ಸೋಮವಾರ, ಏಪ್ರಿಲ್ 6, 2020
19 °C
ಕುಷ್ಟಗಿ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಸಲಹೆ

ಧರ್ಮಕ್ಕಿಂತ ಹೆಚ್ಚು ದೇಶಪ್ರೇಮಕ್ಕೆ ಆದ್ಯತೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಕರ್ತವ್ಯಗಳನ್ನು ತಿಳಿಯಲು ಗಣರಾಜ್ಯೋತ್ಸವ ಆಚರಿಸುತ್ತೇವೆ. ನಮಗೆ ದೇಶ ಮೊದಲ ಆದ್ಯತೆಯಾಗಬೇಕು ಎಂದು ಶಾಸಕ ಅಮರೇಗೌಡ ಬಯ್ಯಾಪೂರ ಹೇಳಿದರು.

ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 71ನೇ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ರಕ್ಷಣೆಯಿಂದ ಹಿಡಿದು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವವರೆಗೆ ಪ್ರತಿ ವ್ಯವಸ್ಥೆಯನ್ನು ದೇಶ ಮಾಡಿಕೊಟ್ಟಿದೆ. ಹೀಗಿರುವಾಗ ದೇಶ ಚೆನ್ನಾಗಿರಲು ನಾವೇನು ಕೊಡುಗೆ ನೀಡಿದ್ದೇವೆ ಎಂಬುದನ್ನು ಚಿಂತನೆ ಮಾಡಬೇಕು. ದೊಡ್ಡಮಟ್ಟಿನ ದೇಶ ಸೇವೆ ಸಾಧ್ಯವಾಗದಿದ್ದರೂ ನಮ್ಮ ಊರಿನಲ್ಲಿ ಜನರಿಗಾಗಿ ಮಾಡುವ ಸೇವೆಗಳು ದೇಶಕ್ಕಾಗಿ ಮಾಡುವ ಕರ್ತವ್ಯಗಳು ಎಂದು ಅರಿತುಕೊಳ್ಳಬೇಕು ಎಂದರು.

ಮನುಷ್ಯ ಬಾಹ್ಯವಾಗಿ ಪ್ರಗತಿ ಸಾಧಿಸುತ್ತಿದ್ದರೂ ಆಂತರಿಕವಾಗಿ ಕುಬ್ಜನಾಗುತ್ತಿದ್ದಾನೆ. ವಿದ್ಯಾವಂತರೇ ಧರ್ಮ, ಭಾಷೆ, ಇನ್ನಿತರ ಹೆಸರಲ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಭಾಷಾ, ಧರ್ಮ ಪ್ರೇಮಕ್ಕಿಂತ ರಾಷ್ಟ್ರಪ್ರೇಮ ದೊಡ್ಡದು ಎನ್ನುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ರಾಷ್ಟ್ರೀಯ ಹಬ್ಬಗಳು ನಾವು ಆಚರಿಸುವ ಹಬ್ಬ, ಉತ್ಸವಗಳಂತೆ ಸಂಭ್ರಮದಿಂದ ಆಚರಿಸಬೇಕು ಎಂದರು.

ತಹಶೀಲ್ದಾರ್ ಎಂ.ಸಿದ್ದೇಶ ಧ್ವಜಾರೋಹಣ ನೆರವೇರಿಸಿ ಮಾತನಾಡಿ,‘ಏಕತೆ, ಸಮಾನತೆ ಹಾಗೂ ಪ್ರಜಾ ಸತ್ತಾತ್ಮಕ ಮೌಲ್ಯ ಎತ್ತಿ ಹಿಡಿಯಲು ಗಣರಾಜ್ಯ ಸಹಕಾರಿಯಾಗಿದೆ. ಭಾರತೀಯ ರಾಷ್ಟ್ರೀಯತೆ ಸಂಕುಚಿತ ವಾದವಲ್ಲ. ಅದು ವಿಶ್ವಪ್ರಜ್ಞೆಗೆ ಪೂರಕ ಎನ್ನುವುದನ್ನು ಭಾರತೀಯ ಚಿಂತನೆ ತೋರಿಸಿಕೊಟ್ಟಿದೆ. ಇಲ್ಲಿರುವುದು ವೈವಿಧ್ಯತೆಗಳನ್ನು, ಭಿನ್ನರೂಪಗಳನ್ನು ನಿರಾಕರಿಸದ ರಾಷ್ಟ್ರೀಯತೆಯಾಗಿದೆ. ಭಾರತವನ್ನೂ, ವಿಶ್ವವನ್ನೂ ಒಂದೇ ನೆಲೆಯಿಂದ ನಿಂತು ನೋಡಲು ಸಾಧ್ಯವಾಗಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾಂತಮ್ಮ ಪೂಜಾರ, ಕಾರ್ಯ ನಿರ್ವಾಹಕಾಧಿಕಾರಿ ತಿಮ್ಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಬಸಪ್ಪ, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ್, ಪೊಲೀಸ್ ಅಧಿಕಾರಿ ಚಿತ್ತರಂಜನ್‌ ಇದ್ದರು.

ನಾನಾ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸ್ಕೌಟ್ಸ್ ಮತ್ತು ಗೈಡ್ಸ್, ಪೊಲೀಸ್ ಹಾಗೂ ಗೃಹರಕ್ಷಕ ದಳ, ವಿವಿಧ ಶಾಲಾ ಮಕ್ಕಳ ತಂಡಗಳಿಂದ ಆಕರ್ಷಕ ಕವಾಯತು ಪ್ರದರ್ಶಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು