ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ | ನಿರ್ವಹಣೆ ಕೊರತೆ: ಎಟಿಎಂ ಬಂದ್‌

ನಾಗಮಂಗಲ: ಹಣ ಸಿಗದೆ ಗ್ರಾಹಕರ ಪರದಾಟ, ಬ್ಯಾಂಕುಗಳಲ್ಲಿ ನೂಕುನುಗ್ಗಲು
ಉಲ್ಲಾಸ್‌ ಯು.ವಿ.
Published 22 ಜೂನ್ 2024, 6:51 IST
Last Updated 22 ಜೂನ್ 2024, 6:51 IST
ಅಕ್ಷರ ಗಾತ್ರ

ನಾಗಮಂಗಲ: ಪಟ್ಟಣದಲ್ಲಿರುವ ಕೆಲವು ಬ್ಯಾಂಕ್‌ಗಳ ‘ಎ.ಟಿ.ಎಂ’ (ಆಟೋಮೇಟೆಡ್‌ ಟೆಲ್ಲರ್‌ ಮಷಿನ್‌)ಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಕಾರಣ ಗ್ರಾಹಕರಿಗೆ ತೀವ್ರ ತೊಂದರೆಯಾಗಿ ಹಿಡಿಶಾಪ ಹಾಕುತ್ತಿದ್ದಾರೆ.

ಹೌದು, ಪಟ್ಟಣ ವ್ಯಾಪ್ತಿಯಲ್ಲಿರುವ ವಿವಿಧ ಬ್ಯಾಂಕ್‌ಗಳ ಎ.ಟಿ.ಎಂ.ಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಪದೇಪದೇ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಗ್ರಾಹಕರಿಗೆ ಸರಿಯಾದ ಸೇವೆ ದೊರಕದೆ ತುರ್ತು ಸಂದರ್ಭದಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನು ಕೇಳಿದರೆ ಬ್ಯಾಂಕ್‌ನವರು ಎ.ಟಿ.ಎಂ ಎದುರು ತಾಂತ್ರಿಕ ದೋಷದಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಫಲಕ ಹಾಕಿ ಕೈತೊಳೆದುಕೊಳ್ಳುತ್ತಾರೆ ಎಂಬುದು ಗ್ರಾಹಕರ ಆರೋಪ. 

ವಿವಿಧ ಬ್ಯಾಂಕುಗಳ ಎಟಿಎಂಗಳು ಪಟ್ಟಣದ ವ್ಯಾಪ್ತಿಯಲ್ಲಿದ್ದು, ತುರ್ತು ಸಂದರ್ಭಗಳಲ್ಲಿ ಹಣ ವಹಿವಾಟು ನಡೆಸಲು ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸ್ಥಾಪಿಸಲಾಗಿದೆ. ಅಲ್ಲದೇ ಪಟ್ಟಣದಲ್ಲಿರುವ ಎಸ್.ಬಿ.ಐ ಬ್ಯಾಂಕು ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಒಂದು ಎಟಿಎಂ ಮತ್ತು ಡೆಬಿಟ್ ಮಷಿನ್ ಅನ್ನು ಸ್ಥಾಪಿಸಲಾಗಿದೆ. ಆದರೆ ಆ ಯಂತ್ರಗಳು ಕೆಲಸ ನಿರ್ವಹಿಸಿರುವ ದಿನಗಳಿಗಿಂತ ಕೆಟ್ಟು ನಿಂತಿರುವುದು ಹೆಚ್ಚು ಎಂದು ಗ್ರಾಹಕರಾದ ಶಿವಕುಮಾರ್, ದೀಪು, ಪ್ರದೀಪ್‌ ಆರೋಪಿಸುತ್ತಾರೆ.

ಕೆಲಸ ಕಾರ್ಯಗಳಲ್ಲಿ ತೊಡಗಿರುವ ಜನರು ತುರ್ತು ಸಂದರ್ಭದಲ್ಲಿ ನಗದು ಪಡೆಯಲು ಬ್ಯಾಂಕಿಗೆ ತೆರಳಿದರೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದೆ ಎಂದು ಪಟ್ಟಣದ ಗ್ರಾಹಕರಾದ ಶಿಲ್ಪಾ, ಗಾಯತ್ರಿ, ನೇತ್ರಾ ಬೇಸರ ವ್ಯಕ್ತಪಡಿಸುತ್ತಾರೆ.

ಹಾಗೆಯೇ ಮುಂದುವರಿದಂತೆ ಕೆನರಾ ಬ್ಯಾಂಕ್ ಎರಡು ಎಟಿಎಂಗಳನ್ನು ಸ್ಥಾಪಿಸಿದ್ದು, ತಕ್ಕ ಮಟ್ಟಿಗೆ ನಿರ್ವಹಣೆ ಮಾಡುತ್ತಿದ್ದರೂ ಬಹುತೇಕ ಸಂದರ್ಭದಲ್ಲಿ ಹಣದ ಲಭ್ಯತೆಯಿಲ್ಲದಿರುವ ಪರಿಸ್ಥಿತಿ ಎದುರಾಗುತ್ತಿದೆ. ಗ್ರಾಹಕರಿಗೆ ಬೇಕಾದಾಗ ಹಣ ಸಿಗಲಿ ಎಂಬ ಉದ್ದೇಶದಿಂದ ಎಟಿಎಂ ಕೇಂದ್ರ ತೆರೆಯಲಾಗಿದೆ. ಆದರೆ ನಿರ್ವಹಣೆ ಕೊರತೆಯಿಂದ ಎಟಿಎಂ ಕೇಂದ್ರಗಳು ಇದ್ದೂ ಇಲ್ಲದಂತಾಗಿದೆ ಎಂಬುದು ನಾಗರಿಕರ ಆರೋಪ. 

ಎಲ್ಲಾ ಬ್ಯಾಂಕ್‌ಗಳು ಗ್ರಾಹಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಎಟಿಎಂ ಯಂತ್ರಗಳ ಸಮರ್ಪಕ ಕಾರ್ಯನಿರ್ವಹಣೆಗೆ ಕ್ರಮವಹಿಸಬೇಕು ಮತ್ತು ಭದ್ರತಾ ಸಿಬ್ಬಂದಿ ನೇಮಿಸಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

‘ಎಟಿಎಂ ದುರಸ್ತಿಪಡಿಸಿ’ ಪಟ್ಟಣದ ಎಟಿಎಂಗಳು ಬಹುತೇಕ ಸಂದರ್ಭ ಕೆಟ್ಟು ನಿಂತಿರುತ್ತವೆ ಅಥವಾ ನಗದು ಲಭ್ಯವಿರುವುದಿಲ್ಲ. ಹೀಗಾಗಿ ಎಟಿಎಂ ಸೌಲಭ್ಯದಿಂದ ಜನರು ವಂಚಿತರಾಗಿದ್ದಾರೆ. ಕಳೆದ ಒಂದು ವಾರದಿಂದ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಹಣ ಪಾವತಿಸಲು ಪರದಾಡುತ್ತಿದ್ದೇವೆ. 

–ಶಿವಕುಮಾರ್ ಗ್ರಾಹಕ ನಾಗಮಂಗಲ.  

‘ಹೊಸ ಯಂತ್ರಕ್ಕಾಗಿ ಕಾಯುತ್ತಿದ್ದೇವೆ’ ಎಸ್.ಬಿ.ಐ ಹಳೆಯ ಎಟಿಎಂ ಬದಲಿಸಿ ಹೊಸ ಯಂತ್ರವನ್ನು ಸ್ಥಾಪಿಸುವಂತೆ ಶಾಖೆಯ ವಿಭಾಗ ಕಚೇರಿಗೆ ಪತ್ರ ಬರೆಯಲಾಗಿದ್ದು ಹೊಸ ಯಂತ್ರಕ್ಕಾಗಿ ಕಾಯುತ್ತಿದ್ದೇವೆ. 15-20 ದಿನಗಳಲ್ಲಿ ಬರುವ ನಿರೀಕ್ಷೆಯಿದೆ.  

– ಕುಮಾರಸ್ವಾಮಿ ವ್ಯವಸ್ಥಾಪಕ ಎಸ್‌ಬಿಐ ಬ್ಯಾಂಕ್‌  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT