ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ಪೊಲೀಸರ ಮನೆಗೆ ಕಳ್ಳರ ಕನ್ನ: ಜನರಲ್ಲಿ ಆತಂಕ

ಕೊಪ್ಪಳದಲ್ಲಿ ಕಳ್ಳತನದ ಹಾವಳಿಗೆ ಬೀಳದ ಕಡಿವಾಣ
Published 26 ಮಾರ್ಚ್ 2024, 15:46 IST
Last Updated 26 ಮಾರ್ಚ್ 2024, 15:46 IST
ಅಕ್ಷರ ಗಾತ್ರ

ಕೊಪ್ಪಳ: ನಗರದಲ್ಲಿ ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇದ್ದು, ಈ ಬಾರಿ ನಡೆದ ಘಟನೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯ ಡಿಎಆರ್‌ ಘಟಕದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಆಗಿರುವ ಯಮನೂರಪ್ಪ ಕುರಿ ಅವರ ಮನೆಗೇ ಕಳ್ಳರು ಕನ್ನ ಹಾಕಿದ್ದಾರೆ.

ಇಲ್ಲಿನ ಶಿವಶಾಂತವೀರ ನಗರದ ಚೌಡಯ್ಯ ಪಾರ್ಕ್ ಬಳಿಯಿರುವ ಅವರ ಮನೆಯಲ್ಲಿ ಮಾ. 23ರ ರಾತ್ರಿಯಿಂದ ಮರುದಿನ ಮಧ್ಯಾಹ್ನದ ಒಳಗಡೆ ಈ ಘಟನೆ ನಡೆದಿದೆ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಯಮನೂರಪ್ಪ ಅವರ ಪತ್ನಿ ಸುಜಾತಾ (ಅರ್ಚನಾ) ಈ ಕುರಿತು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಸೋಮವಾರ ಎಫ್‌ಐಆರ್‌ ದಾಖಲಾಗಿದೆ. ಒಟ್ಟು ₹11.38 ಲಕ್ಷ ಮೌಲ್ಯದ 284.6 ಗ್ರಾಂ ತೂಕದ ಚಿನ್ನಾಭರಣ, ಎರಡು ಕೆ.ಜಿ. ಬೆಳ್ಳಿ ಮತ್ತು ₹ 35 ಸಾವಿರ ನಗದು ಕಳ್ಳತನವಾಗಿದೆ.

‘ಮಾ.23ರಂದು ಕಲ್‌ ತಾವರಗೇರಾ ಗ್ರಾಮಕ್ಕೆ ಹೋಗಿದ್ದಾಗ ಪತಿ ಮನೆಯಲ್ಲಿ ಒಬ್ಬರೇ ಇದ್ದರು. ಅಂದು ರಾತ್ರಿ ಕರ್ತವ್ಯಕ್ಕೆ ಹೋಗಿದ್ದ ಅವರು ಬೆಳಿಗ್ಗೆ ನೇರವಾಗಿ ಕಲ್‌ ತಾವರಗೇರಾಕ್ಕೆ ಬಂದಿದ್ದಾರೆ. ಮರುದಿನ ಮಧ್ಯಾಹ್ನ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಬೆಡ್‌ರೂಮ್‌ನಲ್ಲಿ ಇರಿಸಲಾಗಿದ್ದ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು’ ಎಂದು ದೂರಿನಲ್ಲಿ ಸುಜಾತಾ ತಿಳಿಸಿದ್ದಾರೆ.

ಬೈಕ್‌ ಕಳವು: ಇಲ್ಲಿನ ಕೇಂದ್ರಿಯ ಬಸ್‌ ನಿಲ್ದಾಣದ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್‌ ಕಳ್ಳತನವಾಗಿದೆ ಎಂದು ಭಾಗ್ಯನಗರದ ಸುಭಾಷಚಂದ್ರ ಎಂಬುವರು ನಗರ ಠಾಣೆಗೆ ದೂರು ನೀಡಿದ್ದಾರೆ. ನಗರದಿಂದ ಗಂಗಾವತಿಗೆ ಬಸ್‌ಗೆ ಹೋಗುವ ಮೊದಲು ಅವರ ಪುತ್ರ ಬಸ್‌ ನಿಲ್ದಾಣದ ಆವರಣದಲ್ಲಿ ಬೈಕ್‌ ಬಿಟ್ಟು ಹೋಗಿ ಬರುವಷ್ಟರಲ್ಲಿ ಈ ಘಟನೆ ನಡೆದಿದೆ.

ಬೀಳದ ಲಗಾಮು: ನಗರದಲ್ಲಿ ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಮನೆಗೆ ಬೀಗ ಹಾಕಿಕೊಂಡು ಹೋದರೆ ಸಾಕು ವಾಪಸ್‌ ಬರುವಷ್ಟರಲ್ಲಿ ಮನೆಯ ಸಾಮಗ್ರಿ ಸುರಕ್ಷಿತವಾಗಿ ಇರುತ್ತವೆಯೇ? ಎನ್ನುವ ಭಯ ಆವರಿಸಿದೆ.

ಕಳೆದ ವಾರ ನಗರದ ಧನ್ವಂತರಿ ಕಾಲೊನಿಯಲ್ಲಿ ಪಾಂಡುರಂಗ ಎಂಬುವರ ಮನೆಯಲ್ಲಿಯೂ ಕಳ್ಳತನ ನಡೆದಿದ್ದು, ₹1.40 ಲಕ್ಷ ಮೌಲ್ಯದ 35 ಗ್ರಾಂ ಚಿನ್ನಾಭರಣ, 166 ಗ್ರಾಂ ಬೆಳ್ಳಿ ಮತ್ತು ನಗದು ಕಳ್ಳತನವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಕಳ್ಳತನ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT