ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಸಮರ್ಥ ಅಭ್ಯರ್ಥಿಗೆ ಕಾಂಗ್ರೆಸ್ ಶೋಧ

ಸ್ಪರ್ಧಿಸುವಂತೆ ಚಲುವರಾಯಸ್ವಾಮಿ ಮೇಲೆ ಒತ್ತಡ: ರಮ್ಯಾ ಮರಳಿ ಕರೆತರುವ ಯತ್ನ
Published 28 ಡಿಸೆಂಬರ್ 2023, 7:40 IST
Last Updated 28 ಡಿಸೆಂಬರ್ 2023, 7:40 IST
ಅಕ್ಷರ ಗಾತ್ರ

ಮಂಡ್ಯ: ಲೋಕಸಭೆ ಚುನಾವಣೆಗೆ ಇನ್ನು ಕೆಲವು ತಿಂಗಳಷ್ಟೇ ಬಾಕಿ ಉಳಿದಿದ್ದು, ಜಿಲ್ಲೆಯಲ್ಲಿ ಗೆಲ್ಲುವ ಕುದುರೆಯಾಗಿ ಕಾಂಗ್ರೆಸ್‌ ಹುಡುಕಾಟ ನಡೆಸಿದೆ. ಸಚಿವ ಚಲುವರಾಯಸ್ವಾಮಿ ಸ್ಪರ್ಧೆಗೂ ಒತ್ತಾಯ ಕೇಳಿಬರುತ್ತಿದೆ.

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪರ ವಾತಾವರಣ ಇದ್ದು, ಸುಲಭವಾಗಿ ಗೆಲವು ಸಾಧಿಸಬಹುದು ಎನ್ನುವುದು ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರ. ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಚಲುವರಾಯಸ್ವಾಮಿ ಹೆಚ್ಚು ಪರಿಚಿತ ಹೆಸರು. ಉಸ್ತುವಾರಿ ಸಚಿವರಾಗಿ ಆರು ತಿಂಗಳಿಂದ ಜಿಲ್ಲೆ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಅವರೇ ಅಭ್ಯರ್ಥಿ ಆಗುವುದು ಸೂಕ್ತ ಎಂದು ಕಾಂಗ್ರೆಸ್ ಮುಖಂಡರ ಗುಂಪೊಂದು ಒತ್ತಾಯಿಸುತ್ತ ಬಂದಿದೆ. ಅವರ ಪತ್ನಿ ಧನಲಕ್ಷ್ಮಿ ಕೂಡ ಈಚೆಗೆ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಅವರ ಹೆಸರೂ ಚಾಲ್ತಿಯಲ್ಲಿದೆ.

ಉಳಿದಂತೆ, ಹತ್ತು ಹಲವು ಅಭ್ಯರ್ಥಿಗಳ ಹೆಸರು ಕೈ ಪಾಳಯದಿಂದ ಚಾಲ್ತಿಯಲ್ಲಿದೆ. ರಮ್ಯಾರನ್ನೂ ಮತ್ತೆ ಮಂಡ್ಯಕ್ಕೆ ಕರೆತರುವ ಪ್ರಯತ್ನ ಸಹ ನಡೆದಿದೆ. ಕೆ.ವಿ. ಚಂದ್ರಶೇಖರ್, ಡಾ. ರವೀಂದ್ರ, ಮಧು ಮಾದೇಗೌಡ, ಬಿ. ರಾಮಕೃಷ್ಣ, ಪುಟ್ಟೇಗೌಡ ಹೆಸರು ಕೆಪಿಸಿಸಿ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಡಾ. ಕೃಷ್ಣ, ಕೀಲಾರ ರಾಧಾಕೃಷ್ಣ, ಸಿದ್ದರಾಮೇಗೌಡ, ಸಿದ್ಧಾರೂಢ ಸತೀಶ್‌ ಗೌಡ, ಆಲಹಳ್ಳಿ ರಾಮಲಿಂಗಯ್ಯ, ಅಮರಾವತಿ ಚಂದ್ರಶೇಖರ್, ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಮನ್‌ಮುಲ್ ನಿರ್ದೇಶಕ ಯು.ಸಿ. ಶಿವಕುಮಾರ್, ಚಂದ್ರು ಸಹಿತ ಹಲವರು ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಸುಮಲತಾಗೆ ಕಾಂಗ್ರೆಸ್‌ನಲ್ಲಿ ವಿರೋಧ:
ಒಂದು ವೇಳೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯು ಜೆಡಿಎಸ್‌ಗೆ ಬಿಟ್ಟುಕೊಟ್ಟಲ್ಲಿ ಹಾಲಿ ಸಂಸದೆ ಸುಮಲತಾ ಕಾಂಗ್ರೆಸ್ ಟಿಕೆಟ್‌ ಇಲ್ಲವೇ ಸ್ವತಂತ್ರ ಅಭ್ಯರ್ಥಿಯಾಗಿ ಬೆಂಬಲ ಕೇಳುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಎದುರು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾರನ್ನು ಕಾಂಗ್ರೆಸ್‌ ಕಾರ್ಯಕರ್ತರು ಒಳಗೊಳಗೇ ಬೆಂಬಲಿಸಿದ್ದರು. ಆದರೆ ಸುಮಲತಾ ವಿರುದ್ಧ ಕಾಂಗ್ರೆಸ್‌ ನಾಯಕರು ಈಗಾಗಲೇ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

‘ ಸುಮಲತಾ ಕಾಂಗ್ರೆಸ್ ಸೇರ್ಪಡೆಗೆ ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಪರವಾಗಿ, ನಮ್ಮ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲೇ ಸಾಕಷ್ಟು ಸಮರ್ಥ್ಯರು ಇದ್ದಾರೆ. ಹಲವರ ಹೆಸರು ಚಾಲ್ತಿಯಲ್ಲಿದೆ. ಸ್ವತಃ ಚಲುವರಾಯಸ್ವಾಮಿ ಇಲ್ಲವೇ ಅವರ ಕುಟುಂಬದವರು ಅಭ್ಯರ್ಥಿ ಆಗಬೇಕು ಎಂದು ಒತ್ತಾಯಿಸಿದ್ದೇವೆ. ರಮ್ಯಾ ಅವರನ್ನೂ ಕೇಳಿದ್ದೇವೆ. ನಮ್ಮಲ್ಲೇ ಒಬ್ಬರು ಅಭ್ಯರ್ಥಿ ಆಗುತ್ತಾರೆ’ ಎನ್ನುತ್ತಾರೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT