ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾದ್ರಿ ಅಭಿವೃದ್ಧಿಗೆ ಸಿಗಲಿದೆಯೇ ವೇಗ?

ಕಿಷ್ಕೆಂಧೆ ಕ್ಷೇತ್ರದ ಐತಿಹಾಸಿಕ ಸ್ಥಳಗಳಿಗೆ ಸಿಗದ ಸುಧಾರಣೆಯ ಭಾಗ್ಯ
Last Updated 1 ಆಗಸ್ಟ್ 2022, 3:54 IST
ಅಕ್ಷರ ಗಾತ್ರ

ಕೊಪ್ಪಳ: ಕಿಷ್ಕೆಂಧೆ ಪ್ರದೇಶದಲ್ಲಿರುವ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಅಂಜನಾದ್ರಿ ಬೆಟ್ಟ ಈಗ ದೇಶದ ಜನರ ಗಮನ ಸೆಳೆಯುತ್ತಿದೆ. ಈ ಕ್ಷೇತ್ರವೇ ಹನುಮ ಜನಿಸಿದ ಸ್ಥಳ ಎನ್ನುವ ವಾದ ಬಲ ಪಡೆದುಕೊಳ್ಳುತ್ತಿದ್ದಂತೆ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ಈ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ₹120 ಕೋಟಿ ಅನುದಾನ ಮೀಸಲಿಟ್ಟಿದ್ದು, ಇಲ್ಲಿನ ಜನರಲ್ಲಿ ಅಭಿವೃದ್ಧಿಯ ನಿರೀಕ್ಷೆ ಗರಿಗೆದರಿದೆ.

ಈ ಕ್ಷೇತ್ರವೇ ಹನುಮ ಜನಿಸಿದ ನಾಡು ಎಂದು ಇತಿಹಾಸ ಸಂಶೋಧಕರು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಯಾದ ಬಳಿಕ ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿಗೆ ಅಂಜನಾದ್ರಿಗೆ ಸೋಮವಾರ (ಆಗಸ್ಟ್‌ 1) ಭೇಟಿ ನೀಡಲಿದ್ದಾರೆ. ಇದಕ್ಕಾಗಿ ಕೊಪ್ಪಳ ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ.

ವಾದ: ವಾಲ್ಮೀಕಿ ರಾಮಾಯಣದ ಉಲ್ಲೇಖದಂತೆ ಹಂಪಿ ಹಾಗೂ ಆನೆಗೊಂದಿ ಕಿಷ್ಕಿಂಧ ಕ್ಷೇತ್ರವಾಗಿತ್ತು. ತುಂಗಭದ್ರಾ ನದಿ ದಂಡೆಯ ಸಮೀಪ ಅಂಜನಾದ್ರಿ, ಆನೆಗುಂದಿಯ ನದಿಯ ಇನ್ನೊಂದು ಭಾಗ ಹಂಪಿಯಲ್ಲಿರುವ ಸೀತೆಯ ಸೆರಗು, ಮಾತಂಗ ಪರ್ವತ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಈ ನದಿಯ ಉತ್ತರ ಭಾಗದಲ್ಲಿರುವ ಹನುಮನಹಳ್ಳಿ ಮತ್ತು ಸುಗ್ರೀವ ಗುಹೆ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎನ್ನುವುದಕ್ಕೆ ಸಾಕ್ಷಿ ಒದಗಿಸುತ್ತವೆ ಎನ್ನುತ್ತಾರೆ ಇತಿಹಾಸ ಸಂಶೋಧಕರು.

ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಒತ್ತು ಕೊಡುತ್ತಿದೆ. ಈ ಕ್ಷೇತ್ರದ ಸುತ್ತಲೂ ಹಲವಾರು ಐತಿಹಾಸಕ ಸ್ಥಳಗಳಿದ್ದರೂ ಎಲ್ಲರೂ ಕೇಂದ್ರ ಬಿಂದು ಅಂಜನಾದ್ರಿ ಆಗಿದೆ. ಸರ್ಕಾರದ ಸದ್ಯದ ಯೋಜನೆಯ ಪ್ರಕಾರ ಕಾಮಗಾರಿಗಳನ್ನುಅನುಷ್ಠಾನಕ್ಕೆತಂದರೆ ಇಲ್ಲಿನ ಭೂಮಿ, ಗಿಡ, ನೈಸರ್ಗಿಕ ಸೊಬಗು, ವನ್ಯ ಜೀವಿಗಳ ಸಂತತಿ ಕಣ್ಮರೆಯಾಗಿ ಕೇವಲ ಮಹಡಿಗಳು ಮಾತ್ರ ಕಾಣುತ್ತವೆ ಎನ್ನುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ.

ಮತಬ್ಯಾಂಕ್‌ ರಾಜಕಾರಣದ ಹಿತಾಸಕ್ತಿ?: ಅಂಜನಾದ್ರಿ ಅಭಿವೃದ್ಧಿ ವಿಷಯ ಈಗ ಜಿಲ್ಲೆಯ ರಾಜಕೀಯ ನಾಯಕರ ನಡುವೆ ಜಟಾಪಟಿಗೂ ಕಾರಣವಾಗಿದೆ.

ಜಿಲ್ಲೆಯ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ’ಅಂಜನಾದ್ರಿ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದರೆ, ಬಿಜೆಪಿ ಇದನ್ನೇ ಮುಂಬರುವ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಮತ ಬ್ಯಾಂಕ್‌ ಆಗಿ ಪರಿವರ್ತಿಸಿಕೊಳ್ಳಲು ಯತ್ನಿಸುತ್ತಿದೆ. ಆಂಜನೇಯ ಬಿಜೆಪಿ ಆಸ್ತಿಯಲ್ಲ. ನಮ್ಮೆಲ್ಲರ ಆರಾಧ್ಯ ದೈವ’ ಎನ್ನುತ್ತಿದ್ದಾರೆ. ಆದರೆ, ಇದನ್ನು ಬಿಜೆಪಿ ನಾಯಕರು ’ಅಂಜನಾದ್ರಿ ಅಭಿವೃದ್ಧಿ ವಿಷಯದಲ್ಲಿ ರಾಜಕೀಯದ ಪ್ರಶ್ನೆಯೇ ಇಲ್ಲ’ ಎನ್ನುತ್ತಿದ್ದಾರೆ.

ಈ ಎಲ್ಲಾ ಜಿದ್ದಾಜಿದ್ದಿ, ಏಟು–ತಿರುಗೇಟಿನ ನಡುವೆ ಹನುಮನ ಭಕ್ತರು ರಾಜ್ಯ ಸರ್ಕಾರ ತಿರುಮಲ ತಿರುಪತಿ ಟ್ರಸ್ಟ್ ಹಾಗೂ ಮಹಾರಾಷ್ಟ್ರದ ಸಂತರ ವಾದ ಬದಿಗಿಟ್ಟು ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ಅಧಿಕೃತವಾಗಿ ಘೋಷಣೆ ಮಾಡಬೇಕು. ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದರಿಂದ ವ್ಯಾಪಾರ ವಹಿವಾಟು, ಕ್ಷೇತ್ರ ಅಭಿವೃದ್ಧಿಗೆ ವೇಗಕ್ಕೆ ಬಲ ಬರುತ್ತದೆ ಎನ್ನುತ್ತಾರೆ ಭಕ್ತರು.

ಪ್ರಕೃತಿ ಸೌಂದರ್ಯದ ಗಣಿಯಲ್ಲಿ ಮೂಲ ಸೌಕರ್ಯಕ್ಕೆ ಅಲೆದಾಟ

ಎನ್‌. ವಿಜಯ

ಗಂಗಾವತಿ: ಅಂಜನಾದ್ರಿ ಬೆಟ್ಟಕ್ಕೆ ನಿತ್ಯ ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದರೂ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಈ ದೇವಸ್ಥಾನ ಬೆಟ್ಟದ ತುದಿಯಲ್ಲಿದ್ದು, ಇಲ್ಲಿಂದ ಕಣ್ಣು ಹಾಯಿಸಿದದಷ್ಟೂ ದೂರ ಪ್ರಕೃತಿ ಸೌಂದರ್ಯ ಕಾಣುತ್ತದೆ. ಬೆಟ್ಟದಲ್ಲಿ ಕುರಚಲು ಗಿಡ, ಕಲ್ಲು-ಬಂಡೆಗಳ ಮೇಲೆ ಕುಳಿತರೆ ತಂಗಾಳಿ, ಬೆಟ್ಟಗುಡ್ಡಗಳ ಸಾಲು, ವಿಜಯನಗರ ಸಾಮಾಜ್ಯದ ಸ್ಮಾರಕಗಳು ಕಣ್ಮನ ಸೆಳೆಯುತ್ತವೆ.

ಅಂಜನಾದ್ರಿ ಪರ್ವತಕ್ಕೆ ಪ್ರತಿ ಶನಿವಾರ 10 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡುತ್ತಿದ್ದಾರೆ. ಬರುವ ಭಕ್ತರಿಗೆ ಕುಡಿಯುವ ನೀರು, ಸ್ನಾನಗೃಹ, ಯಾತ್ರಿ ನಿವಾಸ ವ್ಯವಸ್ಥೆ ಇಲ್ಲದಂತಾಗಿದೆ. 545 ಮೆಟ್ಟಿಲುಗಳನ್ನು ಹತ್ತಿ ಆಂಜನೇಯ ದರ್ಶನ ಪಡೆಯಲು ಮಹಿಳೆಯರು, ಹಿರಿಯರು ಬರುತ್ತಾರೆ. ಅವರಿಗೆ ಮೆಟ್ಟಿಲು ಹತ್ತುವಾಗ ಕುಡಿಯಲು ಹನಿ ನೀರಿನ ವ್ಯವಸ್ಥೆಯೂ ಇಲ್ಲದಂತಾಗಿದೆ.

ಶೌಚಾಲಯವಿದ್ದರೂ ಸಮರ್ಪಕ ನಿರ್ವಹಣೆಯಿಲ್ಲ. ವಾಹನ ನಿಲುಗಡೆಯ ಜಾಗದ ಕೊರತೆಯಿಂದ ಪ್ರತಿ ಶನಿವಾರ ಸಂಚಾರ ದಟ್ಟಣೆಯಾಗುವುದು ಸಾಮಾನ್ಯವಾಗಿದೆ. ಭಕ್ತರ ಸಂಖ್ಯೆಗೆ ಅನುಗುಣವಾಗಿ ಶುಚಿಯಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಆಸ್ಪತ್ರೆ ಸೌಲಭ್ಯ ಕಲ್ಪಿಸಬೇಕಾಗಿದೆ.

ಅಲಂಕಾರ, ಭಜನೆ: ಅಂಜನಾದ್ರಿ ಬೆಟ್ಟದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪಂಚಾಮೃತ ಅಭಿಷೇಕ, ಅಲಂಕಾರ, ಪವನ ಹೋಮದ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಹನುಮಮಾಲಾ, ಹನುಮ ಜಯಂತಿ ಮತ್ತು ದೀಪಾವಳಿಯ ಸಮಯದಲ್ಲಿ ಕಾರ್ತೀಕ ದೀಪೋತ್ಸವ ಅದ್ದೂರಿಯಾಗಿ ನಡೆಯುತ್ತದೆ.

ಅಂಜನಾದ್ರಿಗಷ್ಟೇ ಆದ್ಯತೆ: ಅಂಜನಾದ್ರಿ ಪರ್ವತದ ಸಮೀಪದಲ್ಲಿಯೇ ಪಂಪಾಸರೋವರ, ಋಷಿಮುಖ ಪರ್ವತ, ದುರ್ಗಾದೇವಿ ದೇವಸ್ಥಾನ, ಆನೆಗೊಂದಿಯಲ್ಲಿ ತಳವಾರಘಟ್ಟ, 64 ಮಂಟಪದ ಸಾಲು, ನವವೃಂದಾವನ, ಗಗನ್ ಮಹಲ್, ರಂಗನಾಥ ದೇವಸ್ಥಾನ ಹೀಗೆ ಅನೇಕ ಸ್ಮಾರಕಗಳು ಮತ್ತು ಐತಿಹಾಸಿಕ ಸ್ಥಳಗಳು ಇದ್ದರೂ ಅವುಗಳ ಅಭಿವೃದ್ಧಿಗೆ ಸರ್ಕಾರ ಆಸಕ್ತಿ ತೋರಿಸಿಲ್ಲ.

ಪ್ರವಾಸಿ ತಾಣವಾದ ಅಂಜನಾದ್ರಿ: ಅಂಜನಾದ್ರಿ ಪರ್ವತ ಧಾರ್ಮಿಕ ತಾಣದ ಜೊತೆ ಪ್ರವಾಸಿ ತಾಣವಾಗಿಯೂ ಮಾರ್ಪಾಡಾಗಿದೆ. ಅನೇಕರು ತಮ್ಮ ರಜಾ ದಿನಗಳಲ್ಲಿ ಬುತ್ತಿ ಕಟ್ಟಿಕೊಂಡು ಬಂದು ಬೆಟ್ಟದ ಮೇಲೆ ಊಟ ಮಾಡಿ ಪ್ರಕೃತಿ ಸೌಂದರ್ಯ ಸವಿಯುತ್ತಾರೆ.

ಭೂಮಿ ನೀಡಲು ರೈತರ ದ್ವಂದ್ವ ನಿಲುವು

ಕೊಪ್ಪಳ: ಅಂಜನಾದ್ರಿ ಕ್ಷೇತ್ರಕ್ಕೆ ಭೂಮಿ ಬಿಟ್ಟುಕೊಡುವ ವಿಚಾರದಲ್ಲಿ ರೈತರು ದ್ವಂದ್ವ ನಿಲುವು ಹೊಂದಿದ್ದಾರೆ.

ಸರ್ಕಾರ 62 ಎಕರೆ ಭೂಮಿ ರೈತರಿಂದ ಪಡೆದು ಅಭಿವೃದ್ಧಿಗೆ ಮುಂದಾಗಿದೆ. ಇದಕ್ಕೆ 61 ಜನ ರೈತರು ಮಾಲೀಕರಿದ್ದು, 56 ಜನ ಜಿಲ್ಲಾಧಿಕಾರಿ ಕಚೇರಿಗೆ ಖುದ್ದು ಆಕ್ಷೇಪಣೆ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿ ಭೇಟಿ ನಿಗದಿಯಾಗುತ್ತಿದ್ದಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ರೈತರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕೆಲ ರೈತರು ಭೂಮಿ ನೀಡಲು ಒಪ್ಪಿದರೆ, ಬೆರಳೆಣಿಕೆಯಷ್ಟು ರೈತರು ಮಾತ್ರ ಭೂಮಿ ನೀಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಭೇಟಿ ಬಳಿ ಭೂಮಿ ವಿಚಾರ ಚರ್ಚೆಗೆ ಬರಲಿದೆ.

ಕ್ಷೇತ್ರದ ಕುರಿತು ಪ್ರಮುಖ ಮಾಹಿತಿಗಳು

* ಆಂಜನೇಯನ ಜನ್ಮಸ್ಥಳ ಎನ್ನುವ ಪ್ರತೀತಿ.

* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮ ಪಂಚಾಯಿತಿಯ ಚಿಕ್ಕರಾಂಪುರ ಗ್ರಾಮದಲ್ಲಿ ಅಂಜನಾದ್ರಿ ಬೆಟ್ಟವಿದೆ.

* ಈ ಗ್ರಾಮವು ಒಟ್ಟು 590 ಜನಸಂಖ್ಯೆ ಹೊಂದಿದೆ. ಇಲ್ಲಿನ ಜನರ ಉದ್ಯೋಗವು ಕೃಷಿ ಪ್ರಾಧಾನ್ಯತೆ ಹಾಗೂ ಮುಖ್ಯ ಆರ್ಥಿಕ ಚಟುವಟಿಕೆಯಾಗಿದೆ.

* ಈ ಪ್ರದೇಶವು ಗಂಗಾವತಿಯಿಂದ 14 ಕಿ.ಮೀ. ಮತ್ತು ಕೊಪ್ಪಳದಿಂದ 37 ಕಿ.ಮೀ. ದೂರದಲ್ಲಿರುತ್ತದೆ.

* ಅಂಜನಾದ್ರಿಯು ವಿಶ್ವಪಾರಂಪರಿಕ ಮಟ್ಟದಲ್ಲಿದ್ದು, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಬಫರ್ ವಲಯದಲ್ಲಿರುತ್ತದೆ.

* ಬೆಟ್ಟದ ಸುತ್ತಲಿನ ಮನಮೋಹಕ ಪರಿಸರ.

* ಅಂಜನಾದ್ರಿ ಸಮೀಪವೇ ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು ಇವೆ.

* ಅಂಜನಾದ್ರಿ ಸಮೀಪವೇ ಪಂಪಾಸರೋವರ ಇದೆ.

* ಸಮೀಪದ ತುಂಗಭದ್ರ ನದಿಯ ಮಧ್ಯದಲ್ಲಿ ನವ ವೃಂದಾವನ ಇರುವುದು.

* ರಾಮಾಯಣದ ಭಾಗವಾದ ಋಷಿಮುಖಿ ಪರ್ವತ 2 ಕಿ.ಮೀ. ದೂರದಲ್ಲಿದೆ.

ಅಂಜನಾದ್ರಿ ಅಭಿವೃದ್ಧಿಗೆ ಸರ್ಕಾರ ರೂಪಿಸಿರುವ ಯೋಜನೆಗಳು

*ಕೇಂದ್ರ ಸರ್ಕಾರದ ‘ಪರ್ವತಮಾಲಾ’ ಯೋಜನೆಯಡಿ ಅಂಜನಾದ್ರಿ ಬೆಟ್ಟಕ್ಕೆ ರೋಪ್‌-ವೇ ಅಳವಡಿಸುವ ಪ್ರಸ್ತಾವ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ ಸಲ್ಲಿಕೆ.

* 600 ಕೊಠಡಿಗಳು ಹಾಗೂ ಪ್ರವಾಸಿ ಮಂದಿರ

* ಊಟದ ಹಾಲ್‌ ಹಾಗೂ ಅಡುಗೆ ಮನೆ

* ಶಾಪಿಂಗ್‌ ಕಾಂಪ್ಲೆಕ್ಸ್‌ ಮತ್ತು ಸಾರ್ವಜನಿಕ ಶೌಚಾಲಯ

* ಪ್ರದಕ್ಷಣಾ ಪಥ

* ದೇವಸ್ಥಾನ ಸಿಬ್ಬಂದಿಗೆ ತಂಗಲು ವ್ಯವಸ್ಥೆ

* ದೇವಸ್ಥಾನ ನವೀಕರಣ

* ಆಡಿಯೊ ಶೋ ಸೌಂಡ್‌ ಮೂಲಕ ರಾಮಾಯಣ ಪೇಂಟಿಂಗ್‌

***

ಅಂಜನಾದ್ರಿ ಕ್ಷೇತ್ರದಲ್ಲಿ ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆ ತರುವಂತೆ ಕಾಮಗಾರಿ ಮಾಡಬೇಕು. ರೋಪ್‌ ವೇ ನಿರ್ಮಾಣಕ್ಕೆ ವಿರೋಧವಿದೆ.
- ಬಾಲಪ್ಪ, ಹನುಮನಹಳ್ಳಿ

ಅಂಜನಾದ್ರಿ ಪರ್ವತಕ್ಕೆ ಪ್ರತಿ ಶನಿವಾರ ಸಾವಿರಾರು ಭಕ್ತರು ಬರುತ್ತಾರೆ. ಅವರಿಗೆ ಅನ್ನಸಂತರ್ಪಣೆ, ಸಮರ್ಪಕ ಶೌಚಾಲಯ, ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.
- ಪುನೀತ್ ಕುಮಾರ, ಹನುಮನಹಳ್ಳಿ ನಿವಾಸಿ

ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎನ್ನುವುದು ರಾಮಾಯಣದಲ್ಲಿ ಉಲ್ಲೇಖವಾಗಿದೆ. ಕಿಷ್ಕಂಧೆಯ ಭಾಗವಾಗಿರುವ ಈ ಸ್ಥಳದಲ್ಲೇ ಹನುಮ ಜನಿಸಿದ್ದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
-ಡಾ. ಶರಣಬಸಪ್ಪ ಕೋಲ್ಕಾರ್‌, ಇತಿಹಾಸ ಸಂಶೋಧಕರು

ತಿರುಪತಿ, ಮಹಾರಾಷ್ಟ್ರದಲ್ಲಿ ಆಂಜನೇಯ ಜನಿಸಿದ ಎನ್ನುವ ವಾದಕ್ಕೆ ಅಲ್ಲಿಯವರು ಸಾಕ್ಷಿ ಒದಗಿಸಬೇಕು. ನಮ್ಮಲ್ಲಿರುವಂತೆ ಅಲ್ಲಿ ಪಂಪಾಸರೋವರ, ಮಾತಂಗ ಪರ್ವತ, ಋಷಮುಖ ಪರ್ವತ ಇವೆಯೇ ಎನ್ನುವುದನ್ನು ಸಾಬೀತುಪಡಿಸಬೇಕು. ರಾಮಾಯಣದ ಪ್ರಕಾರ ಜಿಲ್ಲೆಯ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎನ್ನುವುದು ಸ್ಪಷ್ಟ.
- ಪವನಕುಮಾರ್‌ ಗುಂಡೂರು, ಉಪನ್ಯಾಸಕರು, ಗಂಗಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT