‘ಪತ್ರಿಕೆ, ಪುಸ್ತಕ ಓದಿನಿಂದ ನೈತಿಕತೆ ವೃದ್ಧಿ’

7
ಸಾರ್ವಜನಿಕ ಗ್ರಂಥಾಲಯದಲ್ಲಿ ‘ಗ್ರಂಥಪಾಲಕರ ದಿನಾಚರಣೆ’

‘ಪತ್ರಿಕೆ, ಪುಸ್ತಕ ಓದಿನಿಂದ ನೈತಿಕತೆ ವೃದ್ಧಿ’

Published:
Updated:
Deccan Herald

ಮಾಗಡಿ: ಮಕ್ಕಳ ಕೈಗೆ ಮೊಬೈಲ್‌ ಬದಲು ಉಪಯುಕ್ತವಾದ ವಾರ ಪತ್ರಿಕೆ, ಪುಸ್ತಕ ಕೊಡುವುದರಿಂದ ನೈತಿಕತೆ ಬೆಳೆಸಿಕೊಳ್ಳಲು ಅನುಕೂಲವಾಗಲಿದೆ ಎಂದು ತಗ್ಗಿಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕೆ.ಎಸ್‌.ನಾರಾಯಣಪ್ಪ ತಿಳಿಸಿದರು.

ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ನಡೆದ ಗ್ರಂಥಪಾಲಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಂಥಗಳಿಲ್ಲದ ಮನೆ ಆತ್ಮವಿಲ್ಲದೆ ಶರೀರವಿದ್ದಂತೆ ಎಂದು ನಮ್ಮ ಗುರುಗಳು ಬಾಲ್ಯದಲ್ಲಿಯೇ ಪುಸ್ತಕಗಳ ಮಹತ್ವದ ಬಗ್ಗೆ ತಿಳಿಸಿದ್ದರು. ಪುಸ್ತಕ ಪ್ರೀತಿಯನ್ನು ಮಕ್ಕಳಲ್ಲಿ ಬೆಳೆಸದ ಹೊರತು ಸಮಾಜದಲ್ಲಿ ಸುಧಾರಣೆ ತರುವುದು ಕಷ್ಟವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಪುಸ್ತಕಗಳು ನಿತ್ಯ ನಿರಂತರವಾಗಿ ನಮ್ಮನ್ನು ತಿದ್ದಿ ತೀಡಿ ಸರಿದಾರಿಯಲ್ಲಿ ನಡೆಸಿಕೊಡುವ ನಿಜವಾದ ಮಿತ್ರರಿದ್ದಂತೆ’ ಎಂದರು.

ಹಿರಿಯರಾದ ಹೊಂಬಾಳಮ್ಮನಪೇಟೆ ದೊಡ್ಡವೀರಣ್ಣ ಮಾತನಾಡಿ, ಆಧುನಿಕ ಸಮಾಜದಲ್ಲಿ ನಡೆಯುತ್ತಿರುವ ದುಷ್ಟ ಚಟುವಟಿಕೆಗಳನ್ನು ನಿಯಂತ್ರಿಸಬೇಕಾದರೆ ಮನೆಯವರೆಲ್ಲರೂ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂದು ಹಣಕ್ಕೆ ಕೊರತೆ ಇಲ್ಲ. ಆದರೆ, ಜೀವನ ಮೌಲ್ಯಗಳು ನಾಶವಾಗುತ್ತಿವೆ. ಅಕ್ಷರ ಕಲಿತ ಮಾನವರೇ ರಾಕ್ಷಸರಾಗುತ್ತಿದ್ದಾರೆ. ಪಟ್ಟಣದಲ್ಲಿ ಗ್ರಂಥಾಲಯ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಎ.ಮಂಜುನಾಥ ಅವರು ದೊಡ್ಡ ಮನಸ್ಸು ಮಾಡಿ ಬಿಇಒ ಕಚೇರಿಯ ಎದುರಿಗೆ ಇರುವ ನಿವೇಶನದಲ್ಲಿ ಗ್ರಂಥಾಲಯ ಕಟ್ಟಡ ಕಟ್ಟಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಆಧ್ಯಾತ್ಮಿಕ ಚಿಂತಕ ಗವಿನಾಗಮಂಗಲದ ಶಿವರುದ್ರಾಚಾರ್‌ ಮಾತನಾಡಿ, ‘ನಮ್ಮ ಮನೆಯಲ್ಲಿ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳಿವೆ. ನಿತ್ಯವೂ ಪಾರಾಯಣ ಮಾಡದೆ ಬಾಯಿಗೆ ನೀರು ಬಿಡುವುದಿಲ್ಲ’ ಎಂದರು.

‘ಗ್ರಂಥಗಳನ್ನು ಓದುವುದರಿಂದ ಮಾನವ ಸಂಸ್ಕೃತಿಯ ಪರಿಚಯವಾಗಲಿದೆ. ಗ್ರಂಥಾಲಯದಲ್ಲಿ ಇರುವ ಲಕ್ಷಾಂತರ ಗ್ರಂಥಗಳನ್ನು ನೋಡಿದಾಗ ನಮಗೆ ಇಂತಹ ಅನುಕೂಲವಿರಲಿಲ್ಲ ಎಂಬ ಭಾವನೆ ಕಾಡುತ್ತದೆ’ ಎಂದರು.

ಲೇಖಕ ಕೆರೆಬೀದಿ ಈಶ ಮಾತನಾಡಿ, ಗ್ರಂಥಾಲಯದಲ್ಲಿ ಸದಸ್ಯತ್ವ ಆಂದೋಲನ ಮಾಡಿ, ಸದಸ್ಯರ ಸಂಖ್ಯೆ ಹೆಚ್ಚಿಸಬೇಕು. ಗ್ರಂಥಗಳನ್ನು ಮನೆಗೆ ಕೊಂಡೊಯ್ದು ಓದಿ ಹಿಂತಿರುಗಿಸುವ ಪದ್ದತಿ ಇದೆ ಎಂಬುದನ್ನು ಜನತೆಗೆ ತಿಳಿಸಿಕೊಡುವ ಅಗತ್ಯವಿದೆ ಎಂದರು.

ಗ್ರಂಥಾಲಯ ಅಧಿಕಾರಿ ಚಂದ್ರಕಲಾ ಮಾತನಾಡಿ , ‘ನಮ್ಮ ಗ್ರಂಥಾಲಯದಲ್ಲಿ ದಿನ, ವಾರ, ಮಾಸಪತ್ರಿಕೆಗಳು ನಿತ್ಯ ಬರುತ್ತಿವೆ. ಲಕ್ಷದ ಮೇಲೆ ಅಮೂಲ್ಯವಾದ ಕೃತಿಗಳಿವೆ. ಸ್ಪರ್ಧಾತ್ಮಕ ಪರೀಕ್ಷಗೆ ಬೇಕಾದ ಪೂರಕ ಗ್ರಂಥಗಳಿವೆ’ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ನಿತ್ಯ ಭೇಟಿ ನೀಡಿ ನೋಟ್ಸ್‌ ಮಾಡಿಕೊಳ್ಳುತ್ತಿದ್ದಾರೆ. ಸ್ವಂತ ನಿವೇಶನವಿದೆ. ಕಟ್ಟಡ ಕಟ್ಟಿಸುವ ಬಗ್ಗೆ ಇಲಾಖೆಯ ಮೇಲಧಿಕಾರಿಗಳು ಮುಂದಾಗಿದ್ದಾರೆ ಎಂದು ತಿಳಿಸಿದರು.

ಗ್ರಂಥಾಲಯದ ಪ್ರಗತಿಗೆ ದುಡಿದಿದ್ದ ಎಚ್‌.ಆರ್‌.ರಂಗನಾಥ ಅವರ ಸ್ಮರಣೆಯ ಅಂಗವಾಗಿ ಗ್ರಂಥಪಾಲಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ವೀರೇಗೌಡನದೊಡ್ಡಿ ನಾರಾಯಣಪ್ಪ, ಲೇಖಕ ಹೊಸಪೇಟೆ ಮಾದೇಶ್‌, ನಾರಾಯಣ ಮಾತನಾಡಿದರು. ಶಿವಲಿಂಗಮ್ಮ, ಸುಜಾತ, ಹೂವಾಡಿಗ ಮೋಹನ್‌ ಕುಮಾರ್‌ ನಾಯಕ ಇದ್ದರು. ಸಿಹಿ ವಿತರಿಸಲಾಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !