ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಷುಗರ್‌ ಹೋರಾಟ: ಕಾಂಗ್ರೆಸ್‌ ಮುಖಂಡರ ಬೆಂಬಲ

Last Updated 14 ಸೆಪ್ಟೆಂಬರ್ 2021, 14:42 IST
ಅಕ್ಷರ ಗಾತ್ರ

ಮಂಡ್ಯ: ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್‌ ಕಾರ್ಖಾನೆ ಆರಂಭಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಹಿತರಕ್ಷಣಾ ಸಮಿತಿ ಹಾಗೂ ಇತರ ಸಂಘಟನೆಗಳ ಸದಸ್ಯರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ 2ನೇ ದಿನಕ್ಕೆ ತಲುಪಿದೆ. ಮಂಗಳವಾರ ಕಾಂಗ್ರೆಸ್‌ ಮುಖಂಡರು ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಕಾಂಗ್ರೆಸ್‌ ಮುಖಂಡರಾದ ಎನ್‌.ಚಲುವರಾಯಸ್ವಾಮಿ, ರಮೇಶ್‌ಬಾಬು ಬಂಡಿಸಿದ್ದೇಗೌಡ ಇತರರು ಪಾಲ್ಗೊಂಡಿದ್ದರು. ಚಲುವರಾಯಸ್ವಾಮಿ ಮಾತನಾಡಿ ‘ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿ ರೈತರು, ಇತರ ಸಂಘಟನೆಗಳು ಹೋರಾಟ ನಡೆಸುತ್ತಿದ್ದರೂ ಸರ್ಕಾರದ ವತಿಯಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದು ದುರದೃಷ್ಟಕರ. ಒಂದು ವರ್ಷದಿಂದ ಸತತವಾಗಿ ಮೈಷುಗರ್‌ ಉಳಿವಿಗಾಗಿ ಹೋರಾಟ ನಡೆಯುತ್ತಿದೆ. ರೈತ ಮುಖಂಡರು ಹೋರಾಟದ ಹಾದಿ ಹಿಡಿದಿರುವುದಕ್ಕೆ ಕಾಂಗ್ರೆಸ್‌ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ಹೋರಾಟದಲ್ಲಿ ಎಷ್ಟು ಜನರು ಪಾಲ್ಗೊಳ್ಳುತ್ತಾರೆ ಎಂಬುದು ಮುಖ್ಯವಲ್ಲ. ಐತಿಹಾಸಿಕ ಕಾರ್ಖಾನೆ ಉಳಿವಿಗೆ ಹೋರಾಟ ಕೈಗೆತ್ತಿಕೊಂಡ ಸಂದರ್ಭದಲ್ಲಿ ನಿಷ್ಪಕ್ಷಪಾತವಾಗಿ ಎಲ್ಲರೂ ಹೋರಾಟಗಾರರ ಜೊತೆ ಕೈಜೋಡಿಸಬೇಕು. ಒಂದೇ ಒಂದು ಸರ್ಕಾರಿ ಕಂಪನಿ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು ಎಂಬ ಉದ್ದೇಶದಿಂದ ಆದಾಯ, ನಷ್ಟವನ್ನು ನೋಡದೇ ನಡೆಸಿಕೊಂಡು ಬರಲಾಗಿದೆ. 2018ರಲ್ಲಿ ಕಾರ್ಖಾನೆ ಸ್ಥಗಿತಗೊಂಡಿತು. ಜಿಲ್ಲೆಯ ಮಗನಾಗಿರುವ ಬಿ.ಎಸ್‌.ಯಡಿಯೂರಪ್ಪ ಅವರು ಕಾರ್ಖಾನೆ ಉಳಿಸುವ ಭರವಸೆ ನೀಡಿದ್ದರು. ಅವರು 2 ವರ್ಷ ಮುಖ್ಯಮಂತ್ರಿಯಾದರೂ ಕಾರ್ಖಾನೆ ಆರಂಭಿಸುವ ಲಕ್ಷಣಗಳು ಗೋಚರಿಸಲಿಲ್ಲ’ ಎಂದರು.

‘ಈಗ ಮುಖ್ಯಮಂತ್ರಿ ಬದಲಾದರೂ ಕಾರ್ಖಾನೆ ಆರಂಭದ ಬಗ್ಗೆ ಯಾವುದೇ ಕ್ರಮವಾಗಿಲ್ಲ. ಇದನ್ನು ನಮ್ಮ ಜಿಲ್ಲೆಯ ದುರಾದೃಷ್ಟ ಅಥವಾ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂಬುದು ಕಾಣುತ್ತದೆ. ಪ್ರಬಲವಾದ ಹೋರಾಟ ಮಾಡುವವರಿಗೆ ನಾವು ಸಹಕಾರ ನೀಡದಿದ್ದರೆ ಅಲ್ಲಿಯವರೆಗೂ ಜಿಲ್ಲೆ ಉದ್ಧಾರವಾಗುವುದಿಲ್ಲ. ವೈಯಕ್ತಿಕವಾಗಿ ಏನೇ ಭಿನ್ನಾಭಿಪ್ರಾಯವಿದ್ದರೂ ಜಿಲ್ಲೆಯ ಹಿತದೃಷ್ಟಿಯಿಂದ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದರು.

‘ನಮ್ಮಲ್ಲಿ ಒಗ್ಗಟ್ಟಿನ ಶಕ್ತಿ ಕಡಿಮೆಯಾಗಿರುವ ಕಾರಣದಿಂದ ಸರ್ಕಾರಗಳು ನಮ್ಮ ಜಿಲ್ಲೆಯನ್ನು ನಿಕೃಷ್ಟವಾಗಿ ಕಾಣುತ್ತಿವೆ. ನಮ್ಮ ಕೂಗು ವಿಧಾನ ಸೌಧಕ್ಕೆ ಏಕೆ ಮುಟ್ಟುತ್ತಿಲ್ಲ ಎಂಬ ಬಗ್ಗೆ ಮನಗಾಣಬೇಕಾಗಿದೆ. ನಾವು ಹೆಚ್ಚು ಮಾತನಾಡಿದರೆ ರಾಜಕೀಯ ಮಾಡುತ್ತಾರೆ ಎಂಬು ಹೇಳಲಾಗುತ್ತದೆ. ಆದರೆ ವಾಸ್ತವ ಸತ್ಯವನ್ನು ಮಾತನಾಡಲೇಬೇಕಾಗಿದೆ. ನಾನೂ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ, ನಮ್ಮ ಅವಧಿಯಲ್ಲಿ ನಮ್ಮ ಕೈಲಾದ ಕೆಲಸ ಮಾಡಿದ್ದೇನೆ. ಆದರೂ ಅದು ಸಾಕಾಗುವುದಿಲ್ಲ. ಹೀಗಾಗಿ ನಮ್ಮ ಹೋರಾಟ ವಿಧಾನಸೌಧಕ್ಕೆ ಮುಟ್ಟಬೇಕಾಗಿದೆ’ ಎಂದು ಹೇಳಿದರು.

ಹೋರಾಟ ಸಮಿತಿಯ ಸುನಂದಾ ಜಯರಾಂ, ಕೆ.ಬೋರಯ್ಯ, ಕಾಂಗ್ರೆಸ್‌ ಮುಖಂಡರಾದ ಸಿ.ಡಿ.ಗಂಗಾಧರ್‌, ಸಿದ್ದರಾಮೇಗೌಡ, ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT