ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಜಿಲ್ಲೆ ಸಂಪೂರ್ಣ ಲಾಕ್‌ಡೌನ್

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸೂಚನೆ; 5 ದಿನ ಸ್ತಬ್ಧವಾಗಲಿದೆ ಜಿಲ್ಲೆ
Last Updated 16 ಮೇ 2021, 2:59 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮೇ 17ರಿಂದ 21ರವರೆಗೆ ಐದು ದಿನಗಳ ಕಾಲ ಆರೋಗ್ಯ ಮತ್ತು ಕೃಷಿ ಚಟುವಟಿಕೆ ಹೊರತು ಪಡಿಸಿ, ಇತರೆ ಎಲ್ಲವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯಾದ್ಯಂತ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿ, ಮಾತನಾಡಿದರು.

ಮೇ 31ರ ವರೆಗೆ ಜಿಲ್ಲೆಯಲ್ಲಿ ಯಾವುದೇ ಮದುವೆ ಮತ್ತು ಸಭೆ-ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ಹಾಗೂ ಇತರ ವಿದ್ಯಾರ್ಥಿಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‌ಗಳಿಗೆ ನಿಯೋಜಿಸಲು ಸಂಬಂಧಪಟ್ಟ ಮೆಡಿಕಲ್ ಕಾಲೇಜಿನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದರು.

ರೂಪಾಂತರ ಕೊರೊನಾ ವೈರಸ್ ಅದು ಹೇಗೆ ನಮಗೆ ಹರಡುತ್ತದೆ ಎಂಬುವುದು ಗೊತ್ತಾಗುವುದಿಲ್ಲ. ಹಾಗಾಗಿ ಜನರು ಎಚ್ಚರಿಕೆಯಿಂದ ಇರಬೇಕು. ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ, ಔಷಧಿ ಹಾಗೂ ಇತರೆ ಯಾವುದೇ ಸಮಸ್ಯೆಗಳಿದ್ದರೆ ಮುಂಚಿತವಾಗಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಇಲ್ಲದಿದ್ದರೆ ಅದಕ್ಕೆ ತಾವೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ಮುಂದಿನ ಎರಡು ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ಹೋಗಬೇಕು. ಜನರು ತಮ್ಮ ಚಿಕ್ಕ, ಚಿಕ್ಕ ಮನೆಗಳಲ್ಲಿ ಹೋಂ ಐಸೋಲೇಷನ್‌ನಲ್ಲಿರುವುದರಿಂದ ಅದು ಮನೆಯ ಇತರರಿಗೆ ಸೋಂಕು ಹರಡುವ ಸಂಭವವಿರುತ್ತದೆ’ ಎಂದು ಹೇಳಿದರು.

‘ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ವಾಹನಗಳು ಸಂಚರಿಸದಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಹೆಚ್ಚು ವಾಹನಗಳು ಮತ್ತು ಜನರು ತಿರುಗಾಡುತ್ತಿದ್ದಾರೆ. ಪೊಲೀಸರು ಏನು ಮಾಡುತ್ತಿದ್ದೀರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಪ್ರಶ್ನಿಸಿ, ತಮಗೆ ಅವಶ್ಯಕತೆ ಇದ್ದರೆ ಗೃಹ ರಕ್ಷಕ ದಳದವರನ್ನು ಹಾಗೂ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಿ’ ಎಂದು ಸೂಚನೆ ನೀಡಿದರು.

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ‘ರಾಯಚೂರಿನ ಮಸ್ಕಿ, ಸಿಂಧನೂರು, ಮಾನ್ವಿ, ಬಳ್ಳಾರಿಯ ಕಂಪ್ಲಿ, ಹೊಸಪೇಟೆಯವರು ಗಂಗಾವತಿ ತಾಲ್ಲೂಕು ಆಸ್ಪತ್ರೆಗೆ ಬಂದು ಆಮ್ಲಜನಕಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ನಮಗೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕು’ ಎಂದು ಸಭೆಯಲ್ಲಿ ತಿಳಿಸಿದರು.

ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಮಾತನಾಡಿ, ‘ನನ್ನ ಕ್ಷೇತ್ರದಲ್ಲಿಆಸ್ಪತ್ರೆಗಳು ಭರ್ತಿಯಾಗಿದ್ದು, ರೋಗಿಗಳು ಜಿಲ್ಲಾ ಆಸ್ಪತ್ರೆಗೆ ಬರುತ್ತಿದ್ದಾರೆ. ಅವರಿಗೆ ಅಲ್ಲಿಯೇ ಕನಿಷ್ಠ ಆಮ್ಲಜನಕ ಸೌಲಭ್ಯ ಕೊಟ್ಟು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಕುಕನೂರಿನಲ್ಲಿ 20 ಹಾಸಿಗೆ ಆಸ್ಪತ್ರೆ ಮಾಡುತ್ತಿದ್ದೀರಿ. ಆದರೆ ಇವುಗಳನ್ನು ಆಮ್ಲಜನಕ ಬೆಡ್‌ಗಳಾಗಿ ಪರಿವರ್ತಿಸುವ ಪ್ರಯತ್ನ ಮಾಡಿದರೆ ಅನುಕೂಲ ಆಗುತ್ತದೆ’ ಎಂದರು.

ಸಭೆಯಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಮೂರ್ತಿ, ಎಸ್‌ಪಿ ಟಿ.ಶ್ರೀಧರ್,ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಲಿಂಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT