ಶನಿವಾರ, ಸೆಪ್ಟೆಂಬರ್ 24, 2022
24 °C

ಸ್ಮಶಾನ ರಸ್ತೆ ಜಲಾವೃತ: ನೀರಿನಲ್ಲಿ ಶವ ಹೊತ್ತೊಯ್ದು ಸಂಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಗ್ರಾಮದ ಸ್ಮಶಾನ ರಸ್ತೆ ಕಾವೇರಿ ನದಿಯ ಪ್ರವಾಹದಲ್ಲಿ ಮುಳುಗಿದ್ದು, ಮಹಿಳೆಯೊಬ್ಬರ ಶವವನ್ನು ಎದೆ ಮಟ್ಟದ ನೀರಿನಲ್ಲೇ ಹೊತ್ತೊಯ್ದು ಸಂಸ್ಕಾರ ಮಾಡಿದ ಪ್ರಸಂಗ ಭಾನುವಾರ ನಡೆದಿದೆ.

ಗ್ರಾಮದ ಸುಲೋಚನಾ ಎಂಬುವವರು ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರ ಬಂಧುಗಳು ಎದೆ ಮಟ್ಟದ ನೀರಿನಲ್ಲೇ ಶವ ಸಾಗಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಗ್ರಾಮದ ನಾಯಕ ಜನಾಂಗದವರು ನದಿ ತೀರದಲ್ಲಿ ಶವ ಸಂಸ್ಕಾರ ಮಾಡುವ ವಾಡಿಕೆ ಇದೆ. ಸ್ಮಶಾನದ ಸಂಪರ್ಕ ಮಾರ್ಗ ಜಲಾವೃತವಾಗಿದ್ದು ರಭಸವಾಗಿ ನೀರು ಹರಿಯುತ್ತಿದೆ. ಅಪಾಯವನ್ನೂ ಲೆಕ್ಕಿಸದೆ ನೀರಿನಲ್ಲಿ ಶವವನ್ನು ಸಾಗಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಗ್ರಾಮದ ಬೋರೆಯಲ್ಲಿ ನಾಯಕ ಜನಾಂಗಕ್ಕೆ ಸ್ಮಶಾನ ಜಾಗ ಮೀಸಲಿಡಲಾಗಿದೆ. ಆದರೆ ಈ ಜಾಗ ಜನವಸತಿ ಸ್ಥಳದಿಂದ ದೂರದಲ್ಲಿದೆ ಎಂಬ ಕಾರಣಕ್ಕೆ ಅಲ್ಲಿ ಶವ ಸಂಸ್ಕಾರ ಮಾಡುತ್ತಿಲ್ಲ. ತಲೆಮಾರುಗಳಿಂದಲೂ ಹೊಳೆ ತೀರದಲ್ಲೇ ಶವ ಸಂಸ್ಕಾರ ಮಾಡುತ್ತಿದ್ದಾರೆ.

ಶವ ಸಂಸ್ಕಾರ ಮಾಡುವ ಜಾಗದಲ್ಲಿ ನೀರು ಇಲ್ಲ, ಆ ಜಾಗಕ್ಕೆ ತೆರಳುವ ಮಾರ್ಗವಷ್ಟೇ ಜಲಾವೃತವಾಗಿತ್ತು. ಹಾಗಾಗಿ ಸ್ವಲ್ಪ ದೂರ ನೀರಿನಲ್ಲಿ ತೆರಳಿ ಶವಸಂಸ್ಕಾರ ಮಾಡಲಾಯಿತು’ ಎಂದು ಗ್ರಾಮಸ್ಥರು ತಿಳಿಸಿದರು.

‘ನದಿ ತೀರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ, ಪ್ರವಾಹದ ನೀರಿನಲ್ಲಿ ಶವ ಸಾಗಿಸಿದ ಬಗ್ಗೆ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆಯಲಾಗುವುದು’ ಎಂದು ಎಎಸ್ಪಿ ವೇಣುಗೋಪಾಲ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು