ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯಸಂತೆಗೆ ಜನರಿಂದ ಉತ್ತಮ ಸ್ಪಂದನೆ

ತೋಟಗಾರಿಕಾ ಆವರಣದಲ್ಲಿ ನಡೆಯುತ್ತಿರುವ ಸಸ್ಯಸಂತೆ
Last Updated 24 ಜೂನ್ 2018, 16:16 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ತೋಟಗಾರಿಕಾ ಇಲಾಖೆ ಆವರಣದಲ್ಲಿ ನಡೆಯುತ್ತಿರುವ ಸಸ್ಯಸಂತೆಗೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ‍ಪ್ರತಿದಿನ ಸುಮಾರು 600ರಿಂದ 700 ಜನ ಭೇಟಿ ನೀಡಿ ಸಸಿಗಳನ್ನು ಕೊಂಡು ಹೋಗುತ್ತಿದ್ದಾರೆ.

ಈಗಾಗಲೇ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಕೆಲವೆಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರಿನಲ್ಲಿಯೇ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಉತ್ತಮವಾದ ವಾತಾವರಣ ಇರುವುದರಿಂದ ಸಸ್ಯಸಂತೆಗೆ ಹೆಚ್ಚು ಜನ ತೋಟಗಾರಿಕಾ ಬೆಳೆಗಾರರು ಹಾಗೂ ಸಾರ್ವಜನಿಕರು ಭೇಟಿ ನೀಡಿ ಕಡಿಮೆ ದರದಲ್ಲಿ ದೊರೆಯುತ್ತಿರುವ ಗುಣಮಟ್ಟದ ತಳಿಯ ಸಸ್ಯಗಳನ್ನು ಖರೀದಿಸುತ್ತಿದ್ದಾರೆ.

‘ಪ್ರತಿನಿತ್ಯ 600ರಿಂದ 700 ಗ್ರಾಮೀಣ ಮತ್ತು ನಗರದ ಜನರು ಭೇಟಿ ನೀಡುತ್ತಿದ್ದಾರೆ. ಇದರಿಂದ ಪ್ರತಿನಿತ್ಯ ಸುಮಾರು 2 ಸಾವಿರ ಗಿಡಗಳು ಮಾರಾಟವಾಗುತ್ತಿವೆ. ಇದರಿಂದಾಗಿ ₹ 35 ಸಾವಿರದಿಂದ ₹ 50 ಸಾವಿರದವರೆಗೆ ವಹಿವಾಟು ನಡೆಯುತ್ತಿದೆ. ಕಳೆದ ಆರು ದಿನಗಳಲ್ಲಿ ₹ 4 ರಿಂದ ₹ 5 ಲಕ್ಷ ವಹಿವಾಟು ನಡೆದಿದೆ’ ಎಂದು ತೋಟಗಾರಿಕಾ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮಾಹಿತಿ ನೀಡಿದರು.

ಯಾವ ಸಸಿಗಳಿಗೆ ಬೇಡಿಕೆ?

ಮಾವು ಮತ್ತು ಪೇರಲ ಗಿಡಗಳಿಗೆ ಹೆಚ್ಚು ಬೇಡಿಕೆ ಇದೆ. ಇದರಿಂದಾಗಿ ಎರಡು ಸಾವಿರ ಮಾವು ಮತ್ತು ಪೇರಲ ಗಿಡಗಳು ಈಗಾಗಲೇ ನೋಂದಣಿ (ಬುಕ್‌)ಯಾಗಿವೆ. ಪೇರಲ ಎಲ್ಲವೂ ಖಾಲಿ ಆಗಿವೆ. ಆದರೆ ಬೇರೆ ಕ್ಷೇತ್ರದ ಮಾವು ಗಿಡಗಳು ಲಭ್ಯವಿದೆ. ಹೂವುಗಳಲ್ಲಿ ಕೆಂಪು ಗುಲಾಬಿ ಹಾಗೂ ಸಣ್ಣದಾಗಿರುವ ಗುಲಾಬಿ ಬಣ್ಣದ ಗುಲಾಬಿ ಹೂವಿಗೆ ಅತೀ ಹೆಚ್ಚು ಬೇಡಿಕೆ ವ್ಯಕ್ತವಾಗುತ್ತಿದೆ. ಪೇರಲ 5 ಸಾವಿರ ಗಿಡ, ಮಾವು 8 ಸಾವಿರ, ಗುಲಾಬಿ 2 ಸಾವಿರ, ನಿಂಬೆ 5 ಸಾವಿರ ಕರಿಬೇವು 8 ಸಾವಿರ ಗಿಡಗಳು ಮಾರಾಟವಾಗಿವೆ.‌

‘ತೋಟಗಾರಿಕೆ ಬಗ್ಗೆ ಹೆಚ್ಚು ಆಸಕ್ತಿ ಇರುವ ರೈತರು ಸಸ್ಯಸಂತೆಗೆ ಬರುತ್ತಿದ್ದಾರೆ. ಅವರಿಗೆ ಅವುಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಲಾಗುವುದರಿಂದ ಇಲ್ಲಿಯೇ ಸಸಿಗಳನ್ನು ಖರೀದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಂದು ಸಾವಿರದಿಂದ ಎರಡು ಸಾವಿರ ಎಕರೆವರೆಗೆ ತೋಟಗಾರಿಕೆ ಪ್ರದೇಶ ಹೆಚ್ಚಾಗುವ ನಿರೀಕ್ಷೆ ಇದೆ. ಇದಕ್ಕೆ ಸಸ್ಯಸಂತೆಯೇ ಕಾರಣ’ ಎಂದು ಕೃಷ್ಣ ಅವರು ತಿಳಿಸಿದರು.

ಏನೇನು ಲಭ್ಯ?

ಮಾವು, ಲಿಂಬೆ, ತೆಂಗು, ಅಂಜೂರ, ಸೀಬೆ(ಪೇರಲ), ಚಿಕ್ಕು ಮುಂತಾದ ಹಣ್ಣಿನ ಬೆಳೆಗಳ ವಿವಿಧ ತಳಿಗಳು. ಮಲ್ಲಿಗೆ, ಗುಲಾಬಿ, ದಾಸವಾಳ ಸೇರಿದಂತೆ ವಿವಿಧ ಹೂವಿನ ಸಸಿಗಳು. ಔಷಧಿ ಸಸ್ಯಗಳಾದ ಚಕ್ರಮುನಿ, ತುಳಸಿ ಲಾಂಟಾನ, ಅಮೃತ ಬಳ್ಳಿ, ಇನ್ಸುಲಿನ್‌ ಮುಂತಾದವು. ಕ್ರೋಟನ್, ಡೈಪನ್‌ ಬೇಕಿಯಾ, ಡ್ರೇಸಿನಾ, ವೇರೀಗೆಟೆಡ್ ಮರಂಟಾ, ಅರೇಕಾ ಪಾಮ್‌, ಮಸಾಂಡಾ, ನೈಟ್‌ಕ್ವಿಸ್‌, ಪೈಕಸ್‌, ಕೋಲಿಯಸ್‌, ಇಕ್ಸೋರಾ, ಪೆನ್ನಿಸೆಟಾಯಂ ನಂತಹ ಅಲಂಕಾರಿಕ ಸಸ್ಯಗಳು. ನುಗ್ಗೆ, ಕರಿಬೇವು ಸೇರಿದಂತೆ ವಿವಿಧ ಸಸ್ಯಗಳನ್ನು ಮಾರಾಟಕ್ಕೆ ಇಡಲಾಗಿದೆ.

ಒಂದೇ ಸೂರಿನ ಅಡಿಯಲ್ಲಿ ಎಲ್ಲ ರೀತಿಯ ಸಸ್ಯಗಳು ಯೋಗ್ಯದರದಲ್ಲಿ ಸಾರ್ವಜನಿಕರಿಗೆ, ರೈತರಿಗೆ ಇಲಾಖಾ ಸಸ್ಯಗಾರಗಳಿಂದಲೇ ನೇರವಾಗಿ ಸಸ್ಯಸಂತೆಯಲ್ಲಿ ಲಭ್ಯವಿದೆ. ಇದರಿಂದ ಎಲ್ಲರಿಗೂ ಖುಷಿಯಾಗಿದೆ.
ಕೃಷ್ಣ ಉಕ್ಕುಂದ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT