ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಜಿಟಿ,ಜಿಟಿ ಮಳೆ

ಜಡಿಮಳೆಗೆ ಜನಜೀವನ ಅಸ್ತವ್ಯಸ್ತ: ಬೆಳೆಗಳಿಗೂ ಹಾನಿ
Last Updated 19 ಜುಲೈ 2021, 4:20 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಇಡೀ ದಿನ ಮಳೆಯ ಆರ್ಭಟ ಜೋರಾಗಿತ್ತು. ಸಿಡಿಲು, ಗುಡುಗು ಇಲ್ಲದೆ ನಿರಂತರವಾಗಿ ಮಳೆ ಸುರಿಯಿತು.
ಕಾರ್ಮೋಡಗಳು ಬಿಟ್ಟು ಬಿಡದೆ ಮಳೆ ಸುರಿಸುತ್ತಿದ್ದವು. ಸಂಜೆ 4 ರ ನಂತರ ಮೋಡಗಳು ಮತ್ತಷ್ಟು ದಟ್ಟೈಯಿಸಿ ರಭಸದಿಂದ ಮಳೆ ಸುರಿಯಿತು.

ಜಿಲ್ಲೆಯ ಅಳವಂಡಿ ಹೋಬಳಿ, ಕುಕನೂರು, ಯಲಬುರ್ಗಾ, ಕುಷ್ಟಗಿ, ಕಾರಟಗಿ, ಗಂಗಾವತಿ ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯಿತು.

ತುಂಗಭದ್ರಾ ಪಾತ್ರಗಳಲ್ಲಿ ಮಳೆ ಸುರಿಯುತ್ತಿದ್ದು, 50 ಸಾವಿರ ಕ್ಯುಸೆಕ್ ನೀರು ಹರಿದು ಬಂದಿದೆ.

ಜಲಾಶಯದ ವ್ಯಾಪ್ತಿಯಲ್ಲಿ ಪ್ರವಾಹದ ಪರಿಸ್ಥಿತಿ ತಲೆದೋರಿಲ್ಲ. ನದಿಗೆ ನೀರು ಇನ್ನೂ ಬಿಟ್ಟಿಲ್ಲ. ಜಲಾಶಯ ಭರ್ತಿ ಆಗಲು ಇನ್ನೂ 6 ಅಡಿ ಇದೆ. 43 ಟಿಎಂಸಿ ನೀರು ಬಂದರೆ 2 ಲಕ್ಷ ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತದೆ.

ನದಿ ಪಾತ್ರದ ಗ್ರಾಮಗಳಲ್ಲಿ ಎಚ್ಚರಿಕೆ ನೀಡಲಾಗುತ್ತದೆ. ನಿರಂತರ ಜಿಟಿಜಿಟಿ ಮಳೆಯಿಂದ ಕೃಷಿ ಚಟುವಟಿಕೆಗಳು ಬಹುತೇಕ ನಿಂತು ಹೋಗಿವೆ. ಸಜ್ಜೆ, ಶೇಂಗಾ, ಹೆಸರು, ಉದ್ದು ಬೆಳೆಗಳಲ್ಲಿ ಕಸ ಹೆಚ್ಚಾಗಿದ್ದು, ಮಳೆಯಿಂದ ಎಡೆ ಹೊಡೆಯುವುದು ಸೇರಿದಂತೆ ಕಳೆ ತೆಗೆಯುವ ಕಾರ್ಯ ವಿಳಂಬವಾಗಿದೆ.

ಮಳೆಯಿಂದ ಕಾರಟಗಿ ತಾಲ್ಲೂಕಿನ ಮನೆಯ ಚಾವಣಿ ಕುಸಿದಿದ್ದು, ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಶಾಲೆಗೆ ನೀರು ನುಗ್ಗಿದೆ. ಮಳೆಯಿಂದ ಯಾವುದೇ ಜೀವ ಹಾನಿಯಾಗಿಲ್ಲ. ಮಳೆ ಹೀಗೆಯೇ ಮುಂದುವರಿದರೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುವ ಅಪಾಯ ಎದುರಾಗಿದೆ.

ಮನೆಗಳಿಗೆ ಧಕ್ಕೆ

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಹಗಲು ರಾತ್ರಿ ಜಿನುಗು ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಕಳೆದ ಒಂದು ವಾರದಿಂದಲೂ ದಿನ ಬಿಟ್ಟು ದಿನ ನಿರಂತರ ಮಳೆ ಬೀಳುತ್ತಿರುವುದು ಮತ್ತು ಈಗ ಜಿಟಿಜಿಟಿ ಹನಿಯಿಂದಾಗಿ ಮಣ್ಣಿನ ಮನೆಗಳು ನೆನೆದು ಹಾಳಾಗುವ ಸ್ಥಿತಿ ತಲುಪಿದ್ದು ಜನರು ಆತಂಕಗೊಂಡಿದ್ದಾರೆ. ಇನ್ನೂ ಎರಡು ದಿನಗಳವರೆಗೂ ಭಾರಿ ಮಳೆ ಸುರಿಯುವ ಸಾಧ್ಯತೆ ಮತ್ತು ಸುರಕ್ಷತೆ ಕುರಿತು ಹವಾಮಾನ ಇಲಾಖೆ ಹೈ ಅಲರ್ಟ್ ಸಂದೇಶ ನೀಡಿರುವುದು ಮತ್ತಷ್ಟು ಚಿಂತೆಗೀಡು ಮಾಡಿದೆ.

ಶನಿವಾರ ರಾತ್ರಿ ಅನೇಕ ಊರುಗಳಲ್ಲಿ ಮತ್ತು ಭಾನುವಾರ ಬೆಳಿಗ್ಗೆಯಿಂದಲೇ ತಾಲ್ಲೂಕಿನಾದ್ಯಂತ ಜಡಿಮಳೆ ಬೀಳುತ್ತಿದೆ. ವಾರದ ಸಂತೆಯಾಗಿದ್ದರಿಂದ ಪಟ್ಟಣದಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದರು. ಇನ್ನು ಸತತ ಮಳೆಯಿಂದ ವಾತಾವರಣ ಮತ್ತು ಜಮೀನಿನಲ್ಲಿ ತೇವಾಂಶ ಅಧಿಕಗೊಂಡಿ
ರುವುದರಿಂದ ಮುಂಗಾರು ಹಂಗಾಮಿನ ಬೆಳೆಗಳು ಚೇತರಿಸಿಕೊಳ್ಳದಂಥ ಸ್ಥಿತಿ ತಲುಪಿವೆ. ಕೊಯ್ಲಿನ ಹಂತಕ್ಕೆ ಬಂದಿರುವ ಹೆಸರು, ಬೆಳವಣಿಗೆ ಹಂತದಲ್ಲಿರುವ ಸಜ್ಜೆ, ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ, ಬೀಜೋತ್ಪಾದನೆ ಹತ್ತಿ, ತರಕಾರಿ, ಇತರೆ ಬೆಳೆಗಳು ಹಾನಿಗೆ ಒಳಗಾಗುವ ಆತಂಕ ರೈತರದ್ದಾಗಿದೆ. ಮಳೆ ಬಿಡುವು ತೆಗೆದುಕೊಳ್ಳದ ಕಾರಣ ಹೊಲಗಳಲ್ಲಿ ಕಳೆ ವಿಪರೀತವಾಗಿದ್ದು ಅದನ್ನು ನಿಯಂತ್ರಿಸುವುದು ಅಸಾಧ್ಯವಾಗಿದೆ. ಸ್ವಚ್ಛಗೊಳಿಸದಿದ್ದರೆ ಬೆಳವಣಿಗೆ ಕುಂಠಿತಗೊಳ್ಳಲಿದೆ ಎಂದೂ ರೈತರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT