ಸಾಲ ಮನ್ನಾ ರೈತರ ಹೊರೆ ಇಳಿಸದು: ಡಾ.ಮಹಾದೇವಪ್ಪ ಪ್ರತಿಪಾದನೆ

7
ಕೃಷಿ ಮೇಳ

ಸಾಲ ಮನ್ನಾ ರೈತರ ಹೊರೆ ಇಳಿಸದು: ಡಾ.ಮಹಾದೇವಪ್ಪ ಪ್ರತಿಪಾದನೆ

Published:
Updated:
Deccan Herald

ಶಿವಮೊಗ್ಗ: ಸಾಲಮನ್ನಾ ಮಾಡಿದರೆ ರೈತರ ಆರ್ಥಿಕ ಹೊರೆ ಒಂದು ಬಾರಿ ಇಳಿಯಬಹುದು. ಅದೇ ಅವರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿದರೆ ಸಂಪೂರ್ಣ ಜೀವನ ಸುಧಾರಿಸುತ್ತದೆ ಎಂದು ಧಾರವಾಡ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಹಾದೇವಪ್ಪ ಪ್ರತಿಪಾದಿಸಿದರು.

ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ ಆಯೋಜಿಸಿರುವ ನಾಲ್ಕು ದಿನಗಳ ಕೃಷಿ ಮೇಳವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾಲ ಮನ್ನಾ ಪುನರಾವರ್ತನೆ ಒಳ್ಳೆಯ ಬೆಳವಣಿಗೆಯಲ್ಲ. ಇದು ಸರ್ಕಾರ, ವ್ಯವಸ್ಥೆ, ರೈತರು ಎಲ್ಲರನ್ನೂ ದೀರ್ಘ ಕಾಲದ ಸಂಕಷ್ಟಕ್ಕೆ ನೂಕುತ್ತದೆ. ಇಂತಹ ಪ್ರಕ್ರಿಯೆಗೆ ಕಡಿವಾಣ ಹಾಕಿ, ರೈತರ ಬದುಕು ಹಸನು ಮಾಡಲು ಇರುವ ಉತ್ತಮ ಮಾರ್ಗ ವೈಜ್ಞಾನಿಕ ಬೆಲೆ ನಿಗದಿ ಎಂದು ವಿಶ್ಲೇಷಿಸಿದರು.

ಹಸಿವು ನೀಗಿಸದ ಆಹಾರ ಕ್ರಾಂತಿ:

ಸ್ವಾತಂತ್ರ್ಯ ಬಂದಾಗ ದೇಶದ ಜನಸಂಖ್ಯೆ ಸುಮಾರು 33 ಕೋಟಿ ಇತ್ತು. ಹಸಿರು ಕ್ರಾಂತಿಯ ಫಲವಾಗಿ ಆಹಾರ ಉತ್ಪಾದನೆಯಲ್ಲೂ ಕ್ರಾಂತಿಯಾಗಿತ್ತು. ಈಗ 123 ಕೋಟಿ ದಾಟಿದೆ. ಪ್ರಸ್ತುತ 27.3 ಕೋಟಿ ಟನ್ ಆಹಾರ ಉತ್ಪಾದನೆಯಾಗುತ್ತಿದೆ. ಆದರೂ ಹಲವು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಗರ್ಭಿಣಿಯರು, ಮಕ್ಕಳಿಗೆ ಪೌಷ್ಟಿಕಾಂಶ ದೊರಕುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ವಿಜ್ಞಾನ ಮತ್ತು ತಾಂತ್ರಿಕ ಸಂಶೋಧನೆಗಳಿಗೆ ಪ್ರಾಮುಖ್ಯತೆ ಕೊಡಬೇಕು. ರೈತರಲ್ಲಿ ತಾಂತ್ರಿಕತೆ ಮತ್ತು ಅರಿವು ಮೂಡಿಸಬೇಕು. ಕೃಷಿ ವಿಜ್ಞಾನಿಗಳು ಕಾರ್ಯಾಗಾರಗಳು, ವಿಚಾರ ಸಂಕಿರಣಗಳ ಮೂಲಕ ಜಾಗೃತಿ ಮೂಡಿಸಬೇಕು. ಕೃಷಿ ವಿಜ್ಞಾನಿಗಳು ಖಾಸಗಿ, ಸಾರ್ವಜನಿಕರ ಸಹಯೋಗದಲ್ಲಿ ಸಂಶೋಧನೆ ಕೈಗೊಳ್ಳಬೇಕು. ಅಂತಹ ಸಂಶೋಧನೆಗಳು ರೈತರ ಜಮೀನು ತಲುಪಬೇಕು ಎಂದು ಸಲಹೆ ನೀಡಿದರು.

ಇಸ್ರೇಲ್ ಮಾದರಿಗೆ ಸಲಹೆ:

ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿದ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ. ರಾಜೇಂದ್ರ ಪ್ರಸಾದ್, ನೀರಿನ ಮಿತ ಬಳಕೆ ಇಂದಿನ ಅನಿವಾರ್ಯ. ಅದಕ್ಕಾಗಿ ಇಸ್ರೇಲ್‌ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಈ ಪದ್ಧತಿಗೆ ರಾಜ್ಯ ಸರ್ಕಾರವೂ ಹೆಚ್ಚಿನ ಆಸಕ್ತಿ ವಹಿಸಿದೆ. ರೈತರಿಗೆ ಈ ಕುರಿತು ಹೆಚ್ಚಿನ ಮಾಹಿತಿ ನೀಡಬೇಕು ಎಂದರು.

ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮ ಶೀಲತೆ ನಿರ್ವಹಣಾ ವಿಶ್ವ ವಿದ್ಯಾಲಯದ ಕುಲಪತಿ ಡಾ.ವಾಸುದೇವಪ್ಪ, ಬಾಗಲಕೋಟೆ ತೋಟಗಾರಿಕೆ ವಿವಿ ಪ್ರಭಾರ ಕುಲಪತಿ ಡಾ.ಕೆ.ಎಂ. ಇಂದ್ರೇಶ್, ವಿಸ್ತರಣಾಧಿಕಾರಿ ಟಿ.ಹೆಚ್. ಗೌಡ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿನವ ಖರೆ ಉಪಸ್ಥಿತರಿದ್ದರು.

ಗಮನ ಸೆಳೆದ ಸಾವಯವ ಮನೆ:

ಮೇಳದಲ್ಲಿ ವಿಶೇಷವಾಗಿ ಸಾವಯವ ಮನೆ ಗಮನ ಸೆಳೆಯಿತು. ನೆಲಮಟ್ಟಕ್ಕಿಂತ ತುಸು ಎತ್ತರದಲ್ಲಿ ನಿರ್ಮಿಸಲಾಗಿದ್ದ ಪ್ರತ್ಯೇಕ ಮರದ ಅಟ್ಟಣಿಗೆಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ವಿವಿಧ ಬಗೆಯ ಬೆಳೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಭತ್ತ, ಅಡಿಕೆ, ಅಣಬೆ, ತೆಂಗು, ಬಾಳೆ, ರಾಗಿ, ಜೋಳ, ಮೇವು ಸೇರಿದಂತೆ ವಿವಿಧ ತಳಿಯ ನೂರಾರು ಬೆಳೆಗಳು ಹಾಗೂ ಹತ್ತು ಹಲವು ಬಗೆಯ ಕೃಷಿ ಯಂತ್ರೋಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಭೂಮಿಯ ಮಣ್ಣಿನ ಬಗೆ, ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬಹುದು. ಕೀಟ ನಾಶಕಗಳ ಬಳಕೆ, ಗೊಬ್ಬರದ ಉಪಯೋಗ, ಕೀಟ ಜಗತ್ತು, ಅವುಗಳ ಸಂಹಾರ ಕುರಿತೂ ಮಾಹಿತಿ ಲಭ್ಯವಿತ್ತು. ವಿವಿಧ ಬಗೆಯ ತಿಂಡಿ, ತಿನಿಸುಗಳು ಆಹಾರ ಪ್ರಿಯರ ಹೊಟ್ಟೆ ತಣಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !