ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿ ಕೆಟ್ಟವರಿಲ್ಲವೋ ಭೂಮಿಯ...

ಮಳೆ ಬೆಳೆ ಇಲ್ಲದೆ ಕಂಗಾಲಾದ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಆತ್ಮಸ್ಥೈರ್ಯ ಅಗತ್ಯ
Last Updated 11 ಆಗಸ್ಟ್ 2015, 8:56 IST
ಅಕ್ಷರ ಗಾತ್ರ

ಕೊಪ್ಪಳ: ಮಳೆ ಬೆಳೆ ಇಲ್ಲದೇ ಕಂಗಾಲಾದವರು, ಆತ್ಮಹತ್ಯೆ ಮಾಡಿಕೊಂಡು ಸುದ್ದಿಯಾದವರು ಒಂದೆಡೆ. ಭೂಮಿ ನಂಬಿದರೆ ಮೋಸವಿಲ್ಲ. ಹಿತಮಿತವಾಗಿ ದುಡಿದು, ಇತಿಮಿತಿಯೊಳಗೆ ಬಾಳಿ ಎಂದು ಹೇಳುವ ರೈತರು ಇನ್ನೊಂದೆಡೆ...
ಇಂಥ ಸ್ಪಷ್ಟ ಸಂದೇಶ ನೀಡುತ್ತಿದ್ದಾರೆ ಚಿಲವಾಡಗಿಯ ರೈತರು.

ಚಿಲವಾಡಗಿ ತಾಲ್ಲೂಕು ಕೇಂದ್ರದಿಂದ ಸುಮಾರು 5 ಕಿಲೋಮೀಟರ್‌ ದೂರದ ಗ್ರಾಮ. ಇಲ್ಲಿರುವವರು ಬಹುತೇಕರು ಸಣ್ಣ ಹಿಡುವಳಿದಾರರು. ಅಲ್ಪ ಭೂಮಿಯಲ್ಲಿ ಬಹುಬೆಳೆ ಪದ್ಧತಿ ಅಳವಡಿಸಿಕೊಂಡು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ.

ಗ್ರಾಮದ ರೈತ ಯಮನೂರಪ್ಪ ಹಂಚಿ ಅವರಲ್ಲೊಬ್ಬರು. ಶಾಲೆಯ ಮೆಟ್ಟಿಲು ಹತ್ತಿದವರಲ್ಲ. 7 ಎಕರೆ ಭೂಮಿಯನ್ನು ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ. ಅವರದ್ದೇ ಆಲೋಚನೆ ಅಳವಡಿಸಿಕೊಂಡು ಏಕಪ್ರಕಾರವಾದ ಇಳುವರಿ ಪಡೆಯುತ್ತಿದ್ದಾರೆ.

ಒಂದೂವರೆ ಎಕರೆ ಪ್ರದೇಶದಲ್ಲಿ ತೊಗರಿ, ಅರ್ಧ ಎಕರೆ ಕಡಲೆ, 4 ಎಕರೆ ಕಬ್ಬು, ಅರ್ಧ ಎಕರೆ ಬೆಂಡೆಕಾಯಿ, ಇನ್ನೂ ಅರ್ಧ ಎಕರೆ ಪ್ರದೇಶವನ್ನು ಖಾಲಿ ಬಿಟ್ಟಿದ್ದಾರೆ.

ಅಲ್ಪ ಪ್ರಮಾಣದ ಮಳೆಗೆ ತೊಗರಿ ಚೆನ್ನಾಗಿ ಬೆಳೆದಿದೆ. ಕಬ್ಬಿಗೆ ಬೋರ್‌ವೆಲ್‌ ನೀರು ಸಾಕಾಗುತ್ತದೆ. ಒಂದು ಬೆಳೆ ಕೈಕೊಟ್ಟರೆ ಆತಂಕ ಇಲ್ಲ. ಅದರಿಂದಾಗುವ ನಷ್ಟವನ್ನು ಇನ್ನೊಂದು ಬೆಳೆಯ ಫಸಲು ಸರಿದೂಗಿಸುತ್ತದೆ. ಅಂತೂ ನೆಮ್ಮದಿಯ ಬದುಕಿಗೆ ಚಿಂತೆ ಇಲ್ಲ ಎಂದು ಹಸನ್ಮುಖಿಯಾಗಿ ಹೇಳುತ್ತಾರೆ ಅವರು.

ಹೀಗೆ ಬಹುಬೆಳೆ ಪದ್ಧತಿ ಅನುಸರಿಸುವಾಗ ಬೀಜೋಪಚಾರ ಇತ್ಯಾದಿ ಬಗ್ಗೆ ಜ್ಞಾನ ಇರಲಿಲ್ಲ. ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ಬಿ. ಪಾಟೀಲ ಮತ್ತು ತಂಡದವರು ಬೀಜೋಪಚಾರಕ್ಕೆ ಸಾಕಷ್ಟು ಮಾರ್ಗದರ್ಶನ ನೀಡಿದರು.

ಉಚಿತವಾಗಿ ಬಿತ್ತನೆ ಬೀಜ, ಅದಕ್ಕೆ ಬೇಕಾಗುವ ಪೂರಕ ಸಾಮಗ್ರಿ ಒದಗಿಸಿದರು ಎಂದು ಕೃತಜ್ಞತೆಯಿಂದ ನೆನೆದರು.
ಕಳೆದ ವರ್ಷ ಕಬ್ಬು ಉತ್ತಮ ಇಳುವರಿ ಬಂದಿತ್ತು.  ಈ ಬಾರಿ ಮಳೆಯ ಹಿನ್ನಡೆ ಕಾರಣ ಪರಿಸ್ಥಿತಿ ಆತಂಕಕಾರಿಯಾಗಿದೆ. ಆದ್ದರಿಂದ ಅದರ ಮೇಲೆ ಹೆಚ್ಚು ಭರವಸೆ ಇಲ್ಲ. ಉಳಿದ ಬೆಳೆಗಳ ಬಗ್ಗೆ ನಿರೀಕ್ಷೆಯಿದೆ ಎಂದರು ಅವರು.

ಸಾಲ ನಮ್ಮ ಇತಿಮಿತಿಯೊಳಗೆ ಮಾಡಬೇಕು. ವಿಪರೀತ ಸಾಲ ಮಾಡಿ, ಆ ಹಣವನ್ನು ಇನ್ನೇನಕ್ಕೋ ಬಳಸಿ ಮರುಪಾವತಿಗೆ ಬೆಳೆಯಿಂದಲೇ ಆಗಬೇಕು ಎಂದರೆ ಹೇಗೆ? ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವವರ ಬಗ್ಗೆ ನಾನೇನೂ ಹೇಳಲಾರೆ. ಅದು ಸರಿಯಲ್ಲ ಎಂಬುದಷ್ಟೇ ನನ್ನ ಅಭಿಪ್ರಾಯ ಎಂದರು ಅವರು. 

ಚಿಲವಾಡಗಿ ಭಾಗದಲ್ಲಿ ಕಬ್ಬು, ಹತ್ತಿ ಜತೆಗೆ ತರಕಾರಿ ಬೆಳೆ ಬೆಳೆದು ಯಶಸ್ವಿಯಾದವರೇ ಬಹುಪಾಲು ಮಂದಿ. ಮುಕ್ಕಣ್ಣ ಹೊಸಕೇರಿ, ಅವರು ಈರುಳ್ಳಿ, ಟೊಮೆಟೊ, ಬದನೆಕಾಯಿ ಬೆಳೆಯುತ್ತಾರೆ. ಹೀಗೆ ಹಲವು ರೈತರು ಈ ಗ್ರಾಮದಲ್ಲಿ ಉದಾಹರಣೆಯಾಗಿ ನಿಲ್ಲುತ್ತಾರೆ. ಪುಟ್ಟ ವಾಹನಗಳಲ್ಲಿ ನೂರಾರು ಬುಟ್ಟಿ ತರಕಾರಿ ಗದಗ, ಹುಬ್ಬಳ್ಳಿ, ಹುನಗುಂದ, ಗಂಗಾವತಿಗೆ ರವಾನೆಯಾಗುತ್ತದೆ. ವ್ಯವಹಾರ ಕುಶಲತೆ, ಸಾಗಾಟ ವ್ಯವಸ್ಥೆ ಎಂಥ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗೂ ಒಂದು ಪಾಠ ಎನ್ನುತ್ತಾರೆ ಕೃಷಿ ತಜ್ಞರು.

ಲಾಭಂಶ
* ₨65 ಸಾವಿರ 4 ಎಕರೆ ಜಮೀನಿನ ಸರಾಸರಿ ಆದಾಯ

* 4ರಿಂದ 5 ಬಗೆ ಪ್ರತಿ ರೈತನ ಬಹುಬೆಳೆ

* 20ಕ್ಕೂ ಹೆಚ್ಚು ಯಶಸ್ವಿ ರೈತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT