ಕೊಪ್ಪಳ ನಗರಸಭೆ: ಬದಲಾದ ಮೀಸಲಾತಿ, ಭುಗಿಲೆದ್ದ ಅಸಮಾಧಾನ..!

7
ಅಧ್ಯಕ್ಷ ಸ್ಥಾನ ಒಬಿಸಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು

ಕೊಪ್ಪಳ ನಗರಸಭೆ: ಬದಲಾದ ಮೀಸಲಾತಿ, ಭುಗಿಲೆದ್ದ ಅಸಮಾಧಾನ..!

Published:
Updated:
Deccan Herald

ಕೊಪ್ಪಳ: ಸಾಮಾಜಿಕ ನ್ಯಾಯದ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವನ್ನು ಒಬಿಸಿಗೆ ಬದಲಾಯಿಸಿರುವುದು ಆಕಾಂಕ್ಷಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಇಲ್ಲಿನ ನಗರಸಭೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊಮ್ಮಿದ್ದರಿಂದ ಬಹುಮತಕ್ಕೆ ಒಂದು ಸ್ಥಾನದ ಕೊರತೆಯಿತ್ತು. ಆದರೆ ಪಕ್ಷೇತರ ಅಭ್ಯರ್ಥಿಗಳು ನಾಲ್ಕು ಜನರು ಇದ್ದು, ಕಾಂಗ್ರೆಸ್ ಬೆಂಬಲಿಸಲು ತುದಿಗಾಲ ಮೇಲೆ ನಿಂತಿದ್ದು, ಅಧಿಕಾರ ಹಿಡಿಯಲು ಯಾವುದೇ ಅಡ್ಡಿಯಿಲ್ಲ.

ಆದರೆ ನಗರಸಭೆ ಅಧ್ಯಕ್ಷ ಸ್ಥಾನ ಎಸ್‌.ಸಿ (ಮಹಿಳೆ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿ ಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸೇರಿದಂತೆ ಪ್ರಭಾವಿ ಮುಖಂಡರನ್ನು ಕಂಗೆಡಿಸಿತ್ತು. ಈಗ ಮೀಸಲಾತಿ ಬದಲಾಗಿದ್ದು, ಆಕಾಂಕ್ಷಿಗಳಲ್ಲಿ ಸಹಜವಾಗಿ ಬೇಸರ ಮೂಡಿಸಿದೆ.

ಅಧ್ಯಕ್ಷ ಸ್ಥಾನ ಇತರೆ ಹಿಂದುಳಿದ ವರ್ಗ ಎಂದು ಬದಲಾಯಿಸಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಮೀಸಲಾತಿ ಅನ್ವಯ ಬಹುದಿನಗಳಿಂದ ಮುಸ್ಲಿಂ ಸಮಾಜಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಶಾಸಕರು ಅಮ್ಜದ್ ಪಟೇಲ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಒಲವು ತೋರಿದ್ದಾರೆ ಎನ್ನಲಾಗಿದೆ.

ಅಲ್ಲದೆ ಸಮಾಜದ ಮುಖಂಡರಾದ ಜುಲ್ಲು ಖಾದರ್ ಖಾದ್ರಿ, ಕಾಟನ್ ಪಾಶಾ ಸೇರಿದಂತೆ ಸ್ಥಳೀಯ ಧಾರ್ಮಿಕರ ಮುಖಂಡರೊಬ್ಬರು ಸಚಿವರಾದ ಜಮೀರ್ ಅಹಮ್ಮದ್ ಮತ್ತು ಯು.ಟಿ.ಖಾದರ್ ಅವರನ್ನು ಭೇಟಿಯಾಗಿ ತಮ್ಮ ಸಮಾಜಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದರು. ಶಾಸಕರ ಮೇಲೆ ಒತ್ತಡ ಹೆಚ್ಚಾಗಿದ್ದರಿಂದ ಮೀಸಲಾತಿಯನ್ನು ಬದಲಿಸಿ, ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ.


ದುರುಗವ್ವ ಎಚ್‌.ಬಿ ಹಳ್ಳಿ, ಯಲ್ಲಮ್ಮ ಗಿಣಿಗೇರಾ, ಅಮ್ಜದ್ ಪಟೇಲ್

ಅಧ್ಯಕ್ಷ ಸ್ಥಾನಕ್ಕೆ ಅಮ್ಜದ್ ಪಟೇಲ್ ಪ್ರಮುಖ ಆಕಾಂಕ್ಷಿ. ಆದರೆ ಮೊದಲ ಬಾರಿಗೆ ಮೀಸಲು ಕ್ಷೇತ್ರದಿಂದ ಗೆದ್ದ ದುರಗವ್ವ ಹಳ್ಳಿ, ಸಾಮಾನ್ಯ ಕ್ಷೇತ್ರದಿಂದ ಗೆದ್ದ ಪರಿಶಿಷ್ಟ ಜಾತಿಯ ಯಲ್ಲಮ್ಮ ರಮೇಶ ಗಿಣಿಗೇರಿ ಮೀಸಲಾತಿ ನೀತಿಯ ಅನ್ಯಾಯದ ವಿರುದ್ಧ ಆಂತರಿಕವಾಗಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

'ತಳ ಸಮುದಾಯದಿಂದ ಬಂದ ನಾವು ಮೀಸಲಾತಿ ಅಡಿ ಚುನಾಯಿತರಾದರೂ ಅಧಿಕಾರ ತಪ್ಪಿಸಲು ಮುಖಂಡರು ರಾಜಕೀಯ ನಡೆಸಿರುವುದು ಬೇಸರ ಮೂಡಿಸಿದೆ. ಇಲ್ಲಿ ನಗರದ ಅಭಿವೃದ್ಧಿಗಿಂತ ತಮ್ಮ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ' ಎಂದು ದಲಿತ ಪ್ಯಾಂಥರ್ ಮುಖಂಡ ನಾಗರಾಜ ಬೆಲ್ಲದ ಹೇಳುತ್ತಾರೆ.

ಜಿಲ್ಲಾ ಪಂಚಾಯ್ತಿ ಸದಸ್ಯ, ಕಾಂಗ್ರೆಸ್ ಮುಖಂಡ ಗೂಳಪ್ಪ ಹಲಗೇರಿ ಮಾತನಾಡಿ, 'ಮೀಸಲಾತಿ ಹಿಂದುಳಿದ ವರ್ಗದವರಿಗೆ ಬಂದಿರುವುದು ಸಾಮಾಜಿಕ ನ್ಯಾಯವೇ ಆಗಿದೆ. ನಾವು ಪಕ್ಷ ಮತ್ತು ಮುಖಂಡ ತೀರ್ಮಾನವನ್ನು ವಿರೋಧಿಸುವುದಿಲ್ಲ. ಎಲ್ಲ ಸಮುದಾಯದವರಿಗೆ ಆದ್ಯತೆ ನೀಡುವ ಉದ್ದೇಶದಿಂದಲೇ ಮೀಸಲಾತಿ ಬದಲಾಗಿದೆ' ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಅಧಿಕಾರದ ಆಶೆ ಇನ್ನೂ ಜೀವಂತ

ಇಲ್ಲಿನ ನಗರಸಭೆಯಲ್ಲಿ 31 ಸ್ಥಾನಗಳಲ್ಲಿ ಕಾಂಗ್ರೆಸ್ 15, ಬಿಜೆಪಿ 10, ಜೆಡಿಎಸ್ 2, ಪಕ್ಷೇತರರು 4 ಜನ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ವಂಚಿತ ದಲಿತ ಸಮುದಾಯ ಮೂವರು, ಜೆಡಿಎಸ್ ಇಬ್ಬರು ಸದಸ್ಯರು, ಕಾಂಗ್ರೆಸ್‌ನ ಅತೃಪ್ತ ಬಣದ ಸದಸ್ಯರನ್ನು ಸೆಳೆದು ಸಂಸದರ ಬೆಂಬಲದಿಂದ ಆಡಳಿತದ ಚುಕ್ಕಾಣಿ ಹಿಡಿಯುವ ಆಶೆ ಇನ್ನೂ ಜೀವಂತವಾಗಿದೆ.

ಬಿಜೆಪಿಯ ಯುವ ನಾಯಕರು ತೀವ್ರ ಕಸರತ್ತು ನಡೆಸಿದ್ದರೂ ಹಿರಿಯರು ಈ ಗೊಡವೆ ಬೇಡ ಎಂದು ಹೇಳುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಖ್ಯಾಂಶಗಳು

* ಮಹಿಳೆ, ದಲಿತರಿಗೆ ತಪ್ಪಿದ ಅವಕಾಶ

* ಅಲ್ಪಸಂಖ್ಯಾತರಿಗೆ ಮಣೆ: ಅಸಮಾಧಾನ

* ಸಾಮಾಜಿಕ ನ್ಯಾಯ ಪಾಲಿಸದ ಕಾಂಗ್ರೆಸ್

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !