ಸೋಮವಾರ, ಸೆಪ್ಟೆಂಬರ್ 28, 2020
27 °C

ಆಶಾ, ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಬಿಸಿಯೂಟ ನೌಕರರಿಗೆ ಏಪ್ರಿಲ್‌ನಿಂದ ವೇತನ ಪಾವತಿ ಮಾಡಬೇಕು, ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸೋಂಕಿಗೆ ತುತ್ತಾದ ಎಲ್ಲಾ ಕಾರ್ಮಿಕರಿಗೆ ಕನಿಷ್ಟ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ, ಅಂಗನವಾಡಿ–ಬಿಸಿಯೂಟ–ಆಶಾ ಸಂಘಟನೆಗಳ ಜಂಟಿ ಸಮಿತಿ ಸದಸ್ಯರು ಶುಕ್ರವಾರ ನಗರದ ತಹಶೀಲ್ದಾರ್‌ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನದ ಬಿಸಿಯೂಟ ನೌಕರರಿಗೆ ಬೇಸಿಗೆ ರಜಾ ಅವಧಿಯನ್ನು ಒಳಗೊಂಡಂತೆ ಶಾಲೆ ಮುಚ್ಚಿರುವ ಸಂದರ್ಭದಲ್ಲಿ ಮಾಸಿಕ ₹10 ಸಾವಿರ ನೀಡಬೇಕು. ಅಕ್ಷರದಾಸೋಹದಲ್ಲಿ ಕೇಂದ್ರೀಕೃತ ಅಡುಗೆ ಪದ್ಧತಿ ಮತ್ತು ಗುತ್ತಿಗೆ ಪದ್ಧತಿ ಕೈ ಬಿಡಬೇಕು. ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಗುತ್ತಿಗೆ ಕಾರ್ಮಿಕರು, ಆಶಾ, ಅಂಗನವಾಡಿ, ಎನ್‌ಎಚ್‌ಎಂನ ಎಲ್ಲಾ ಯೋಜನಾ ಕೆಲಸಗಾರರಿಗೂ ಅಪಾಯಕಾರಿ ಕೆಲಸದ ಭತ್ಯೆಯಾಗಿ ಪ್ರತಿ ತಿಂಗಳೂ ₹10 ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಈಗಾಗಲೇ 5 ಜನ ಅಂಗನವಾಡಿ ನೌಕರರು, ಇಬ್ಬರು ಆಶಾ ಕಾರ್ಯಕರ್ತೆಯರು ಮರಣ ಹೊಂದಿದ್ದಾರೆ. ಅಲ್ಲದೆ 35 ಜನರು ಸೋಂಕಿತರಾಗಿದ್ದಾರೆ. ಕೆಲಸದ ಒತ್ತಡದ ಕಾರಣದಿಂದ 23 ನೌಕರರು ನಿಧನರಾಗಿದ್ದಾರೆ. ಅವರಿಗೆ ಕೂಡಲೇ ಪರಿಹಾರ ನೀಡಬೇಕು. ಯಾವುದೇ ಸ್ವರೂಪದಲ್ಲಿ ಮೃತಪಟ್ಟರೂ ₹50 ಲಕ್ಷ ವಿಮಾ ಸೌಲಭ್ಯ ಖಾತರಿಪಡಿಸಿ, ಅವಲಂಬಿತರಿಗೆ ಪಿಂಚಣಿ ಮತ್ತು ಕಾಯಂ ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಮಧ್ಯಾಹ್ನದ ಬಿಸಿಯೂಟ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್‌ಎಂ) ಯೋಜನೆ ಸೇರಿದಂತೆ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಸಾಕಷ್ಟು ಬಜೆಟ್‌ ಅನುದಾನ ಹಂಚಿಕೆ ಮಾಡಬೇಕು. 45,46ನೇ ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನಗಳ ಶಿಫಾರಸ್ಸಿನಂತೆ ಯೋಜನಾ ಕಾರ್ಮಿಕರನ್ನು ಕಾಯಂ ಕಾರ್ಮಿಕರಾಗಿ ಅಧಿಕೃತವಾಗಿ ಘೋಷಿಸಬೇಕು. ಮಾಸಿಕ ಕನಿಷ್ಠ ವೇತನ ₹21 ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಎಂ.ಲಕ್ಷ್ಮಿ , ಡಿ.ಎನ್‌.ವೆಂಕಟಲಕ್ಷ್ಮಿ, ಎಸ್‌.ಗಾಯತ್ರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು