ಭಾನುವಾರ, ಸೆಪ್ಟೆಂಬರ್ 19, 2021
29 °C
ವಾಹನ ಸವಾರರಿಗೆ ಕಾಣಿಸದ ಸೂಚನಾ ಫಲಕಗಳು

ಬಸವನಪುರ: ಅಪಘಾತ ತಾಣವಾದ ತಿರುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆರಗೋಡು: ಮಂಡ್ಯ– ಬೆಸಗರಹಳ್ಳಿ ಮುಖ್ಯರಸ್ತೆಯ ಬಸವನಪುರದ ವಿ.ಸಿ. ಕಾಲುವೆ ಬಳಿ ಇರುವ ತಿರುವು ಅಪಘಾತಗಳ ತಾಣವಾಗಿ ಮಾರ್ಪಟ್ಟಿದೆ.

ವಿ.ಸಿ. ಕಾಲುವೆ ದಾಟಿ ಕೀಲಾರ ಸಂಪರ್ಕಿಸುವ ಮಾರ್ಗದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸಿದ್ದು, ಪ್ರಾಣ ಹಾನಿ ಉಂಟಾಗಿದೆ. ಇತ್ತೀಚೆಗೆ ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾರೆ.

ತಿರುವು ಇರುವ ಬಗ್ಗೆ ಸೂಚನಾ ಫಲಕ ಅಳವಡಿಸಿದ್ದರೂ ಅದರ ಸುತ್ತಲೂ ಗಿಡಗಳು ಬೆಳೆದುಕೊಂಡಿವೆ. ಇದರಿಂದ ವಾಹನ ಸವಾರರಿಗೆ ತಿರುವು ಇರುವುದು ತಕ್ಷಣ ಗೊತ್ತಾಗುವುದಿಲ್ಲ. ಈ ತಿರುವಿನ ಬಲಭಾಗದ ಆಳದಲ್ಲಿ ಕಬ್ಬಿನ ಗದ್ದೆಗಳಿವೆ. ವಾಹನ ಸವಾರರು ವೇಗವಾಗಿ ಬಂದರೆ ನಿಯಂತ್ರಣ ಕಳೆದುಕೊಂಡು ಕಬ್ಬಿನ ಗದ್ದೆಗೆ ಬೀಳುವ ಸಂಭವ ಹೆಚ್ಚು. ರಸ್ತೆಗೆ 2–3 ವರ್ಷಗಳ ಹಿಂದೆ ಡಾಂಬರು ಹಾಕಿದ್ದು, ವಾಹನ ಸವಾರರು ಅತಿವೇಗವಾಗಿ ಸಂಚರಿಸುತ್ತಾರೆ. ಇದರಿಂದಲೂ ಅಪಘಾತಗಳು ಸಂಭವಿಸುತ್ತಿವೆ.

ರಕ್ಷಣಾ ಗೋಡೆ ಎತ್ತರಿಸಲಿ: ಕೀಲಾರ– ಈಚಗೆರೆ ಗ್ರಾಮಗಳ ಮಧ್ಯೆ ಬರುವ ಕೋಡಿಹಳ್ಳದ ಸೇತುವೆ ಕಿರಿದಾಗಿದೆ. ರಸ್ತೆಯ ಅಕ್ಕಪಕ್ಕ ಕೇವಲ ಒಂದು ಅಡಿ ರಕ್ಷಣಾ ಗೋಡೆ ಇದೆ. ವಾಹನ ಸವಾರರು ಆಯ ತಪ್ಪಿದರೆ ನಾಲೆಗೆ ಬಿದ್ದು ಪ್ರಾಣ ಕಳೆದುಕೊಳ್ಳಬೇಕಾದ ಸ್ಥಿತಿ ಇದೆ. ರಕ್ಷಣಾ ಗೋಡೆಯನ್ನು ಎತ್ತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹೊಡಾಘಟ್ಟ ಗ್ರಾಮದ ಬಳಿ ಇರುವ ಸೇತುವೆ ಶಿಥಿಲವಾಗಿದ್ದು, ಯಾವಾಗ ಕುಸಿಯುತ್ತದೆಯೋ ಎಂಬ ಆತಂಕದಲ್ಲಿ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಇದ್ದಾರೆ. ಸೇತುವೆ ದುರಸ್ತಿಗೊಳಿಸಲು ಯೋಜನೆ ರೂಪಿಸಿದ್ದರೂ ಅನುದಾನ ಮಂಜೂರಾಗದ ಕಾರಣ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಗ್ರಾಮದಿಂದ ಮುಂದೆ ಸಾಗಿದರೆ ತಿರುವ ಸಿಗುತ್ತದೆ. ಅಲ್ಲೂ ಅಪಘಾತಗಳು ಸಂಭವಿಸುತ್ತಿರುತ್ತವೆ.

ಸ್ಟೀಲ್‌ ಕಂಬಿ ಅಳವಡಿಕೆಗೆ ಕ್ರಮ

ಈ ಭಾಗದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿವೆ. ರಸ್ತೆ ಉಬ್ಬುಗಳನ್ನು ಹಾಕಲು ಸಾಧ್ಯವಿಲ್ಲ. ಸ್ಟೀಲ್ ಕಂಬಿಗಳನ್ನು ತಿರುವುಗಳಲ್ಲಿ ಹಾಕಲಾಗುವುದು. ಸೇತುವೆ ಜಾಗಗಳಲ್ಲಿ ರಕ್ಷಣಾ ಗೋಡೆಗಳನ್ನು ಎತ್ತರಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು