ಶುಕ್ರವಾರ, ಜುಲೈ 1, 2022
23 °C
ಪ್ರಾಥಮಿಕ ಸಂಪರ್ಕಿತರು, ರೋಗಲಕ್ಷಣ ಇರುವವರಿಗಷ್ಟೇ ಕೋವಿಡ್‌ ಪರೀಕ್ಷೆ

ಇಳಿಯದ ಸೋಂಕು: ಪರೀಕ್ಷೆಗಾಗಿ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಮೇಲ್ನೋಟಕ್ಕೆ ಇಳಿಯುತ್ತಿರುವಂತೆ ಕಂಡರೂ ವಾಸ್ತವವಾಗಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ. ಸೋಂಕಿತರ ಸಂಖ್ಯೆ ನಿತ್ಯ 500–700 ಗಡಿಯಲ್ಲೇ ಇದ್ದು ಕೋವಿಡ್‌ ಕೇರ್‌ ಕೇಂದ್ರಗಳಿಗೆ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಲೇ ಇದೆ.

ಮೇ ಮಧ್ಯಭಾಗದಲ್ಲಿದ್ದ ತೀವ್ರತೆ ಈಗ ಇಲ್ಲದಿದ್ದರೂ ಸೋಂಕು ಹರಡುತ್ತಿರುವ ಪ್ರಮಾಣ ಕಡಿಮೆಯಾಗಿಲ್ಲ. ಕೋವಿಡ್‌ ಪರೀಕ್ಷೆಯನ್ನೂ ಕಡಿಮೆಗೊಳಿಸಿರುವ ಕಾರಣ ಮೇಲ್ನೋಟಕ್ಕೆ ಸೋಂಕು ನಿಯಂತ್ರಣಕ್ಕೆ ಬಂದಂತೆ ಕಾಣುತ್ತಿದೆ. ಆದರೆ ಜಿಲ್ಲೆಯ ಗ್ರಾಮೀಣ ಭಾಗವೂ ಸೇರಿದಂತೆ ನಗರ, ಪಟ್ಟಣ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗಲೂ 6 ಸಾವಿರ ಗಡಿಯಲ್ಲಿ ಸಕ್ರಿಯ ಪ್ರಕರಣಗಳಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಆರಂಭದಲ್ಲಿದ್ದ ಪ್ರತಿಯೊಬ್ಬರಿಗೂ ಪರೀಕ್ಷೆ ನಡೆಸಲಾಗುತ್ತಿತ್ತು. ಈಗ ರೋಗಿಗಳ ಪ್ರಾಥಮಿಕ ಸಂಪರ್ಕಿತರು, ರೋಗಲಕ್ಷಣಗಳಿರುವ ಜನರಿಗೆ ಮಾತ್ರ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಸರ್ಕಾರದ ಕಾರ್ಯಸೂಚಿಯೂ ಇದೇ ಆಗಿದ್ದು ಸಮಗ್ರ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸೋಂಕಿತರ ಸಂಖ್ಯೆ ಕಡಿಮೆಯಾದಂತೆ ತೋರುತ್ತಿದೆ.

ಪರೀಕ್ಷೆಗಾಗಿ ಪರದಾಟ: ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಿಗದಿತ ಸಂಖ್ಯೆಗಷ್ಟೇ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಮೊದಲಿನಿಂತೆ ಬಸ್‌ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಪರೀಕ್ಷಾ ಶಿಬಿರಗಳು ನಡೆಯುತ್ತಿಲ್ಲ. ‘ವೈದ್ಯರ ನಡಿಗೆ ಹಳ್ಳಿಗಳ ಕಡೆಗೆ’ ಶಿಬಿರದಲ್ಲೂ ಹೆಚ್ಚು ಜನರಿಗೆ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗ್ರಾಮೀಣ ಜನರು ಕೋವಿಡ್‌ ಪರೀಕ್ಷೆಗಾಗಿ ತಾಲ್ಲೂಕು ಕೇಂದ್ರಗಳತ್ತ ಬರುತ್ತಿದ್ದಾರೆ.

ತಾಲ್ಲೂಕು ಆಸ್ಪತ್ರೆಯಲ್ಲಿದ್ದ ಕೋವಿಡ್‌ ಪರೀಕ್ಷಾ ಕೇಂದ್ರವನ್ನು ಜನಜಂಗುಳಿಯ ಕಾರಣಕ್ಕೆ ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿ ನೂರಾರು ಸಂಖ್ಯೆಯ ಜನರು ನಸುಕಿನಿಂದಲೇ ಪರೀಕ್ಷೆಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಪರೀಕ್ಷೆಗಾಗಿ ಜನರು 2–3 ದಿನ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಪಾಂಡವಪುರ ಟಿಎಪಿಸಿಎಂಎಸ್‌ ಆವರಣದಲ್ಲಿ ಕೋವಿಡ್‌ ಪರೀಕ್ಷೆ ನಡೆಯುತ್ತಿದ್ದು ಬೆಳಿಗ್ಗೆ 5 ಗಂಟೆಯಿಂದಲೇ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಅಲ್ಲಿ ಕುಡಿಯಲು ನೀರಿಲ್ಲ, ನೆರಳಿನ ವ್ಯವಸ್ಥೆ ಇಲ್ಲ. ದಿನಗಟ್ಟಲೇ ಕಾದು ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ. ಮಳವಳ್ಳಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲೂ ಇದೇ ಪರಿಸ್ಥಿತಿ ಇದೆ.

‘ಕೋವಿಡ್‌ ಪರೀಕ್ಷೆಯಾದ ನಂತರ ಫಲಿತಾಂಶ ಬರಲು 4–5 ದಿನ ಹಿಡಿಯುತ್ತಿದೆ. ಮೊದಲು ಮೊಬೈಲ್‌ಗೆ ಮಾಹಿತಿ ಬರುತ್ತಿತ್ತು. ಆದರೆ ಈಗ ಅದು ಬರುತ್ತಿಲ್ಲ. ವೈದ್ಯರಿಗೆ ಕರೆ ಮಾಡಿ ಕೇಳಬೇಕಾಗಿದೆ. ಸಮರ್ಪಕ ರೀತಿಯಲ್ಲಿ ಕೋವಿಡ್‌ ಪರೀಕ್ಷೆ ನಡೆಯುತ್ತಿಲ್ಲ’ ಎಂದು ಪಾಂಡವಪುರ ತಾಲ್ಲೂಕು ಕ್ಯಾತನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಆರೋಪಿಸಿದರು.

ಹಾಸಿಗೆ ಕೊರತೆ ಇಲ್ಲ: ಮೇ ತಿಂಗಳ ಆರಂಭದಲ್ಲಿ ಇದ್ದ ಹಾಸಿಗೆ, ಆಮ್ಲಜನಕ ಕೊರತೆ ಈಗ ಜಿಲ್ಲೆಯಲ್ಲಿ ಇಲ್ಲ. ಈಗಲೂ ಜಿಲ್ಲಾಸ್ಪತ್ರೆಯಲ್ಲಿ 20 ಆಮ್ಲಜನಕ ಸೌಲಭ್ಯದ ಹಾಸಿಗೆಗಳು ಖಾಲಿ ಇವೆ. ಆಮ್ಲಜನಕ ರಹಿತ ಹಾಸಿಗೆಗಳೂ ಇವೆ. ಆದರೆ ವೆಂಟಿಲೇಟರ್‌ ಹಾಸಿಗೆಗಳು ಭರ್ತಿಯಾಗಿವೆ. ಪರಿಸ್ಥಿತಿ ಸುಧಾರಿಸಿದೆ, ಆದರೆ ಸೋಂಕು ಹರಡುತ್ತಿರುವುದು ಕಡಿಮೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

‘ಈಗಲೂ ಪ್ರತಿನಿತ್ಯ 3,500 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಎಲ್ಲರಿಗೂ ಪರೀಕ್ಷೆ ನಡೆಸುವ ಅವಶ್ಯಕತೆ ಇಲ್ಲ. ಲಕ್ಷಣ ಇರುವವರಿಗಷ್ಟೇ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ ತಿಳಿಸಿದರು.

***

ಕಪ್ಪು ಶಿಲೀಂಧ್ರ: ಇನ್ನೊಂದು ಸಾವು

ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದು ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರಕ್ಕೆ ಇಬ್ಬರು ಸಾವಿಗೀಡಾದಂತಾಗಿದೆ.
ಈ ಸೋಂಕಿಗೆ ಪ್ರತ್ಯೇಕ ವಾರ್ಡ್‌ ಮಾಡಲಾಗಿದ್ದು ಇನ್ನೂ ಮೂವರು ಚಿಕಿತ್ಸೆ ಪಡೆಯುತ್ತಿದ್ಧಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು ಇನ್ನಿಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ‘ಕಪ್ಪು ಶಿಲೀಂಧ್ರ ಔಷಧಿ ನಿಯಮಿತವಾಗಿ ಬರುತ್ತಿದೆ, ಔಷಧಿ ಮುಗಿದ ಕೂಡಲೇ ಆರೋಗ್ಯ ಇಲಾಖೆಯ ಗಮನಕ್ಕೆ ತರಲಾಗುತ್ತಿದೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು