ಸೋಮವಾರ, ನವೆಂಬರ್ 18, 2019
24 °C

‘ಡಿಕೆಶಿ ಜೈಲು ಸೇರಲು ದೇವೇಗೌಡ ಕುಟುಂಬ ಕಾರಣ’

Published:
Updated:
Prajavani

ಮಂಡ್ಯ: ‘ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಜೈಲಿಗೆ ಹೋಗಲು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಅವರ ಕುಟುಂಬ ಸದಸ್ಯರೇ ಕಾರಣ. ಶಿವಕುಮಾರ್‌ ಹೊರ ಬಂದ ಕೂಡಲೇ ಎಲ್ಲವೂ ಗೊತ್ತಾಗಲಿದೆ’ ಎಂದು ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಶನಿವಾರ ಆರೋಪಿಸಿದರು.

ಕೆ.ಆರ್‌.ಪೇಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ದೇವೇಗೌಡರಿಗೆ ತಮ್ಮ ಮಕ್ಕಳು, ಮೊಮ್ಮಕ್ಕಳು ಬಿಟ್ಟು ಮತ್ತಾರೂ ಬೆಳೆಯಬಾರದು. ಡಿ.ಕೆ.ಶಿವಕುಮಾರ್‌ ಪರ ದೇವೇಗೌಡರ ಕುಟುಂಬ ನಿಲ್ಲುತ್ತಿಲ್ಲ. ದೇವೇಗೌಡರು ದೇಶಕ್ಕೆ ಏನೂ ಕೊಡುಗೆ ಕೊಟ್ಟಿಲ್ಲ. ಅವರ ಕೊಡುಗೆಯೇನಿದ್ದರೂ ಕೇವಲ ಕುಟುಂಬಕ್ಕಷ್ಟೇ. ನಿಮ್ಮ ಮಕ್ಕಳು, ಮೊಮ್ಮಕ್ಕಳನ್ನು ಬಿಟ್ಟು ಇಡೀ ರಾಜ್ಯದಲ್ಲಿ ಒಬ್ಬನೇ ಒಬ್ಬ ಕಾರ್ಯಕರ್ತನನ್ನು ಬೆಳೆಯಲು ಬಿಟ್ಟಿದ್ದೀರಾ’ ಎಂದು ಪ್ರಶ್ನಿಸಿದರು.

‘ಮಾಜಿ ಸ್ಪೀಕರ್‌ ಕೃಷ್ಣ ಅವರನ್ನು ತುಳಿಯಲು ನನ್ನನ್ನು ತಂದು ನಿಲ್ಲಿಸಿದರು. ಈಗ ನನ್ನನ್ನು ತುಳಿಯಲು ಮತ್ತೊಬ್ಬರನ್ನು ಸೃಷ್ಟಿಸಿದ್ದಾರೆ. ಒಕ್ಕಲಿಗನಾಗಿ ಹುಟ್ಟಲೇಬಾರದಿತ್ತು ಎಂದು ದೇವೇಗೌಡರು ಹೇಳಿಕೊಂಡಿದ್ದಾರೆ. ಅವರನ್ನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಮಾಡಿದ್ದು ಒಕ್ಕಲಿಗರು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು’ ಎಂದು ಹರಿಯಾಯ್ದರು.

ರೇವಣ್ಣ ವಿರುದ್ಧ ಆಕ್ರೋಶ: ‘ಎಚ್‌.ಡಿ.ರೇವಣ್ಣ ಏನು ಎಂಬುದು ರಾಜ್ಯದ ಗುತ್ತಿಗೆದಾರರಿಗೆ ಗೊತ್ತಿದೆ. ಕೆ.ಆರ್‌.ಪೇಟೆಗೆ ಬಂದು ಬಾಯಿಗೆ ಬಂದಂತೆ ಮಾತನಾಡಿ ಹೋಗಿದ್ದಾರೆ. ರೇವಣ್ಣ ಸತ್ಯ ಹರಿಶ್ಚಂದ್ರನಲ್ಲ, ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬೀಳಲು ರೇವಣ್ಣನೇ ಕಾರಣ. ನನ್ನ ಕ್ಷೇತ್ರಕ್ಕೆ ಹೆಚ್ಚು ಅನುದಾನ ಕೊಟ್ಟಿರುವುದಾಗಿ ಹೇಳಿದ್ದಾರೆ. ಕೊಟ್ಟಿದ್ದರೆ ಧರ್ಮಸ್ಥಳಕ್ಕೆ ಬಂದು ಮಂಜುನಾಥನ ಮುಂದೆ ನಿಂತು ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.

ಬಿಜೆಪಿಯವ್ರು ದುಡ್ಡು ಕೊಡುತ್ತಿಲ್ಲ: ‘ಸುಪ್ರೀಂಕೋರ್ಟ್‌ ನಮ್ಮನ್ನು ಹರಿದು ಹಾಕುತ್ತಿದೆ. ಕೈಯಿಂದ ದುಡ್ಡು ಖರ್ಚು ಮಾಡುತ್ತಿದ್ದೇವೆ. ಬಿಜೆಪಿ ಮುಖಂಡರು ಒಂದು ರೂಪಾಯಿ ಕೊಡುತ್ತಿಲ್ಲ. ಮುಂದೆ ಕಾಂಗ್ರೆಸ್‌–ಜೆಡಿಎಸ್‌ನಿಂದ ಇನ್ನೂ 20 ಶಾಸಕರು ರಾಜೀನಾಮೆ ನೀಡುತ್ತಾರೆ. ಎಚ್‌.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಮುಖಂಡರ ಸುಳ್ಳುಗಳಿಂದಲೇ ಮಂಡ್ಯದಲ್ಲಿ ನಿಖಿಲ್‌ ಸೋಲು ಕಂಡಿದ್ದಾರೆ. ಶಾಸಕ ಸಿ.ಎಸ್‌.ಪುಟ್ಟರಾಜು ಅವರಿಗೂ ಜೆಡಿಎಸ್‌ ನಾಯಕರು ನೋವು ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು ನಮ್ಮನ್ನು ತಮ್ಮ ಚೇಂಬರ್‌ಗೆ ಬಿಡುತ್ತಿರಲಿಲ್ಲ’ ಎಂದು ಹೇಳಿದರು.

 

ಪ್ರತಿಕ್ರಿಯಿಸಿ (+)