ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕದ ನಡುವೆಯೂ ಪರೀಕ್ಷೆ ಸುಗಮ

ಜಿಲ್ಲೆಯಲ್ಲಿ 322 ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಗೈರು, ಕೋವಿಡ್‌ ಆರೈಕೆ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿ
Last Updated 20 ಜುಲೈ 2021, 4:01 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಸೋಂಕಿನ ಆತಂಕದ ನಡುವೆಯೂ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಿತು.

ಶಿಕ್ಷಣ ಇಲಾಖೆ ಜತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಾರಿ ಮಕ್ಕಳ ಆರೋಗ್ಯದ ಮೇಲ್ವಿಚಾರಣೆ ವಹಿಸಿದ್ದು ವಿಶೇಷವಾಗಿತ್ತು.

ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ 108 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. 2982 ಸಿಬ್ಬಂದಿ ನಿಯೋಜಿಸಲಾಗಿತ್ತು. 23,857 ಮಕ್ಕಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಕೊರೊನಾ ಸೋಂಕಿತರಿಗೆ ಪ್ರತ್ಯೇಕ ಕೊಠಡಿ ಸಜ್ಜುಗೊಳಿಸಲಾಗಿತ್ತು.

ಎಲ್ಲ ಕೇಂದ್ರಗಳನ್ನು ಭಾನುವಾರವೇ ಸ್ವಚ್ಛ ಮಾಡಿ ಸ್ಯಾನಿಟೈಸರ್‌ ಸಿಂಪಡಿಸಲಾಗಿತ್ತು. ಪ್ರತಿ ಕೊಠಡಿಗೆ 12 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಬೆಳಿಗ್ಗೆ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ಯಾನಿಂಗ್‌ ಮಾಡುವ ಮೂಲಕ ಆರೋಗ್ಯ ತಪಾಸಣೆ ಮಾಡಿ ಪರೀಕ್ಷೆಗೆ ಕಳುಹಿಸಲಾಯಿತು.

ವಿವಿಧ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಝೆರಾಕ್ಸ್ ಸೇರಿದಂತೆ ಇತರ ಅಂಗಡಿಗಳನ್ನು ಬಂದ್‌ ಮಾಡಿಸಲಾಗಿತ್ತು. ನಕಲು ತಡೆಗೆ ಪರೀಕ್ಷೆ ಕೇಂದ್ರದ ಮೇಲ್ವಿಚಾರಕರು ನಿರಂತರ ನಿಗಾ ವಹಿಸಿದ್ದರು.

ಸೋಮವಾರ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆಗಳಿಗೆ ಒಟ್ಟು 322 ವಿದ್ಯಾರ್ಥಿಗಳು ಗೈರಾಗಿ, ಒಟ್ಟು 23,134 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಗಣಿತ:ಗಣಿತ ವಿಷಯದ ಪರೀಕ್ಷೆಗಾಗಿ 20738 ರೆಗ್ಯುಲರ್ ವಿದ್ಯಾರ್ಥಿಗಳು, 810 ಖಾಸಗಿ ಹಾಗೂ 1709 ಪುನರಾವರ್ತಿತ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 20,655 ರೆಗ್ಯುಲರ್ ವಿದ್ಯಾರ್ಥಿಗಳು, 804 ಖಾಸಗಿ ಹಾಗೂ 1675 ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ರೆಗ್ಯುಲರ್ ವಿದ್ಯಾರ್ಥಿಗಳಲ್ಲಿ 83, ಖಾಸಗಿ 06 ಹಾಗೂ ಪುನರಾವರ್ತಿತ 34 ಜನ ಸೇರಿ ಒಟ್ಟು 123 ಅಭ್ಯರ್ಥಿಗಳು ಗೈರಾಗಿದ್ದಾರೆ.

ವಿಜ್ಞಾನ: ವಿಜ್ಞಾನ ವಿಷಯದ ಪರೀಕ್ಷೆಗಾಗಿ 20748 ರೆಗ್ಯುಲರ್ ವಿದ್ಯಾರ್ಥಿಗಳು, 810 ಖಾಸಗಿ ಹಾಗೂ 1270 ಪುನರಾವರ್ತಿತ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 20,665 ರೆಗ್ಯುಲರ್ ವಿದ್ಯಾರ್ಥಿಗಳು, 804 ಖಾಸಗಿ ಹಾಗೂ 1259 ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ರೆಗ್ಯುಲರ್ ವಿದ್ಯಾರ್ಥಿಗಳಲ್ಲಿ 83, ಖಾಸಗಿ 6 ಹಾಗೂ ಪುನರಾವರ್ತಿತ 11 ಜನ ಸೇರಿ ಒಟ್ಟು 100 ಅಭ್ಯರ್ಥಿಗಳು ಗೈರಾಗಿದ್ದಾರೆ.

ಸಮಾಜ ವಿಜ್ಞಾನ:ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗಾಗಿ 20752 ರೆಗ್ಯುಲರ್ ವಿದ್ಯಾರ್ಥಿಗಳು, 810 ಖಾಸಗಿ ಹಾಗೂ 833 ಪುನರಾವರ್ತಿತ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 20669 ರೆಗ್ಯುಲರ್ ವಿದ್ಯಾರ್ಥಿಗಳು, 804 ಖಾಸಗಿ ಹಾಗೂ 823 ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ರೆಗ್ಯುಲರ್ ವಿದ್ಯಾರ್ಥಿಗಳಲ್ಲಿ 83, ಖಾಸಗಿ 6 ಹಾಗೂ ಪುನರಾವರ್ತಿತ 10 ಜನ ಸೇರಿ ಒಟ್ಟು 99 ಅಭ್ಯರ್ಥಿಗಳು ಗೈರಾಗಿದ್ದಾರೆ.

ಅನಾರೋಗ್ಯದ ಕಾರಣದಿಂದಾಗಿ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ. ಕೋವಿಡ್ ದೃಢಪಟ್ಟ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಬರೆಯಲು ಕೋವಿಡ್ ಕೇರ್ ಸೆಂಟರ್‌ನಲ್ಲಿಯೇ ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲೆಯಲ್ಲಿ ಒಬ್ಬ ವಿದ್ಯಾರ್ಥಿಯು ಕೋವಿಡ್ ಕೇರ್ ಸೆಂಟರ್‌ನಲ್ಲಿಯೇ ಪರೀಕ್ಷೆ ಬರೆದಿದ್ದಾರೆ.

310 ವಿದ್ಯಾರ್ಥಿಗಳು ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿದ್ದು ಪರೀಕ್ಷೆಬರೆದಿದ್ದಾರೆ. 343 ವಲಸೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡು ಪರೀಕ್ಷೆ ಬರೆದಿದ್ದಾರೆ.ಜಿಲ್ಲೆಯ ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಅಥವಾ ಅಹಿತಕರ ಘಟನೆ ನಡೆಯದೆ, ಶಾಂತಿಯುತವಾಗಿ ಪರೀಕ್ಷೆ ನಡೆದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ ತಿಳಿಸಿದ್ದಾರೆ.

ಕುಕನೂರು: ತಾಲ್ಲೂಕಿನಲ್ಲಿ 9 ಪರೀಕ್ಷಾ ಕೇಂದ್ರಗಳಿದ್ದು ಒಟ್ಟು 1992 ವಿದ್ಯಾರ್ಥಿಗಳಲ್ಲಿ 1996 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 6 ವಿದ್ಯಾರ್ಥಿಗಳು ಮಾತ್ರ ಗೈರಾಗಿದ್ದಾರೆ. ತಾಲ್ಲೂಕಿನ ಇಟಗಿ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ವಿದ್ಯಾರ್ಥಿಗೆ ಕೋವಿಡ್ ದೃಢಪಟ್ಟಿದ್ದು, ಆ ವಿದ್ಯಾರ್ಥಿಯನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಅಲ್ಲೇ ಪರೀಕ್ಷೆ ಬರೆಯಿಸಲಾಗಿದೆಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ್ ಬಡಿಗೇರ್ ತಿಳಿಸಿದ್ದಾರೆ.

ಸಿಇಒ ಭೇಟಿ: ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಫೌಜೀಯಾ ತರುನ್ನುಮ್ ಭೇಟಿ ನೀಡಿ ಪರೀಕ್ಷಾರ್ಥಿಗಳನ್ನು ಮಾತನಾಡಿಸಿ ಧೈರ್ಯದಿಂದ ಪರೀಕ್ಷೆ ಬರೆಯುವಂತೆ ತಿಳಿಸಿದರು.

ನಂತರ ಕುಷ್ಟಗಿ ತಾಲ್ಲೂಕಿನ ಗ್ರಾಮೀಣ ಭಾಗದ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಪತ್ರಿಕೆಯೊಂದಿಗೆ ಮಾತನಾಡಿ,‘ಸರ್ಕಾರದ ಮಾರ್ಗಸೂಚಿ ಅನ್ವಯ ಗೊಂದಲ ಇಲ್ಲದೆ ಪರೀಕ್ಷೆ ನಡೆಸಲಾಗಿದೆ. ಶುದ್ಧ ಕುಡಿಯುವ ನೀರು ಸೇರಿದಂತೆ ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗಿತ್ತು. ಮಾಸ್ಕ್‌ ಇಲ್ಲದೇ ಬಂದಿದ್ದ ಕೆಲವು ವಿದ್ಯಾರ್ಥಿಗಳಿಗೆ ಮಾಸ್ಕ್‌ ‌ನೀಡಲಾಗಿದೆ. ಅಹಿತಕರ ಘಟನೆ ಇಲ್ಲದೆ ಸುಗಮ ಮತ್ತು ಸುಸೂತ್ರವಾಗಿ ಪರೀಕ್ಷೆ ನಡೆದಿದ್ದು, ಇದಕ್ಕೆ ನಮ್ಮ ಇಲಾಖೆಯ ಎಲ್ಲ ಶಿಕ್ಷಕ ಮತ್ತು ಸಿಬ್ಬಂದಿ ಸಹಕಾರ ಕಾರಣ’ ಎಂದು ಅವರು ತಿಳಿಸಿದರು.

ಕುಷ್ಟಗಿ: ನಾಲ್ಕು ಕೇಂದ್ರಗಳಲ್ಲಿ ಪರೀಕ್ಷೆ

ಕುಷ್ಟಗಿ: ಕೋವಿಡ್‌ ಆತಂಕದ ನಡುವೆಯೂ ತಾಲ್ಲೂಕಿನಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ ಮತ್ತು ಸುರಕ್ಷಿತ ರೀತಿಯಲ್ಲಿ ನಡೆಯಿತು.

ಪಟ್ಟಣದ ನಾಲ್ಕು ಕೇಂದ್ರಗಳು ಸೇರಿ ತಾಲ್ಲೂಕಿನಲ್ಲಿ ಒಟ್ಟು 28 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಹೆಸರು ನೋಂದಾಯಿಸಿಕೊಂಡಿದ್ದ ಒಟ್ಟು 4218 ವಿದ್ಯಾರ್ಥಿಗಳ ಪೈಕಿ ಕೇವಲ 17 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು.

ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು ನೀಡಲಾಗಿತ್ತು. ಕೇಂದ್ರಗಳ ಬಳಿ ತೆರೆಯಲಾಗಿದ್ದ ಹೆಲ್ತ್ ಡೆಸ್ಕ್‌ನಲ್ಲಿ ಕಾರ್ಯನಿರ್ವಹಿಸಿದ ಆರೋಗ್ಯ ಇಲಾಖೆ, ಸ್ಕೌಟ್‌ ಮತ್ತು ಗೈಡ್ಸ್‌ ಸಿಬ್ಬಂದಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು.

ಈ ಕುರಿತು ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚೆನ್ನಬಸಪ್ಪ,‘ತಾಲ್ಲೂಕಿನಲ್ಲಿ ಮೊದಲ ದಿನದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ಯಾವ ಮಕ್ಕಳಲ್ಲೂ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ’ ಎಂದು ಹೇಳಿದರು.

ಈ ಮಧ್ಯೆ ಪರೀಕ್ಷೆಗೆ ಹಾಜರಾದ ಎಲ್ಲರನ್ನೂ ತೇರ್ಗಡೆ ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಆದರೂ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಮೇಲ್ವಿಚಾರಕ ಶಿಕ್ಷಕರೇ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೇಳಿ ಬರೆಯಿಸಿದರು. ಇದರಿಂದ ಪರೀಕ್ಷೆ ಕಠಿಣ ಎನಿಸಲೇ ಇಲ್ಲ ಎಂಬುದನ್ನು ವಿದ್ಯಾರ್ಥಿಗಳು ನಂತರ ತಿಳಿಸಿದರು.

ಯಲಬುರ್ಗಾ: 65 ವಲಸೆ ವಿದ್ಯಾರ್ಥಿಗಳು

ಯಲಬುರ್ಗಾ: ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರ ಸುಗಮವಾಗಿ ನಡೆಯಿತು.

ಯಲಬುರ್ಗಾ ಹಾಗೂ ಕುಕನೂರು ವ್ಯಾಪ್ತಿಯ ಒಟ್ಟು 4704 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಆ ಪೈಕಿ 11 ಜನ ಗೈರಾಗಿದ್ದರು. ಕೊರೊನಾ ಸೋಂಕಿತ ಮೂವರು ಹಾಗೂ ಅನಾರೋಗ್ಯದಿಂದ ಬಳಲುತಿದ್ದ ಮೂವರು ವಿದ್ಯಾರ್ಥಿಗಳು ಸೇರಿ ಒಟ್ಟು ಆರು ಜನ ವಿಶೇಷ ಕಾಳಜಿ ಕೊಠಡಿಯಲ್ಲಿ ಪರೀಕ್ಷೆ ಬರೆದರು.

ತಾಲ್ಲೂಕಿನ ಒಟ್ಟು 12 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಅಹಿತಕರ ಘಟನೆಗಳು ನಡೆಯಲಿಲ್ಲ. ಬೇರೆ ಕಡೆ ನೋಂದಾಯಿಸಿಕೊಂಡಿದ್ದ 65 ವಲಸೆ ವಿದ್ಯಾರ್ಥಿಗಳು ಪಟ್ಟಣದಲ್ಲಿ ಪರೀಕ್ಷೆ ಬರೆದರು.

‘ವಿದ್ಯಾರ್ಥಿಗಳೂ ಆತಂಕವಿಲ್ಲದೆ ಪರೀಕ್ಷೆ ಬರೆದರು. 22 ರಂದು ಇದೇ ರೀತಿ ಪರೀಕ್ಷೆ ನಡೆಸಲು ಇಲಾಖೆ ಸಿದ್ಧವಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಹೇಳಿದರು.

ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಅಡಿವೇಪ್ಪನವರ್, ಬಿಆರ್‌ಸಿ ಅಧಿಕಾರಿ ಕೊಪ್ಪದ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ವ್ಹಿ.ಧರಣಾ, ಸುರೇಶ ಮಾದಿನೂರು, ಯಲಬುರ್ಗಾ, ಕುಕನೂರು, ಬೇವೂರು ಠಾಣೆ ಪೊಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಹನುಮಸಾಗರ: ಒಬ್ಬ ವಿದ್ಯಾರ್ಥಿನಿ ಗೈರು

ಹನುಮಸಾಗರ: ಇಲ್ಲಿನ ಮೂರು ಕೇಂದ್ರಗಳಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಿತು.

ಆರೋಗ್ಯ ಇಲಾಖೆ ಸಿಬ್ಬಂದಿ ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷೆ ನಡೆಸಿದರು.

ಪರೀಕ್ಷೆ ಆರಂಭವಾಗುವ ಮುನ್ನ ರಾಜ್ಯ ಜಂಪ್‍ರೋಪ್ ಸಂಸ್ಥೆಯ ಅಬ್ದುಲ್‍ ರಜಾಕ್ ಟೇಲರ್ ಹಾಗೂ ಅಬ್ದುಲ್‍ ಕರೀಮ ವಂಟೆಳಿ ವಿದ್ಯಾರ್ಥಿಗಳಿಗೆ ಹೂವಿನ ಹಾರ ಹಾಕುವುದರ ಮೂಲಕ ಶುಭ ಕೋರಿದರು.

ಮೂರು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 539 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಆ ಪೈಕಿ ಯರಗೇರಾ ಪ್ರೌಢ ಶಾಲೆಯ ಒಬ್ಬ ವಿದ್ಯಾರ್ಥಿನಿ ಮಾತ್ರ ಗೈರು ಹಾಜರಾಗಿದ್ದರು.

‘ಎಸ್ಸೆಸ್ಸೆಲ್ಸಿ ಪರೀಕ್ಷಾ ಇತಿಹಾಸದಲ್ಲಿ ಗರಿಷ್ಠ ಪ್ರಮಾಣದ ವಿದ್ಯಾರ್ಥಿಗಳು ಹಾಜರಾದ ಉದಾಹರಣೆ ಇಲ್ಲ’ ಎಂದು ಪರೀಕ್ಷಾ ಕೇಂದ್ರಗಳ ಅಧೀಕ್ಷಕರು ತಿಳಿಸಿದರು.

ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸುರಕ್ಷಿತ ವ್ಯವಸ್ಥೆ ಮಾಡಲಾಗಿತ್ತು. ಉಚಿತವಾಗಿ ಮಾಸ್ಕ್ ವಿತರಿಸಲಾಯಿತು. ಎರಡು ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಸೋಮವಾರ ನಡೆದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಗಳಿಗೆ ತಲಾ 40 ಅಂಕಗಳಂತೆ ಒಟ್ಟು 120 ಅಂಕಗಳಿಗೆ ಒಂದು ಪತ್ರಿಕೆ ಬರೆದರು.

ಸರ್ಕಾರಿ ಪಬ್ಲಿಕ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ 210 ವಿದ್ಯಾರ್ಥಿಗಳ ಪೈಕಿ 209 ವಿದ್ಯಾರ್ಥಿಗಳು, ಬಾಲಕಿಯರ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ 209 ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 120 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಮಾರ್ಗಧಿಕಾರಿಯಾಗಿ ಶಿವಾನಂದ ಪಂಪಣ್ಣವರ, ಪರೀಕ್ಷಾ ಕೇಂದ್ರಗಳ ಅಧೀಕ್ಷಕರಾಗಿ ಹುಸೇನಸಾಬ ಇಲಕಲ್ಲ, ಅಮರೇಶ ತಮ್ಮಣ್ಣವರ, ರಾಯಮ್ಮ, ಜಾಗೃತ ಅಧಿಕಾರಿಗಳಾಗಿ ಕಿಶನರಾವ್ ಕುಲಕರ್ಣಿ, ಗಂಗಾಧರ ಮಡಿವಾಳರ ಹಾಗೂ ಶರಣಪ್ಪ ವಡ್ಡರ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT