ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದ ಗೂಡಾದ ಆನ್‌ಲೈನ್‌ ಸಾಮಾನ್ಯ ಸಭೆ

ಮೈಷುಗರ್‌ ಆವರಣದಲ್ಲಿ ನಾಟಕೀಯ ಬೆಳವಣಿಗೆ, ರೈತರಿಗಿಂತ ಪೊಲೀಸ್‌ ಸಿಬ್ಬಂದಿ, ಅಧಿಕಾರಿಗಳೇ ಹೆಚ್ಚು
Last Updated 22 ಜೂನ್ 2020, 12:10 IST
ಅಕ್ಷರ ಗಾತ್ರ

ಮಂಡ್ಯ: ಮೈಷುಗರ್‌ ಕಾರ್ಖಾನೆಯ ಆವರಣದಲ್ಲಿ ಸೋಮವಾರ ನಡೆದ 80ನೇ ವಾರ್ಷಿಕ ಆನ್‌ಲೈನ್‌ ಸಾಮಾನ್ಯ ಸಭೆಯು ಗೊಂದಲದ ಗೂಡಾಯಿತು. ತಾಂತ್ರಿಕ ಸಮಸ್ಯೆ, ಮಾಹಿತಿ ಕೊರತೆ, ರೈತರ ಆಕ್ರೋಶದಿಂದಾಗಿ ಯಾವುದೇ ನಿರ್ಣಯಕ್ಕೆ ಬರಲಾಗದೇ ಸಭೆ ಅರ್ಧಕ್ಕೆ ಮೊಟಕುಗೊಂಡಿತು.

ಕಾರ್ಖಾನೆ ಆರಂಭವಾಗುವ ಸಂಬಂಧ ಚರ್ಚೆ ನಡೆಯಬಹುದು ಎಂಬ ನಿರೀಕ್ಷೆಯಲ್ಲಿ ದೂರದ ಊರುಗಳಿಂದ ಬಂದಿದ್ದ ಕಬ್ಬುಬೆಳೆಗಾರರು ಬಂದ ದಾರಿಗೆ ಸುಂಕವಿಲ್ಲದಂತೆ ಬೇಸರದಿಂದ ವಾಪಸ್‌ ತೆರಳಿದರು. ರೈತರಿಗಿಂತ ಪೊಲೀಸ್‌ ಸಿಬ್ಬಂದಿ, ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಕಾರ್ಖಾನೆ ಹಾಗೂ ಮೈಷುಗರ್‌ ಪ್ರೌಢಶಾಲೆ ಆವರಣದಲ್ಲಿ ಬೃಹತ್‌ ಎಲ್‌ಇಡಿ ಪರದೆ ಹಾಕಿ ಸಭೆಗೆ ಸಿದ್ಧತೆ ನಡೆದಿತ್ತು. ಕಾರ್ಖಾನೆಯ ಆವರಣದಲ್ಲಿ 50 ಮಂದಿಗೆ ಹಾಗೂ ಪ್ರೌಢಶಾಲೆ ಆವರಣದಲ್ಲಿ 100 ಮಂದಿಗೆ ಅಂತರ ಕಾಯ್ದುಕೊಂಡು ಕುರ್ಚಿ ಹಾಕಲಾಗಿತ್ತು. ಕಾರ್ಖಾನೆಯ ಅಧ್ಯಕ್ಷ ಎಂ.ಮಹೇಶ್ವರರಾವ್‌ ಬೆಂಗಳೂರು ಕಚೇರಿಯಿಂದ ಬೆಳಿಗ್ಗೆ 11.15ಕ್ಕೆ ಆನ್‌ಲೈನ್‌ಗೆ ಬಂದ ನಂತರ ಸಭೆ ಆರಂಭವಾಯಿತು.

ನಂತರ ಅವರು 2013–14ನೇ ಸಾಲಿನ ವಾರ್ಷಿಕ ಲೆಕ್ಕ ಶೀರ್ಷಿಕೆ ಮಂಡನೆ ಆರಂಭಿಸಿದರು. ಬೆಂಗಳೂರು ಕಚೇರಿ ಆವರಣದ ಅಧಿಕಾರಿಗಳು ಮಾತನಾಡುತ್ತಿದ್ದ ಧ್ವನಿ ಇಲ್ಲಿಯ ರೈತರಿಗೆ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ. ಪರದೆ ಮೇಲೆ ಬರೀ ಚಿತ್ರಗಳಷ್ಟೇ ಮೂಡಿತ್ತು. ಒಂದು ರೀತಿಯ ಮೂಕಿ ಚಿತ್ರದಂತೆ ಭಾಸವಾಗುತ್ತಿತ್ತು.

ಸಭೆಯ ಮಧ್ಯದಲ್ಲಿ ಕೆಲವು ರೈತರು ಲೆಕ್ಕಪತ್ರ ಮಂಡಿಸುವುದನ್ನು ಬಿಡಿ, ಕಾರ್ಖಾನೆ ಯಾವಾಗ ಪ್ರಾರಂಭ ಮಾಡುತ್ತೀರಾ ಎಂಬ ಪ್ರಶ್ನೆಗಳನ್ನು ತೂರಿಬಿಟ್ಟರು. ಆ ಪ್ರಶ್ನೆಗಳಿಗೆ ಯಾವುದೇ ಉತ್ತರಗಳು ದೊರೆಯಲಿಲ್ಲ. ರೈತರ ಅಭಿಪ್ರಾಯಗಳನ್ನು ಕೇಳಿದ ಅಧಿಕಾರಿಗಳು ನಮಸ್ಕರಿಸಿ ಧನ್ಯವಾದ ಹೇಳುವುದು ಬಿಟ್ಟರೆ ಅವರು ಯಾವುದೇ ಉತ್ತರ ನೀಡಲಿಲ್ಲ.

‘ಇದು ಯಾವ ಸೀಮೆಯ ಆನ್‌ಲೈನ್‌ ಸಭೆ. ಯಾರು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಮುಕ್ತವಾಗಿ ಸಭೆ ನಡೆಸಲು ಅನುಮತಿ ಸಿಗದಿದ್ದರೆ ಹೇಳಿ, ನಾವು ಪೊಲೀಸರೊಂದಿಗೆ ಮಾತನಾಡಿ ಸಭೆ ನಡೆಸಲು ಅನುಮತಿ ಕೊಡಿಸುತ್ತೇವೆ. ನೀವು ಅಲ್ಲಿ ಕುಳಿತು, ಮಾತನಾಡುವ ಚಿತ್ರವನ್ನು ನೋಡಿ ಯಾವುದೇ ನಿರ್ಣಯ ಕೈಗೊಳ್ಳಲಾಗುವುದಿಲ್ಲ, ನಿಮ್ಮ ಧ್ವನಿಯೂ ಕೇಳಿಸುತ್ತಿಲ್ಲ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳ ಮಾತುಗಳು ಸ್ಪಷ್ಟವಾಗಿ ಕೇಳಿಸದ ಕಾರಣ ಆಕ್ರೋಶಗೊಂಡ ರೈತರು ಹಾಗೂ ಷೇರುದಾರರು ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು. ಭೆಯನ್ನು ರದ್ದು ಮಾಡಿ, ನೇರವಾಗಿಯೇ ಎಲ್ಲ ಷೇರುದಾರರು ಹಾಗೂ ರೈತರನ್ನು ಒಂದೆಡೆ ಸೇರಿಸಿ ಸಭೆ ನಡೆಸುವಂತೆ ಒತ್ತಾಯಿಸಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ಪದಾಧಿಕಾರಿಗಳಾದ ಕೃಷ್ಣೇಗೌಡ, ಕೆ.ಬೋರಯ್ಯ, ಎಂ.ಬಿ.ಶ್ರೀನಿವಾಸ್, ಮುದ್ದೇಗೌಡ, ಸಿ.ಕುಮಾರಿ ಸೇರಿದಂತೆ ರೈತರು ಹಾಗೂ ಷೇರುದಾರರು ಸಭೆ ಬಹಿಷ್ಕರಿಸಿ ಹೊರನಡೆದರು.

ಪೊಲೀಸ್‌ ಬಿಗಿ ಭದ್ರತೆ: ಸಭೆಯ ವೇಳೆ ಗಲಾಟೆ ನಡೆಯಬಹುದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಕಾರ್ಖಾನೆ ಆವರಣದಲ್ಲಿ ಅಪಾರ ಸಂಖ್ಯೆಯ ಪೊಲೀಸ್‌ ಸಿಬ್ಬಂದಿ, ಗೃಹರಕ್ಷಕದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

50 ಮಂದಿ ಷೇರುದಾರರಿದ್ದರೆ, ಅವರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಪೊಲೀಸರೇ ಇದ್ದರು. ಸಭೆ ಆವರಣ, ಹೊರಗಡೆ ಪೊಲೀಸರು ಸರ್ಪಗಾವಲು ಇತ್ತು. ತಹಶೀಲ್ದಾರ್‌ ನಾಗೇಶ್‌, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಕುಮುದಾ ಸ್ಥಳದಲ್ಲೇ ಇದ್ದರು.

150 ಷೇರುದಾರರಿಗೆ ಮಾತ್ರ ಅವಕಾಶ

ಮೈಷುಗರ್ ಕಾರ್ಖಾನೆಯ ಷೇರುದಾರರು 14 ಸಾವಿರ ಮಂದಿ ಇದ್ದಾರೆ. ಕೊರೊನಾ ಸೋಂಕಿನ ನೆಪಕ್ಕೆ ಕೇವಲ 150 ಮಂದಿಗೆ ಮಾತ್ರ ಸಭೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಹಿಂದೆಲ್ಲಾ ಸಾಮಾನ್ಯ ಸಭೆ ಹಬ್ಬದಂತೆ ನಡೆಯುತ್ತಿತ್ತು. ಈಗ ಗೊಂದಲದ ಗೂಡಾಗಿದೆ. ಯಾವ ಪುರುಷಾರ್ಥಕ್ಕೆ ಈ ಸಭೆ ಎಂದು ರೈತರು ಪ್ರಶ್ನಿಸಿದರು.

ಸಭೆಯಲ್ಲಿ ಗೊಂದಲ ಹೆಚ್ಚಾದಂತೆ ಪೊಲೀಸರು ಹೊರ ನಡೆಯುವಂತೆ ಷೇರುದಾರರಿಗೆ ಸೂಚನೆ ನೀಡಿದರು. ಇದರಿಂದ ಕೆರಳಿದ ಷೇರುದಾರರು, ಇಲ್ಲಿಗೆ ಕರೆಸಿ, ಹೋಗಿ ಎಂದು ಹೇಳುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

ಷೇರುದಾರರ ಹಕ್ಕುಚ್ಯುತಿ: ಆರೋಪ

‘ಸಾಮಾನ್ಯ ಸಭೆಗೆ ಸಂಬಂಧಿಸಿದಂತೆ ಬಹುತೇಕ ಷೇರುದಾರರಿಗೆ ಪುಸ್ತಕ ತಲುಪಿಲ್ಲ. ಇದರಲ್ಲಿ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಇದರಿಂದ ಷೇರುದಾರರಿಗೆ ಹಕ್ಕುಚ್ಯುತಿಯಾದಂತಾಗಿದೆ’ ಎಂದು ರೈತ ನಾಯಕಿ ಸುನಂದಾ ಜಯರಾಂ ಆರೋಪಿಸಿದರು.

‘6 ವರ್ಷಗಳ ನಂತರ ಸಭೆ ನಡೆಸುತ್ತಿದ್ದೀರಾ, ಇದಕ್ಕೆ ಹೊಣೆ ಯಾರು, ವಾರ್ಷಿಕ ವರದಿಯಲ್ಲಿ ಲೋಪ ದೋಷಗಳಿವೆ. ಲೆಕ್ಕ ಪರಿಶೋಧಕರ ವರದಿಗೆ ಲೆಕ್ಕ ಪರಿಶೋಧಕರ ಹೆಸರು ಹಾಗೂ ಸಹಿ ಮಾಡಿಲ್ಲ ಯಾಕೆ’ ಎಂದು ಪ್ರಶ್ನಿಸಿದರು.

‘ಕಾರ್ಖಾನೆಯ ಸ್ಥಿರ ಆಸ್ತಿಯ ಮೇಲೆ ಸವಕಳಿ ಎಂದು ತೋರಿಸಿದ್ದೀರಾ. ಆದರೆ ಯಾವುದೇ ಆಸ್ತಿಯು ವರ್ಷದಿಂದ ವರ್ಷಕ್ಕೆ ದರ ಹೆಚ್ಚಾಗುತ್ತದೆ. ಆದರೆ ಆಸ್ತಿಗೆ ಸವಕಳಿ ಎಂದು ತೋರಿಸಿರುವುದು ಯಾಕೆ, ಕಾರ್ಖಾನೆಯ ಯಂತ್ರಗಳು ಸುಸ್ಥಿತಿಯಲ್ಲಿವೆ ಎಂಬ ಮಾಹಿತಿ ವರದಿಯಲ್ಲಿದೆ. ಆದರೂ ಇದ್ದ ಸ್ಥಿತಿಯಲ್ಲಿಯೇ ಒ ಅಂಡ್ ಎಂಗೆ ಕೊಡಲು ಯಾಕೆ ನಿರ್ಧರಿಸಿದ್ದೀರಿ ಎಂಬುದಕ್ಕೆ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.

ರೈತರಿಗೆ ಪ್ರವೇಶವಿಲ್ಲ: ಆಕ್ರೋಶ

ಸಭೆಯಲ್ಲಿ ಭಾಗವಹಿಸಲು ಬಹುತೇಕ ರೈತರಿಗೆ ಅವಕಾಶ ದೊರೆಯಲಿಲ್ಲ. ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ತಂದೆಯ ಕಾಲದಿಂದಲೂ ಕಬ್ಬು ಬೆಳೆಯುತ್ತಿದ್ದೇನೆ. ಹಲವು ಸಾಮಾನ್ಯ ಸಭೆಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಈ ಬಾರಿ ಸಭೆಗೆ ತೆರಳಲು ಅವಕಾಶವೇ ಸಿಗಲಿಲ್ಲ. ಕಬ್ಬಿನ ಬೆಲೆ ನಿರ್ಧಾರಕ್ಕೆ ಸಂಬಂಧಿಸಿಂತೆ ಇತರೆ ಕಾರ್ಖಾನೆಗಳು ಮೈಷುಗರ್‌ ಕಾರ್ಖಾನೆಯನ್ನು ಅವಲಂಬಿಸಿದ್ದವು. ಆದರೆ ಕಾ ರ್ಖಾನೆಯನ್ನು ಸಂಪೂರ್ಣವಾಗಿ ಹಾಳುಮಾಡಿದ್ದಾರೆ’ ಎಂದು ಕೀಲಾರ ಗ್ರಾಮದ ರೈತ ಗಂಗಾಧರ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT