ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶೇಷ ತರಗತಿಗೆ ಉಪನ್ಯಾಸಕರ ವಿರೋಧ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ: ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಕಾರ್ಯಭಾರ
–ಪ್ರಮೋದ ಕುಲಕರ್ಣಿ
Published : 13 ಸೆಪ್ಟೆಂಬರ್ 2024, 6:23 IST
Last Updated : 13 ಸೆಪ್ಟೆಂಬರ್ 2024, 6:23 IST
ಫಾಲೋ ಮಾಡಿ
Comments

ಕೊಪ್ಪಳ: ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರೂ ಆ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದು, ಇದಕ್ಕೆ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ವರ್ಷ ರಾಜ್ಯಕ್ಕೆ 16ನೇ ಸ್ಥಾನ ಪಡೆದಿದ್ದ ಕೊಪ್ಪಳ ಜಿಲ್ಲೆ ಈ ಬಾರಿ ಮೊದಲ ಹಂತದ ಪರೀಕ್ಷೆ ಪೂರ್ಣಗೊಂಡಾಗ 32ನೇ ಸ್ಥಾನಕ್ಕೆ ಕುಸಿದು ಕಳಪೆ ಸಾಧನೆ ಮಾಡಿತ್ತು. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೂ ಕಾರಣವಾಗಿತ್ತು.

ಜಿಲ್ಲೆಯ ಸಾರ್ವಜನಿಕರ ಕುಂದುಕೊರತೆ ಪರಿಹರಿಸಲು ನಡೆಯುತ್ತಿರುವ ಜನಸ್ಪಂದನಾ ಸಭೆಯಲ್ಲಿ ಹಲವು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಡಿಮೆಯಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ವಿಶೇಷ ತರಗತಿಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇದೇ ಜುಲೈನಲ್ಲಿ ಸೂಚಿಸಿದ್ದರು. ವಿಶೇಷವಾಗಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ವಿಷಯಗಳ ಬಗ್ಗೆ ತರಗತಿ ನಡೆಸಬೇಕು ಎಂದಿದ್ದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸಂಘದವರು ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ಜಿಲ್ಲಾಧಿಕಾರಿ ಜ್ಞಾಪನವನ್ನು ವಾಪಸ್‌ ಪಡೆಯಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರದ ಆದೇಶದಂತೆ ಪಿಯು ಉಪನ್ಯಾಸಕರು ಈಗಾಗಲೇ ಕಲಾ ಹಾಗೂ ವಾಣಿಜ್ಯ ವಿಷಯದ ಬಗ್ಗೆ ವಾರದಲ್ಲಿ 20 ಅವಧಿ ಬೋಧನೆ, ವಿಜ್ಞಾನ ವಿಭಾಗದ ಉಪನ್ಯಾಸಕರು ಪ್ರಾಯೋಗಿಕ ತರಗತಿಗಳೂ ಸೇರಿದಂತೆ ವಾರದಲ್ಲಿ 24 ತಾಸು ಬೋಧನಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲಸದ ಭಾರ ಸರಿದೂಗಿಸಲು ವಾರದಲ್ಲಿ ಮೂರು ದಿನ ಬೇರೆ ಕಾಲೇಜುಗಳಿಗೂ ತೆರಳಿ ಕೆಲಸ ಮಾಡುತ್ತಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿಯೇ 4000ಕ್ಕಿಂತ ಹೆಚ್ಚು ಕಾಯಂ ಉಪನ್ಯಾಸಕರ ಕೊರತೆಯಿದ್ದು, ಅತಿಥಿ ಉಪನ್ಯಾಸಕರ ನೇಮಕಕ್ಕೆ ಆದೇಶ ಹೊರಡಿಸಿದೆ. ಈಗ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸುವುದು ಹೊರೆಯಾಗುತ್ತದೆ ಎಂದು ಸಂಘದವರು ಹೇಳಿದ್ದಾರೆ.

ಪಿಯು ಮಂಡಳಿ ಫಲಿತಾಂಶ ಸುಧಾರಣೆಗೆ ತರಗತಿ ಪ್ರಾರಂಭವಾಗುವ ಒಂದು ತಾಸು ಮೊದಲು ಹಾಗೂ ತರಗತಿ ಮುಗಿದ ಬಳಿಕ ಒಂದು ತಾಸು ವಿಷಯವಾರು ವಿಶೇಷ ತರಗತಿ ನಡೆಸುವಂತೆಯೂ ಸೂಚನೆ ನೀಡಿದ್ದು, ಕಲಿಕೆಯಲ್ಲಿ ಹಿಂದುಳಿದ ಪಿಯುಸಿ ಮಕ್ಕಳ ಕಾಳಜಿ, ವರ್ಷಪೂರ್ತಿ ಹಲವು ಹಂತಗಳಲ್ಲಿ ಪರೀಕ್ಷೆಗಳು, ಕ್ರೀಡೆ, ಸಾಂಸ್ಕೃತಿಕ, ಎನ್‌ಸಿಸಿ, ಎನ್‌ಎಸ್‌ಎಸ್‌, ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಹೀಗೆ ಅನೇಕ ಕೆಲಸಗಳ ಒತ್ತಡ ಉಪನ್ಯಾಸಕರ ಮೇಲಿದೆ. ಆದ್ದರಿಂದ ಜಿಲ್ಲಾಧಿಕಾರಿ ತಮ್ಮ ಸೂಚನೆ ವಾಪಸ್‌ ಪಡೆಯುವಂತೆ ಒತ್ತಾಯಿಸಿದ್ದಾರೆ.

ಕೊಪ್ಪಳ ಜಿಲ್ಲಾಧಿಕಾರಿ ಸೂಚನೆ ಪದವಿಪೂರ್ವ ಶಿಕ್ಷಣ ಇಲಾಖೆಯ ವೃಂದ ಹಾಗೂ ನೇಮಕಾತಿ ನಿಯಮಗಳ ಉಲ್ಲಂಘನೆಯಾಗಿದೆ. ಆದ್ದರಿಂದ ಅವರು ಜ್ಞಾಪನವನ್ನು ವಾಪಸ್‌ ಪಡೆಯಬೇಕು.
ನಿಂಗೇಗೌಡ ಎ.ಎಚ್‌. ರಾಜ್ಯ ಪಿಯು ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ
ಎಸ್‌ಎಸ್‌ಎಲ್‌ಸಿ ಮಕ್ಕಳೇ ಮುಂದೆ ಪಿಯುಸಿಗೆ ಬರುತ್ತಾರೆ. ಪಿಯು ಉಪನ್ಯಾಸಕರು ಬಿಡುವಾದಾಗ ತರಗತಿ ತೆಗೆದುಕೊಂಡರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಸಂಘದ ಮನವಿ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸುವೆ.
ಜಗದೀಶ್‌ ಎಚ್‌.ಎಸ್‌. ಕೊಪ್ಪಳ ಡಿಡಿಪಿಯು
ಎಸ್‌ಎಸ್‌ಎಲ್‌ಸಿ ಮಕ್ಕಳ ಫಲಿತಾಂಶ ಸುಧಾರಣೆ ಬಗ್ಗೆ ನಮಗೂ ಕಾಳಜಿಯಿದೆ. ಆದರೆ ಸಮಯದ ಹೊಂದಾಣಿಕೆ ಸಮಸ್ಯೆಯಾಗುತ್ತದೆ. ನಮ್ಮ ಕಾರ್ಯಭಾರ ಹೆಚ್ಚಿದೆ. ಸೋಮಶೇಖರಗೌಡ ಪಿಯು ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ
ಎಸ್‌ಎಸ್‌ಎಲ್‌ಸಿ ಮಕ್ಕಳ ಫಲಿತಾಂಶ ಸುಧಾರಣೆ ಬಗ್ಗೆ ನಮಗೂ ಕಾಳಜಿಯಿದೆ. ಆದರೆ ಸಮಯದ ಹೊಂದಾಣಿಕೆ ಸಮಸ್ಯೆಯಾಗುತ್ತದೆ. ನಮ್ಮ ಕಾರ್ಯಭಾರ ಹೆಚ್ಚಿದೆ. ಸೋಮಶೇಖರಗೌಡ ಪಿಯು ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT