದಷ್ಟು ಹಣ ನೀಡಿ ಶಾಲೆಯ ಅಂದ ಹೆಚ್ಚಿಸಲು ಕಾರಣರಾಗಿದ್ದಾರೆ. ಆದರೆ ಕೆಲಸ ಮಾಡದಿದ್ದರೂ ಶಾಲೆಯ ಹೆಸರಿನಲ್ಲಿ ಸರ್ಕಾರದ ಹಣ ಲಪಟಾಯಿಸಿರುವುದು ಜನರ ಅಭಿಮಾನಕ್ಕೆ ಧಕ್ಕೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT