ಬಿಡದಿ: ಕಸದ ರಾಶಿಗೆ ಬೇಕಿದೆ ಮುಕ್ತಿ

7
ತ್ಯಾಜ್ಯ ವಿಲೇವಾರಿಗೆ ಜಾಗದ ಸಮಸ್ಯೆ; ಎಲ್ಲೆಂದರಲ್ಲಿ ಬಿದ್ದಿದೆ ತ್ಯಾಜ್ಯ

ಬಿಡದಿ: ಕಸದ ರಾಶಿಗೆ ಬೇಕಿದೆ ಮುಕ್ತಿ

Published:
Updated:
Deccan Herald

ಬಿಡದಿ (ರಾಮನಗರ): ಪಟ್ಟಣದಲ್ಲಿ ಸದ್ಯ ಎಲ್ಲಿ ನೋಡಿದರೂ ಕಸದ ರಾಶಿ ಕಣ್ಣಿಗೆ ಕಾಣುತ್ತಿದೆ.

ಎಲ್ಲೆಡೆ ಕಸದ ಗುಡ್ಡೆಗಳು ನಿರ್ಮಾಣವಾಗಿ ದುರ್ನಾತ ಬೀರಿದರೂ ಅದನ್ನು ಸ್ವಚ್ಛಗೊಳಿಸುವ ಗೋಜಿಗೆ ಪುರಸಭೆ ಹೋಗುತ್ತಿಲ್ಲ. ಕೇವಲ ಮುಖ್ಯ ರಸ್ತೆಗಳಲ್ಲಿ ಸ್ವಚ್ಛಗೊಳಿಸಿ ಕೈತೊಳೆದುಕೊಳ್ಳುತ್ತಿದೆ. ಪುರಸಭೆ ರಸ್ತೆ, ಬಿಜಿಎಸ್ ವೃತ್ತ, ರೈಲ್ವೆ ನಿಲ್ದಾಣ ರಸ್ತೆಗಳು ಹಾಗೂ ಬಡಾವಣೆಗಳು ಸ್ವಚ್ಛತೆಯಿಂದ ಮಾರು ದೂರವಿದ್ದು, ಕಸದ ರಾಶಿಯ ದುರ್ನಾತಕ್ಕೆ ಜನರೇ ಮೂಗು ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ.

ಪುರಸಭೆ ವ್ಯಾಪ್ತಿಯಲ್ಲಿ ಕಳೆದ 8 ದಿನಗಳಿಂದ ಕಸ ವಿಲೇವಾರಿ ಕಾರ್ಯ ಅಸ್ತವ್ಯಸ್ಥಗೊಂಡಿದೆ. 23 ವಾರ್ಡ್‌ಗಳಲ್ಲಿ ನಿತ್ಯ ಉತ್ಪತ್ತಿಯಾಗುತ್ತಿರುವ ಕಸ ವಿಲೇವಾರಿಗೆ ಸೂಕ್ತ ಜಾಗದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿ ಕಸ ಎತ್ತುವ ಕಾರ್ಯ ನಿಲ್ಲಿಸಿದ್ದಾರೆ.

ಪುರಸಭೆ ಸರಹದ್ದಿನಲ್ಲಿ ಪ್ರತಿದಿನ ಸುಮಾರು 8 ರಿಂದ 10 ಟ್ರಾಕ್ಟರ್‌ ಕಸ ಸಂಗ್ರಹವಾಗುತ್ತಿದ್ದು, ಇದನ್ನು ಒಪ್ಪಂದದ ಮೇರೆಗೆ ಕಳೆದ ಎರಡು ವರ್ಷಗಳಿಂದ ಖಾಸಗಿಯವರ ಜಮೀನಿನಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಒಪ್ಪಂದದ ಕರಾರಿನ ಅವಧಿ ಮುಕ್ತಾಯವಾಗಿದ್ದು, ಕಸ ವಿಲೇವಾರಿಯನ್ನು ಮುಂದುವರೆಸಲು ಖಾಸಗಿಯವರು ನಿರಾಕರಿಸಿದ್ದಾರೆ. ನಿತ್ಯ ಉತ್ಪತ್ತಿಯಾಗುತ್ತಿರುವ ದೊಡ್ಡ ಪ್ರಮಾಣದ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗವಿಲ್ಲದ ಕಾರಣ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಸದ್ಯ ರೈಲು ನಿಲ್ದಾಣದ ಸಮೀಪ ಹೆದ್ದಾರಿಯ ಪಕ್ಕವೇ ಕಸಕ್ಕೆ ಬೆಂಕಿ ಇಟ್ಟು ಸುಡಲಾಗುತ್ತಿದೆ.

‘ಬೆಂಗಳೂರಿಗೆ ತೀರಾ ಸಮೀಪದಲ್ಲಿರುವ ಬಿಡದಿ ಪಟ್ಟಣ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ದಿನನಿತ್ಯ ಉತ್ಪತ್ತಿಯಾಗುವ ಕಸ ವಿಲೇವಾರಿಗೆ ಸೂಕ್ತ ಜಾಗ ದೊರಕಿಸಿಕೊಡುವಂತೆ ಹಿಂದಿನ ಮಂಡಲ ಪಂಚಾಯಿತಿ ಆದಿಯಾಗಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗಳು ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿವೆ. ಇದೀಗ ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿ ಪುರಸಭೆಯಾಗಿ ಎರಡೂವರೆ ವರ್ಷಗಳಾದರೂ ಸಮಸ್ಯೆ ಕಾಡುತ್ತಿದೆ’ ಎಂದು ಸ್ಥಳೀಯರು ದೂರುತ್ತಾರೆ.

50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಬಿಡದಿ ಪಟ್ಟಣದಲ್ಲಿ ಉತ್ಪತ್ತಿಯಾಗುವ ಕಸಕ್ಕೆ ಸ್ಥಳಾವಕಾಶವಿಲ್ಲದ ಕಾರಣ ಸಮಸ್ಯೆಯಾಗಿದೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕೋಳಿ ತಾಜ್ಯ ಹಾಗೂ ಕಸಕಡ್ಡಿ ಸುರಿಯುತ್ತಿರುವುದರಿಂದ ಜಾನುವಾರುಗಳು ಹಸಿ ತಾಜ್ಯವನ್ನು ತಿನ್ನಲು ಮುಗಿಬೀಳುತ್ತಿವೆ. ಅಲ್ಲದೆ , ಹಂದಿ ಮತ್ತು ನಾಯಿಗಳ ಹಾವಳಿಯೂ ಹೆಚ್ಚಾಗಿದೆ.

ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗದ ಸಮಸ್ಯೆ ಇರುವ ಕಾರಣ ಪ್ರತಿದಿನ ಉತ್ಪತ್ತಿಯಾಗುವ ಕಸವನ್ನು ಪುರಸಭೆ ಸಿಬ್ಬಂದಿ ಗ್ರಾಮೀಣ ಭಾಗದ ಹಳ್ಳಕೊಳ್ಳಗಳಲ್ಲಿ ಕದ್ದು ಮುಚ್ಚಿ ವಿಲೇವಾರಿ ಮಾಡುವ ಪರಿಸ್ಥಿತಿ ಬಂದಿತ್ತು. ಇದೀಗ ಒಡಂಬಡಿಕೆ ಮಾಡಿಕೊಂಡು ಹಣಕೊಟ್ಟು ಗುತ್ತಿಗೆ ಆಧಾರದ ಮೇರೆಗೆ ಖಾಸಗಿಯವರ ಜಮೀನಿನಲ್ಲಿ ನಿರ್ವಹಣೆಗೂ ಬ್ರೇಕ್ ಬಿದ್ದಿದೆ. ಹೀಗಾಗಿ ಬಿಡದಿ ಪಟ್ಟಣದಲ್ಲಿ ಕಸದ ರಾಶಿ ಎಲ್ಲೆಡೆ ಕಂಡುಬಂದಿದೆ.
ಕಸ ವಿಲೇವಾರಿಗೆ ಗುರುತಿಸುವ ಸ್ಥಳಗಳ ಬಗ್ಗೆ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಜಾಗದ ಸಮಸ್ಯೆ ಕೂಡ ಪುರಸಭೆಗೆ ತಲೆನೋವಾಗಿ ಪರಿಣಮಿಸಿದೆ.

‘ಕೈಗಾರಿಕಾ ಕೇಂದ್ರವಾದ ಬಿಡದಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಪೆಡಂಭೂತವಾಗಿ ಬೆಳೆದುನಿಂತಿದೆ. ಘನತ್ಯಾಜ್ಯ ಸಮರ್ಪಕ ನಿರ್ವಹಣೆಗೆ ಸರ್ಕಾರವಾಗಲಿ ಅಥವಾ ಜಿಲ್ಲಾಡಳಿತವಾಗಲಿ ಈವರೆಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ’ ಎಂದು ಬಾನಂದೂರಿನ ನಂಜುಂಡಿ ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳು ಶೀಘ್ರ ಇದಕ್ಕೆ ಪರಿಹಾರ ಹುಡುಕಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !