ವಿದ್ಯುತ್ ತಂತಿ ತುಂಡಾಗಿ ಬಸವ, ಮಾಲ್ಗುಡಿ ರೈಲುಗಳ ವಿಳಂಬ

ಮಂಗಳವಾರ, ಜೂಲೈ 23, 2019
20 °C

ವಿದ್ಯುತ್ ತಂತಿ ತುಂಡಾಗಿ ಬಸವ, ಮಾಲ್ಗುಡಿ ರೈಲುಗಳ ವಿಳಂಬ

Published:
Updated:
Prajavani

ಮಂಡ್ಯ: ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾದ ಕಾರಣ ಬುಧವಾರ ಬೆಂಗಳೂರಿನಿಂದ ಮೈಸೂರು ಕಡೆಗೆ ಹೊರಟ್ಟಿದ್ದ ಬಸವ ಎಕ್ಸ್‌ಪ್ರೆಸ್ ಹಾಗೂ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಸಂಚಾರ ತಡವಾಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ಬೆಂಗಳೂರಿನಿಂದ ಬೆಳಿಗ್ಗೆ 11.50ಕ್ಕೆ ಹೊರಟ ಬಸವ ಎಕ್ಸ್‌ಪ್ರೆಸ್ ರೈಲು ಮದ್ದೂರಿನ ಸೋಮನಹಳ್ಳಿ ತಲುಪುತ್ತಿದ್ದಂತೆ ಶೆಟ್ಟಿಹಳ್ಳಿ ಬಳಿ ವಿದ್ಯುತ್ ತಂತಿ ಮೇಲೆ ಮರ ಉರುಳಿ ಬಿದ್ದು ತಂತಿ ತುಂಡಾಯಿತು. ವಿದ್ಯುತ್ ಕಡಿತಗೊಂಡ ಕಾರಣ ಎರಡು ಗಂಟೆ ಕಾಲ ರೈಲು ಸೋಮನಹಳ್ಳಿ ಬಳಿ ನಿಂತಿತು. ರೈಲ್ವೆ ಇಲಾಖೆ ಸಿಬ್ಬಂದಿ 2.30ಕ್ಕೆ ತಂತಿ ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬೆಂಗಳೂರಿನಿಂದ ಎರಡು ಗಂಟೆ ತಡವಾಗಿ ಚಲಿಸಿದ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಮಂಡ್ಯ ಸಮೀಪ ಬರುತ್ತಿದ್ದಂತೆ ಮಂಡ್ಯ ಸಮೀಪದ ಹನಕೆರೆ ಬಳಿ ಮತ್ತೊಮ್ಮೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ದುರಸ್ತಿ ಕಾರ್ಯ ವಿಳಂಬವಾಗುತ್ತದೆ ಎಂದು ಅರಿತ ರೈಲ್ವೆ ಅಧಿಕಾರಿಗಳು ಮೈಸೂರಿನಿಂದ ಡೀಸೆಲ್ ಎಂಜಿನ್ ತರಿಸಿ, ಮಾಲ‌್ಗುಡಿ ಎಪ್ಸ್‌ಪ್ರೆಸ್‌ ರೈಲು ಮೈಸೂರು ತಲುಪುವಂತೆ ಮಾಡಿದರು.

ವಿದ್ಯುತ್ ತಂತಿ ತುಂಡಾಗಿ ಬಿದ್ದ ತಕ್ಷಣವೇ ತಂತಿಯಲ್ಲಿ ಹರಿಯುವ ವಿದ್ಯುತ್ ಸ್ವಯಂಚಾಲಿತವಾಗಿ ಕಡಿತಗೊಳ್ಳುವ ಕಾರಣ ಯಾವುದೇ ಅಪಘಾತ ಸಂಭವಿಸಲಿಲ್ಲ. ಆದರೆ, ರೈಲಿನ ಒಳಗಿದ್ದ ಪ್ರಯಾಣಿಕರು ಮಧ್ಯಾಹ್ನದ ಆಹಾರವಿಲ್ಲದೆ ಕಷ್ಟ ಅನುಭವಿಸಿದರು. ರೈಲು ಇಳಿದು ಬಸ್‌ ಮೂಲಕ ಪ್ರಯಾಣ ಮುಂದುವರೆಸಲು ಹತ್ತಿರದಲ್ಲಿ ಯಾವುದೇ ಬಸ್‌ ನಿಲ್ದಾಣವಿಲ್ಲದ ಕಾರಣ ಜನರು ರೈಲು ಇಲಾಖೆಗೆ ಹಿಡಿಶಾಪ ಹಾಕಿದರು.

ಬಸವ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಗುವಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡ ಕಾರಣ ಆ ಮಗುವನ್ನು ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಬಿಸಿಲ ತಾಪ ಹೆಚ್ಚಾಗಿದ್ದರಿಂದ ಪ್ರಯಾಣಿಕರು ಹಾಗೂ ವಯಸ್ಸಾದವರು ತೀವ್ರ ಸಮಸ್ಯೆ ಎದುರಿಸಿದರು. ಮಧ್ಯಾಹ್ನ ಸಮಯವಾದ್ದರಿಂದ ಕುಡಿಯಲು ನೀರು ಹಾಗೂ ಆಹಾರ ಸಿಗದೆ ಪ್ರಯಾಣಿಕರು ಪರಿತಪಿಸಿದರು.

ಜೊತೆಗೆ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಪ್ರಯಾಣಿಕರು ಬೆಂಗಳೂರಿನ ಕೆಂಗೇರಿಯಲ್ಲಿ ಎರಡು ಗಂಟೆ ಹಾಗೂ ಮಂಡ್ಯ ಹನಕೆರೆ ಬಳಿ ಒಂದು ಗಂಟೆ ಸಂಚಾರ ಮಾಡದೇ ನಿಂತಿದ್ದರಿಂದ ಪ್ರಯಾಣಿಕರು ಕಾದು, ಕಾದು ಹೈರಾಣಾಗಿ ಸಮಸ್ಯೆ ಅನುಭವಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !