ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: 50ನೇ ದಿನದತ್ತ ಕಾವೇರಿ ಹೋರಾಟ

ರೈತರ ವಿರೋಧದ ನಡುವೆಯೂ ತಮಿಳುನಾಡಿಗೆ ಹರಿಯುತ್ತಿದೆ 3 ಸಾವಿರ ಕ್ಯೂಸೆಕ್‌ ನೀರು
Published 22 ಅಕ್ಟೋಬರ್ 2023, 4:56 IST
Last Updated 22 ಅಕ್ಟೋಬರ್ 2023, 4:56 IST
ಅಕ್ಷರ ಗಾತ್ರ

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಚಳವಳಿ 50ನೇ ದಿನದತ್ತ ಸಾಗುತ್ತಿದೆ. ರಾಜ್ಯವನ್ನು ಕಾಡುತ್ತಿರುವ ಬರ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಬಾರದು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಆದರೆ, ರೈತರ ವಿರೋಧದ ನಡುವೆಯೂ ನಿತ್ಯ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ.

ಮುಂಗಾರು ಮಳೆ ಕೈಕೊಟ್ಟ ನಂತರ ರಾಜ್ಯದಲ್ಲಿ ಬರದ ಛಾಯೆ ಆವರಿಸಿದ ಬೆನ್ನಲ್ಲೇ ತಮಿಳುನಾಡು ಸರ್ಕಾರ ತಕರಾರರು ತೆಗೆಯಿತು. ಆರಂಭದಲ್ಲೇ 25 ಸಾವಿರ ಕ್ಯೂಸೆಕ್‌ ನೀರು ಹರಿಸಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಅದರ ನಡುವೆಯೇ ಆಗಸ್ಟ್‌ನಲ್ಲಿ ಕಾವೇರಿ ನೀರು ನಿಯಂತ್ರಣಾ ಸಮಿತಿ ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್‌ ನೀರು ಹರಿಸಬೇಕು ಎಂಬ ಶಿಫಾರಸು ಮಾಡಿತು. ನಂತರ ಸಮಿತಿಯ ಶಿಫಾರಸನ್ನು ಜಾರಿಗೊಳಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿತು.

ಬರದ ಆತಂಕದಲ್ಲಿದ್ದ ರೈತರಿಗೆ ಪ್ರಾಧಿಕಾರದ ಆದೇಶ ಆಘಾತ ತರಿಸಿತ್ತು. ನಂತರ ಜಿಲ್ಲೆಯಾದ್ಯಂತ ಪ್ರಾಧಿಕಾರದ ಆದೇಶ ವಿರೋಧಿಸಿ ಹೋರಾಟಗಳು ಆರಂಭವಾದವು. ಜಿ.ಮಾದೇಗೌಡ ಅವರ ಸಾವಿನ ನಂತರ ಕಾವೇರಿ ಕಿಚ್ಚು ತಣ್ಣಗಾಗಿದೆ ಎಂಬ ಅಸಮಾಧಾನ ಇದ್ದರೂ ಅಲ್ಲಲ್ಲಿ ಚದುರಿದಂತೆ ಪ್ರತಿಭಟನೆಗಳು ಆರಂಭಗೊಂಡವು.

ಆ.31ರಂದು ನಿರಂತರ ಹೋರಾಟ ಆರಂಭಿಸಿದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಎಲ್ಲಾ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಒಗ್ಗಟ್ಟಿನ ಹೋರಾಟ ನಡೆಸುವಂತೆ ಕರೆ ನೀಡಿತು. ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಆರಂಭಗೊಂಡ ಅನಿರ್ಧಿಷ್ಟಾವಧಿ ಧರಣಿ ಶನಿವಾರಕ್ಕೆ 48 ದಿನ ಪೂರೈಸಿದ್ದು 50ನೇ ದಿನದತ್ತ ಸಾಗುತ್ತಿದೆ.

ಕಾವೇರಿ ನೀರಿನ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ ನಂತರ ಹೋರಾಟ ತೀವ್ರಗೊಂಡಿತು. ಮಂಡ್ಯ, ಮದ್ದೂರು ಬಂದ್‌ಗೆ ಅಭೂತಪೂರ್ವ ಬೆಂಬಲ ಸಿಕ್ಕಿತು, ರಾಜ್ಯ ಕೂಡ ಬಂದ್‌ ಕೂಡ ಯಶಸ್ವಿಯಾಯಿತು.

ಬಂದ್‌ ಆಚರಣೆಯ ನಂತರವೂ ನಿರಂತರ ಧರಣಿಗೆ ಮುಂದುವರಿದಿದ್ದು ವಿವಿಧ ಸಂಘಟನೆಗಳ ಮುಖಂಡರು, ಮಹಿಳೆಯರು, ವಿದ್ಯಾರ್ಥಿಗಳು, ಮಕ್ಕಳು, ಸ್ವಾಮೀಜಿಗಳು, ವಕೀಲರು ಬೆಂಬಲ ಕೊಟ್ಟಿದ್ದಾರೆ. ಬರ ಪರಿಸ್ಥಿತಿಯಲ್ಲಿ ಸಂಕಷ್ಟ ಸೂತ್ರ ರಚನೆಯಾಗಬೇಕು ಎಂದು ಒತ್ತಾಯದೊಂದಿಗೆ ಹೋರಾಟ ಮುನ್ನಡೆಯುತ್ತಿದೆ.

‘ಕಾವೇರಿ ಹೋರಾಟ ಯಶಸ್ವಿಯಾಗಿದೆ, ಆದರೆ ರೈತರಿಗೆ ಯಾವುದೇ ಫಲ ದೊರೆತಿಲ್ಲ. ಪ್ರಾಧಿಕಾರದ ಆದೇಶವನ್ನು ಚಾಚೂತಪ್ಪದೇ ಪಾಲಿಸುತ್ತಿರುವ ಸರ್ಕಾರ ರೈತ ಪರವಾಗಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಬರ ಪರಿಸ್ಥಿತಿಯಲ್ಲಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಬೇಕಾಗಿತ್ತು’ ಎಂದು ರೈತ ಹಿತರಕ್ಷಣಾ ಸಮಿತಿ ನಾಯಕ ಕೆ.ಬೋರಯ್ಯ ಅಸಮಾಧಾನ ವ್ಯಕ್ತಪಡಿಸುತ್ತಾರೆ.

3 ಸಾವಿರ ಕ್ಯೂಸೆಕ್‌ ನೀರು:

ಪ್ರಾಧಿಕಾರದ ಆದೇಶದಂತೆ ಈಗಲೂ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್‌ ನೀರು ಹರಿದು ಹೋಗುತ್ತಿದೆ. ಕೆಆರ್‌ಎಸ್‌ ಜಲಾಶಯದಿಂದ ನದಿಗೆ 1,800 ಕ್ಯೂಸೆಕ್‌ ಹರಿಯುತ್ತಿದೆ. ಜೊತೆಗೆ ರಾಮನಗರ, ಬೆಂಗಳೂರು ಭಾಗದಿಂದ ಸೋರಿಕೆಯಾಗುತ್ತಿರುವ ನೀರು ಸೇರಿದಂತೆ 3 ಸಾವಿರ ಕ್ಯೂಸೆಕ್‌ ನೀರು ಬಿಳಿಗುಂಡ್ಲು ಜಲಾಶಯ ಸೇರುತ್ತಿದೆ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.

‘ನಿರಂತರ ಹೋರಾಟ ಮಾಡುತ್ತಿರುವ ಕಾರಣದಿಂದಲೇ ನೀರು ಹರಿಸುತ್ತಿರುವ ಪ್ರಮಾಣ 3 ಸಾವಿರ ಕ್ಯೂಸೆಕ್‌ಗೆ ಇಳಿದಿದೆ. ಇಲ್ಲದಿದ್ದರೆ 5– 10 ಸಾವಿರ ಕ್ಯೂಸೆಕ್‌ ಹರಿಸುವ ಅನಿವಾರ್ಯತೆ ಬರುತ್ತಿತ್ತು’ ಎಂದು ಸಮಿತಿಯ ನಾಯಕಿ ಸುನಂದಾ ಜಯರಾಂ ಹೇಳಿದರು.

ಸಮಿತಿ ಪ್ರಾಧಿಕಾರ ಪುನರ್‌ರಚನೆಯಾಗಲಿ

‘ಕಾವೇರಿ ನೀರು ನಿಯಂತ್ರಣ ಸಮಿತಿ ನಿರ್ವಹಣಾ ಪ್ರಾಧಿಕಾರದಲ್ಲಿ ತಮಿಳುನಾಡು ಪ್ರತಿನಿಧಿಗಳೇ ಇದ್ದಾರೆ. ಅವರ ಪಕ್ಷಪಾತದಿಂದ ಬರ ಪರಿಸ್ಥಿತಿಯಲ್ಲೂ ಕರ್ನಾಟಕದ ರೈತರಿಗೆ ನ್ಯಾಯ ಸಿಗುತ್ತಿಲ್ಲ. ಹೀಗಾಗಿ ಸಮಿತಿ ಹಾಗೂ ಪ್ರಾಧಿಕಾರದಲ್ಲಿ ಕಾವೇರಿ ವ್ಯಾಪ್ತಿಯ ರಾಜ್ಯಗಳ ಪ್ರತಿನಿಧಿಗಳು ಇರಬಾರದು. ಸಮಿತಿ ಪ್ರಾಧಿಕಾರ ಪುನರ್‌ ರಚನೆಯಾಗಬೇಕು’ ಎಂದು ಹೋರಾಟ ಸಮಿತಿಯ ಸದಸ್ಯರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT