ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ತುಂಬಿಸಿದ ಚೀಲ ತಯಾರಿಕೆ ಕಾಯಕ

ಲತಾ ಬ್ಯಾಗ್ಸ್‌; ಮಾರುಕಟ್ಟೆಗಿಲ್ಲ, ಗ್ರಾಹಕರಿಗೆ ಮಾತ್ರ
Last Updated 10 ಜುಲೈ 2017, 10:26 IST
ಅಕ್ಷರ ಗಾತ್ರ

ಕೊಪ್ಪಳ: ಏಳು ವರ್ಷಗಳ ಹಿಂದೆ ಇಲ್ಲಿಗೆ ಬಂದಾಗ ಯಾರೂ ಪರಿಚಯ ಇರಲಿಲ್ಲ. ಜತೆಗಿದ್ದದ್ದು ಟೈಲರಿಂಗ್‌ ಅನುಭವ ಮಾತ್ರ. ಅಂದು ಸಣ್ಣಮಟ್ಟಿಗೆ ಆರಂಭಿಸಿದ ಕಸುಬು ಇಂದು ಲಕ್ಷ ರೂಪಾಯಿ ವಹಿವಾಟು ನಡೆಸುವವರೆಗೆ ಮುಂದುವರಿಸಿದ್ದೇನೆ.

ಇದು ಭಾಗ್ಯನಗರದ ಧನ್ವಂತರಿ ಕಾಲೊನಿಯ ಬ್ಯಾಗ್‌ ತಯಾರಕ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾದ ಕೃಷ್ಣಮೂರ್ತಿ ಹೆಗಡೆ ಅವರ ಮಾತು.

ಧನ್ವಂತರಿ ಕಾಲೊನಿಯಲ್ಲಿ ಹಾದು ಹೋಗುವಾಗ ಲತಾ ಬ್ಯಾಗ್ಸ್‌ ಎಂಬ ಪುಟ್ಟ ಫಲಕವಷ್ಟೇ ಕಾಣುತ್ತದೆ. ಅವರ ಘಟಕದ ಒಳಗೆ ಹೋದರೆ ಹಲವು ವಿನ್ಯಾಸದ, ಅಗತ್ಯಕ್ಕೆ ತಕ್ಕಂತೆ ಸಿದ್ಧಗೊಂಡ ಬ್ಯಾಗ್‌ಗಳ ಲೋಕ ತೆರೆದುಕೊಳ್ಳುತ್ತದೆ.

ಅರೆ ಇದನ್ನು ಎಲ್ಲರೂ ಮಾಡಬಹುದಲ್ಲಾ ಅಂದು ಕೊಳ್ಳಬಹುದು. ಆದರೆ, ಕೃಷ್ಣಮೂರ್ತಿಯವರು ತಮ್ಮ ಉತ್ಪನ್ನಗಳ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ. ಮಾಡುವುದೂ ಇಲ್ಲ. ನೇರವಾಗಿ ಬರುವ ಗ್ರಾಹಕರಿಗಷ್ಟೇ ಕನಿಷ್ಠ ಲಾಭಾಂಶ ಇಟ್ಟು ಕೊಡುತ್ತಾರೆ. ಯಾವುದೇ ಪ್ರಚಾರ, ಅಬ್ಬರ ಇಲ್ಲದೆ ತಿಂಗಳಿಗೆ ಮುನ್ನೂರು ಬ್ಯಾಗ್‌ಗಳು ಮಾರಾಟವಾಗುತ್ತವೆ ಎನ್ನುತ್ತಾರೆ ಅವರು.

ಅಂದಿನ ಕಥೆ: ‘ಮೊದಲು ₹ 6 ಸಾವಿರ ವೆಚ್ಚದಲ್ಲಿ ಸೆಕೆಂಡ್‌ ಹ್ಯಾಂಡ್‌ ಟೈಲರಿಂಗ್‌ ಯಂತ್ರ ಮತ್ತು 5ರಿಂದ 6 ಸಾವಿರ ವೆಚ್ಚದಲ್ಲಿ ಕಚ್ಚಾ ವಸ್ತುಗಳನ್ನು ಖರೀದಿಸಿದೆ. ಒಟ್ಟು 12 ಸಾವಿರ ಬಂಡವಾಳ ಹಾಕಿದ್ದೆ. ಆಗ ಈ ಊರಿಗೆ ಹೊಸಬ. ಇಲ್ಲಿ ಯಾರಿಗೂ ಪರಿಚಯ ಇರಲಿಲ್ಲ. ಕಚ್ಚಾ ವಸ್ತುಗಳ ಖರೀದಿ,  ಬ್ಯಾಗ್‌ ತಯಾರಿಕೆ, ಮಾರಾಟವನ್ನು ಒಬ್ಬನೇ ಮಾಡಬೇಕಾಗಿತ್ತು.

ತಿಂಗಳಿಗೆ 30 ಬ್ಯಾಗ್‌ ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೆ. ಇದರಿಂದ ತಿಂಗಳಿಗೆ ₹ 2 ಸಾವಿರ ಆದಾಯ  ಗಳಿಸುತ್ತಿದ್ದೆ. ಆರಂಭದ 18 ತಿಂಗಳು ಇದೇ ಆದಾಯ ಇತ್ತು. ಕ್ರಮೇಣ ಜನರ ಪರಿಚಯವಾಗಿ ವಿಶ್ವಾಸ ಗಳಿಸಿದೆ. ಈ ಹಿನ್ನೆಲೆಯಲ್ಲಿ ಈಗ 7 ಯಂತ್ರಗಳಿವೆ. ದಿನಕ್ಕೆ 30 ಬ್ಯಾಗ್‌ಗಳನ್ನು ತಯಾರಿಸುತ್ತೇವೆ. ತಿಂಗಳಿಗೆ 250ರಿಂದ 300 ಬ್ಯಾಗ್‌ಗಳನ್ನು ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಕೃಷ್ಣಮೂರ್ತಿ ಹೆಗಡೆ.
   –ಅನಿಲ್‌ ಬಾಚನಹಳ್ಳಿ

***

ಉಡುಗೊರೆಯ ಬ್ಯಾಗ್‌ಗಳು...

ಹಲವು ಜನರು ಮದುವೆ, ಗೃಹ ಪ್ರವೇಶಕ್ಕೆ ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ಅತಿಥಿಗಳಿಗೆ ಉಡುಗೊರೆಯಾಗಿ ನೀಡಲು ಇಲ್ಲಿಂದ ಬ್ಯಾಗ್‌ಗಳನ್ನು ಖರೀದಿಸುತ್ತಾರೆ. ಆಗ ಬ್ಯಾಗ್‌ಗಳ ಮೇಲೆ ಹೆಸರು ನಮೂದಿಸಲಾಗುತ್ತದೆ. 50 ಬ್ಯಾಗ್‌ಗಳಿಗಿಂತ ಹೆಚ್ಚು ಬೇಡಿಕೆ ಇರಬೇಕು. ಶಾಲಾ ಮಕ್ಕಳ ಪಾಟಿ ಚೀಲದಿಂದ ಹಿಡಿದು, ಕಚೇರಿ ಬಳಕೆ, ಮಹಿಳೆಯರ ವ್ಯಾನಿಟಿ ಬ್ಯಾಗ್‌, ಬುತ್ತಿ ಚೀಲ ಹೀಗೆ ಎಲ್ಲ ವಿಧದ ಬ್ಯಾಗ್‌ಗಳು ಇಲ್ಲಿವೆ.

***

ಪರಿಶ್ರಮದಿಂದ ಯಶಸ್ಸು

ತಿಂಗಳಿಗೆ 1 ಲಕ್ಷ ವಹಿವಾಟು ಇದೆ.   ನನ್ನ ಜತೆ ಏಳು ಜನರು ಕೆಲಸ ಮಾಡುತ್ತಿದ್ದಾರೆ. ಅವರವರ ಅನುಭವದ ಮೇಲೆ 2 ಸಾವಿರದಿಂದ 10 ಸಾವಿರದವರೆಗೆ ಸಂಬಳ ನೀಡುತ್ತೇನೆ.   ಪರಿಶ್ರಮ ದಿಂದ ಮಾತ್ರ ಯಶಸ್ಸು ಸಾಧ್ಯ. ಅದಕ್ಕಾಗಿ ಈಗಲೂ ದಿನಕ್ಕೆ 12 ತಾಸು ಕೆಲಸ ಮಾಡುತ್ತೇನೆ. ಆದರೆ ಒಬ್ಬರಿಂದ ಉದ್ಯಮದ ಬೆಳವಣಿಗೆ ಸಾಧ್ಯವಿಲ್ಲ. ಕಾರ್ಮಿಕರ ಸಹಕಾರ ಬಹಳಷ್ಟು ಮುಖ್ಯ  ಎಂದು ಕೃಷ್ಣಮೂರ್ತಿ ಹೆಗಡೆ ಹೇಳಿದರು. ‘ಲತಾ ಬ್ಯಾಗ್ಸ್‌’ನ ಫೇಸ್‌ಬುಕ್‌ ಪುಟ ಇದೆ. ಮಾಹಿತಿಗೆ: ಮೊ. 99867 10069, ವಾಟ್ಸ್‌ಆ್ಯಪ್‌: 72042 66469.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT