ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ವಿತರಣೆ: ರದ್ದಾಗದ ಬಯೋಮೆಟ್ರಿಕ್‌

ಸೋಂಕು ಹರಡಲು ಕಾರಣವಾಗುತ್ತಿರುವ ವ್ಯವಸ್ಥೆ, ಸೂಚನೆ ಪಾಲಿಸದ ನ್ಯಾಯಬೆಲೆ ಅಂಗಡಿಗಳು
Last Updated 21 ಮೇ 2021, 4:22 IST
ಅಕ್ಷರ ಗಾತ್ರ

ಮಂಡ್ಯ: ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಪಡಿತರ ವಿತರಣೆಗೆ ಆಧಾರ್‌ ಒಟಿಪಿ ಮೂಲಕ ಪಡಿತರ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದ್ದರೂ, ನ್ಯಾಯಬೆಲೆ ಅಂಗಡಿ ಮಾಲೀಕರು ಇಂದಿಗೂ ಬಯೋಮೆಟ್ರಿಕ್‌ ಮೂಲಕವೇ ಪಡಿತರ ವಿತರಿಸುತ್ತಿದ್ದಾರೆ.

ರಾಜ್ಯ ಸರ್ಕಾರ ತನ್ನ ಪಾಲಿನ ಹಾಗೂ ಕೇಂದ್ರ ಸರ್ಕಾರ ಹೆಚ್ಚುವರಿ ಉಚಿತ ಪಡಿತರ ನೀಡುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರದ ಇಲಾಖೆಗಳು ಸಾಕಷ್ಟು ಸುಧಾರಣೆಗಳನ್ನು ಅಳವಡಿಸಿಕೊಂಡಿದೆ. ಸಾರ್ವಜನಿಕ ವಿತರಣೆ ಪದ್ಧತಿ ಅಡಿ ಪಡಿತರ ವಿತರಣೆ ಮಾಡಲು ಪರ್ಯಾಯ ಮಾರ್ಗೋ ಪಾಯವನ್ನು ಇಲಾಖೆ ಸೂಚಿಸಿದ್ದರೂ ಅದರ ಅಳವಡಿಕೆಯಲ್ಲಿ ನ್ಯಾಯಬೆಲೆ ಅಂಗಡಿಗಳು ಹಿಂದೆ ಉಳಿದಿವೆ.

‘ಒಟಿಪಿ ಮೂಲಕ ಪಡಿತರ ವಿತರಣೆ ಮಾಡಬಹುದು ಎಂದು ತಿಳಿಸಿದ್ದರೂ, ಪಡಿತರ ಚೀಟಿದಾರರ ಮೊಬೈಲ್‌ ನಂಬರ್‌ ಸರಿ ಇಲ್ಲದ ಕಾರಣಕ್ಕೆ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಈಗಾಗಲೇ ಎಲ್ಲಾ ಪಡಿತರ ಚೀಟಿಗೆ ಆಧಾರ್‌ ಸಂಖ್ಯೆಗೆ ಜೋಡಣೆಯಾಗಿದೆ. ಆದರೆ ಆಧಾರ್‌ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್‌ ನಂಬರ್‌ ಕಳೆದು ಹೋಗಿರುವ ಅಥವಾ ನಂಬರ್‌ ಅನ್ನು ಜೋಡಣೆ ಮಾಡದಿರುವ ಸಾಕಷ್ಟು ಚೀಟಿದಾರರಿದ್ದಾರೆ. ಮೊಬೈಲ್‌ ನಂಬರ್‌ ಸರಿ ಇಲ್ಲದ ಕಾರಣ ಒಟಿಪಿ ಬರುವುದಿಲ್ಲ. ಆಗ ಪಡಿತರ ವಿತರಣೆ ಮಾಡಲು ಬೇರೆ ಆಯ್ಕೆಗಳಿಲ್ಲ. ಅನಿವಾರ್ಯವಾಗಿ ಬಯೋಮೆಟ್ರಿಕ್‌ ಮೂಲಕವೇ ಪಡಿತರ ವಿತರಣೆ ಮಾಡಬೇಕಾಗುತ್ತದೆ’ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರೊಬ್ಬರು ತಿಳಿಸಿದರು.

ಬಯೋಮೆಟ್ರಿಕ್‌ ಮೂಲಕ ವಿತರಣೆ ಮಾಡುವ ಸಂದರ್ಭದಲ್ಲಿ ಸ್ಯಾನಿಟೈಸರ್‌ ಅನ್ನು ಕಡ್ಡಾಯವಾಗಿ ಬಳಕೆ ಮಾಡದ ಕಾರಣ, ಒಬ್ಬರ ನಂತರ ಮತ್ತೊಬ್ಬರು ಯಂತ್ರದಲ್ಲಿ ತಮ್ಮ ಹೆಬ್ಬೆಟ್ಟು ಇಟ್ಟು ಪಡಿತರ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ರೋಗ ಲಕ್ಷಣಗಳಿರುವ ವ್ಯಕ್ತಿ ಹೆಬ್ಬೆಟ್ಟು ಇಟ್ಟಾಗ ಸೋಂಕು ಇನ್ನಷ್ಟು ಮಂದಿಗೆ ಹರಡುವ ಅಪಾಯವಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅಂತ್ಯೋದಯ ಪಡಿತರ ಚೀಟಿಗೆ 15 ಕೆ.ಜಿ ಅಕ್ಕಿ, 20 ಕೆ.ಜಿ ರಾಗಿ, ಪಿಎಂಜಿಕೆವೈ ಅಡಿ 5 ಕೆ.ಜಿ ಅಕ್ಕಿ ಪ್ರತಿ ಸದಸ್ಯರಿಗೆ, ಬಿಪಿಎಲ್ ಚೀಟಿಗೆ ಪ್ರತಿ ಸದಸ್ಯರಿಗೆ ಎನ್‍ಎಫ್‍ಎಸ್‍ಎ ಅಡಿ 2 ಕೆ.ಜಿ ಅಕ್ಕಿ, 3 ಕೆ.ಜಿ ರಾಗಿ, ಪಿಎಂಜಿಕೆವೈ ಅಡಿ 5 ಕೆ.ಜಿ ಅಕ್ಕಿ, ಎನ್‍ಎಫ್‍ಎಸ್‍ಎ ಅಡಿ 2 ಕೆ.ಜಿ ಗೋಧಿ ಪ್ರತಿ ಕುಟುಂಬಕ್ಕೆ ಉಚಿತವಾಗಿ ನೀಡಲಾಗುತ್ತಿದೆ.

ಎಪಿಎಲ್ ಕಾರ್ಡ್‌ನ ಒಬ್ಬ ಸದಸ್ಯರಿಗೆ 5 ಕೆ.ಜಿ ಅಕ್ಕಿ, 2 ಮತ್ತು ಹೆಚ್ಚಿನ ಸದಸ್ಯರಿಗೆ 10 ಕೆ.ಜಿ ಯಂತೆ ಅಕ್ಕಿಯನ್ನು ಪ್ರತಿ ಕೆ.ಜಿ.ಗೆ ₹ 15ನಂತೆ ದರ ನಿಗದಿಪಡಿಸಲಾಗಿದೆ. ಅಂತರರಾಜ್ಯ, ಅಂತರ ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್‌ ಮಾರ್ಗಸೂಚಿಯಂತೆ ಅಂತರ ಕಾಯ್ದುಕೊಂಡು, ಮಾಸ್ಕ್‌ ಧರಿಸಿ ಪಡಿತರ ಪಡೆಯಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಸೂಚನೆ ನೀಡಿದ್ದಾರೆ.

‘ಮೇ ತಿಂಗಳ ಶೇ 60ರಷ್ಟು ಪಡಿತರ ವಿತರಣೆಯಾಗಿದೆ. ಈಗಾಗಲೇ ಒಟಿಪಿ ಮೂಲಕ ವಿತರಿಸಲು ಸೂಚನೆ ನೀಡಲಾಗಿದೆ. ಮೊಬೈಲ್‌ ಸಂಖ್ಯೆ ಸರಿ ಇಲ್ಲದ ಕಾರಣಕ್ಕೆ ಸಮಸ್ಯೆ ಎದುರಾಗುತ್ತಿದ್ದು, ಮೊಬೈಲ್‌ ಸಂಖ್ಯೆ ಸರಿ ಇದ್ದವರಿಗೆ ಯಾವುದೇ ತಡೆಯಿಲ್ಲದೆ ಒಟಿಪಿ ಮೂಲಕ ಪಡಿತರ ನೀಡಲಾಗುತ್ತಿದೆ’ ಎಂದು ಆಹಾರ ಇಲಾಖೆ ಅಧಿಕಾರಿ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT