ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ: ರಸ್ತೆಗಳಿಗೆ ನದಿಗಳ ಹೆಸರು!

Published 4 ಜನವರಿ 2024, 4:50 IST
Last Updated 4 ಜನವರಿ 2024, 4:50 IST
ಅಕ್ಷರ ಗಾತ್ರ

ಕನಕಗಿರಿ: ಸಾಮಾನ್ಯವಾಗಿ ನಗರದ ರಸ್ತೆ, ಬಡಾವಣೆ, ವೃತ್ತಗಳಿಗೆ ಸ್ವಾತಂತ್ರ್ಯ ಹೋರಾಟಗಾರರು, ರಾಜಕೀಯ ನಾಯಕರು ಅಥವಾ ಸಿನಿಮಾ ನಟರ ಹೆಸರು ನಾಮಕರಣ ಮಾಡುವುದು ವಾಡಿಕೆ. ಆದರೆ ಸಮೀಪದ ಚಿಕ್ಕಡಂಕನಕಲ್ ಗ್ರಾಮದಲ್ಲಿ ನವೀಕೃತ ರಸ್ತೆಗಳಿಗೆ ನದಿಗಳ ಹೆಸರು ನಾಮಕರಣ ಮಾಡಿ ಗಮನ ಸೆಳೆಯಲಾಗಿದೆ.

ದೇಶದ ಸರ್ವ ಶ್ರೇಷ್ಠ ನದಿಗಳ ಹೆಸರನ್ನು ಇಡುವ ಮೂಲಕ ಗ್ರಾಮೀಣ ಭಾಗದಲ್ಲಿ ನದಿಗಳ ಶ್ರೇಷ್ಠತೆ ಮತ್ತು ಮೌಲ್ಯವನ್ನು ಸಾರುವ ಕೆಲಸವನ್ನು ಚಿಕ್ಕಡಂಕನಲ್ ಗ್ರಾಮ ಪಂಚಾಯಿತಿ ಆಡಳಿತ ಮಾಡಿದೆ.

ಪಂಚಾಯಿತಿ ಅನುದಾನದಲ್ಲಿ ಗ್ರಾಮದ ಪ್ರಮುಖ 10 ರಸ್ತೆಗಳಿಗೆ ಹೇಮಾವತಿ, ತುಂಗಭದ್ರಾ, ಕೃಷ್ಣಾ, ವೇದಾವತಿ, ಗೋದಾವರಿ, ನೇತ್ರಾವತಿ, ಪಂಚಗಂಗಾ, ಶರಾವತಿ, ಕಪಿಲ, ಕಾವೇರಿ ನದಿಗಳ ನಾಮಕರಣ ಮಾಡಿ ನಾಮಫಲಕಗಳನ್ನು ಅಳವಡಿಸಿ ಜನರಿಗೆ ನದಿಗಳ ಹೆಸರುಗಳನ್ನು ಪರಿಚಯಿಸುವುದಷ್ಟೇ ಅಲ್ಲದೇ, ಅವುಗಳ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲಾಗಿದೆ.

ರಸ್ತೆಗಳಿಗೆ ಹೆಸರು ಬಂದಿದ್ದು ಹೀಗೆ: ಗ್ರಾಮದ ರಸ್ತೆಗಳಿಗೆ ನದಿಗಳ ಹೆಸರುಗಳನ್ನು ಇಡಲು ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಕಾರಣ ಎಂದು ಪಂಚಾಯಿತಿ ಮೂಲಗಳು ತಿಳಿಸಿವೆ. ಕೆಲ ತಿಂಗಳುಗಳ ಹಿಂದೆ ನಡೆದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಕ್ಷೇತ್ರದ ಗ್ರಾಮಗಳನ್ನು ಮಾದರಿಯನ್ನಾಗಿ ಮಾಡುವಂತೆ ತಂಗಡಗಿ ಅವರು ಸೂಚಿಸಿದ್ದರು. ಗ್ರಾಮದ ರಸ್ತೆ, ಹಾಗೂ ವೃತ್ತಗಳಿಗೆ ಕವಿಗಳು, ದಾರ್ಶನಿಕರು ಹಾಗೂ ನದಿಗಳ ಹೆಸರುಗಳನ್ನು ನಾಮಕರಣ ಮಾಡಿ ಗೌರವಿಸಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಈ ಕೆಲಸ ಮಾಡಲಾಗಿದೆ ಎಂದು ಪಿಡಿಒ ಹನುಮಂತಪ್ಪ ತಿಳಿಸಿದರು.

ಸಚಿವರ ನಿರ್ದೇಶನದಿಂದ ಒಟ್ಟು 10 ರಸ್ತೆಗಳಿಗೆ ನದಿಗಳ ಹೆಸರಿನಲ್ಲಿ ನಾಮಫಲಕವನ್ನು ಅಳವಡಿಸಿದ್ದೇವೆ. ಗ್ರಾಮಸ್ಥರು ಸಹ ಖುಷಿಯಾಗಿದ್ದಾರೆ. ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಈ ನಾಮಫಲಕಗಳನ್ನು ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ರಸ್ತೆ ಹಾಗೂ ವೃತ್ತಗಳಿಗೆ ಪ್ರಮುಖ ನದಿಗಳ ಹೆಸರುಗಳನ್ನು ಇಡುವ ಮೂಲಕ ಪವಿತ್ರ ಸ್ಥಳಗಳ ಪ್ರಾಮುಖ್ಯತೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡಲಾಗುತ್ತಿದೆ.
- ಚಂದ್ರಶೇಖರ ಕಂದಕೂರ, ತಾಪಂ ಪ್ರಭಾರ ಇಒ ಕನಕಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT