ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೀಥಿಯಂ ಸಿಕ್ಕರೆ ಮಂಡ್ಯ ಜಿಲ್ಲೆ ಚಿತ್ರಣ ಬದಲು: ಡಾ.ಎಸ್‌.ಎನ್‌.ಸ್ವಾಮಿಗೌಡ

ಶ್ರೀರಂಗಪಟ್ಟಣದಲ್ಲಿ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನ, ಅಧ್ಯಕ್ಷ ಡಾ.ಎಸ್‌.ಎನ್‌.ಸ್ವಾಮಿಗೌಡ ಅಭಿಮತ
Last Updated 6 ಮಾರ್ಚ್ 2023, 14:52 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಜಿಲ್ಲೆಯಲ್ಲಿ ಪ್ರಮುಖವಾಗಿ ಕೆಂಪು, ಮರಳು ಮಿಶ್ರಿತ ಜೇಡಿಮಣ್ಣು ಹೇರಳವಾಗಿದೆ. ಈ ಮಣ್ಣಿನಲ್ಲಿ ಖನಿಜಗಳಿಲ್ಲ. ಆದರೆ ಲೀಥಿಯಂ ದೊರೆಯುವ ನಿರೀಕ್ಷೆ ಇದ್ದು ಸಂಶೋಧನೆ ಆರಂಭಿಸಲಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ’ ಎಂದು ಕಬ್ಬು ತಳಿ ಸಂಶೋಧಕ ಡಾ.ಎಸ್‌.ಎನ್‌.ಸ್ವಾಮಿಗೌಡ ಹೇಳಿದರು.

ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಆವರಣದಲ್ಲಿ ಸೋಮವಾರ ನಡೆದ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಬಹುಭಾಗ ಬಯಲುಗಳಿಂದ ಕೂಡಿದೆ, ಹೆಚ್ಚು ಎತ್ತರವಲ್ಲದ ಸಣ್ಣ ಬೆಟ್ಟಗಳ ಸಾಲು ಅಲ್ಲಲ್ಲಿ ಇವೆ. ಕಬ್ಬು ಬೆಳೆಯಲು ಅವಶ್ಯವಿರುವ ಕೆಂಪು ಜೇಡಿ ಮಣ್ಣು ಈ ಜಿಲ್ಲೆಯ ವಿಶೇಷವಾಗಿದೆ. ಈ ಮಣ್ಣಿನಲ್ಲಿ ಲೀಥಿಯಂ ಸಂಶೋಧನೆ ನಡೆಯುತ್ತಿರುವುದು ವಿಶೇಷ. ಈ ಖನಿಜಕ್ಕೆ ಹೆಚ್ಚು ಬೇಡಿಕೆಯಿದ್ದು ಪ್ರಯೋಗ ಯಶಸ್ವಿಯಾದರೆ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ’ ಎಂದರು.

‘ಕೃಷಿ ಉತ್ಪನ್ನಗಳ ಲಾಭದ ಪ್ರಮಾಣ ಕಡಿಮೆಯಾಗುತ್ತಿರುವುದು ಜಿಲ್ಲೆಯ ರೈತರು ಅನುಭವಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಉತ್ಪಾದಕತೆ ಕಡಿಮೆಯಾಗಿ ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿದೆ. ಸಮರ್ಪಕ ಮಾರುಕಟ್ಟೆ ವ್ಯವಸ್ಥೆ, ಮಣ್ಣಿನ ಫಲವತ್ತತೆ ಕ್ಷೀಣ, ಹೊರಗಿನ ಪರಿಕರ ಮೇಲೆ ಅವಲಂಬಿಸಿರುವುದು ರೈತರನ್ನು ಕಾಡುತ್ತಿವೆ’ ಎಂದರು.

‘ಕೃಷಿಕರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವುದು ಕೃಷಿ ಸಂಶೋಧನೆಯ ಧ್ಯೇಯವಾಗಿದೆ. ಸಮಗ್ರ ಕೃಷಿ, ಆಹಾರ ಮೌಲ್ಯವರ್ಧನೆ ಮತ್ತು ಸಂಸ್ಕರಣೆ, ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ, ರಾಸಾಯನಿಕ ಹಾಗೂ ತ್ಯಾಜ್ಯ ವಸ್ತುಗಳ ಸದ್ಬಳಕೆ, ನೀರಿನ ಸದ್ಬಳಕೆ, ಉಪ ಕಸುಬುಗಳಿಗೆ ಪ್ರಾಶಸ್ತ್ಯ, ಬ್ಯಾಂಕ್‌ ಸಾಲ ಸೌಲಭ್ಯ, ಕೂಲಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಮುಂತಾದ ಸೂತ್ರಗಳ ಮೂಲಕ ಕೃಷಿಕರ ಬದುಕನ್ನು ಸುಧಾರಿಸಬಹುದು’ ಎಂದರು.

‘ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಅವರ ಬದುಕು ಹಸನು ಮಾಡುವ ಕೆಲಸವನ್ನು ಸರ್ಕಾರಗಳು ಮಾಡಬೇಕು’ ಎಂದು ಒತ್ತಾಯಿಸಿದರು.

ಕಸಾಪ ರಾಜ್ಯ ಘಟಕದ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಮಾತನಾಡಿ ‘ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕೃಷಿ ಸಂಶೋಧಕರನ್ನು ಆಯ್ಕೆ ಮಾಡಿರುವುದು ಉತ್ತಮ ಬೆಳವಣಿಗೆ. ಋಷಿ ಸಂಸ್ಕೃತಿಗೂ ಕೃಷಿ ಸಂಸ್ಕೃತಿ ಆಧಾರವಾಗಿದೆ. ಕೃಷಿ ಸಂಸ್ಕೃತಿ ಇರುವಲ್ಲಿ ಜಾನಪದಕ್ಕೆ ಪ್ರಮುಖ ಆದ್ಯತೆ ಇರುತ್ತದೆ. ಬಾಳು ನಿಂತಿರುವುದೇ ಕಾಳಿನ ಮೇಲೆ, ಕಾಳು ನಿಂತಿರುವುದು ಮಳೆ ಮೇಲೆ, ಮಳೆ ನಿಂತುರುವುದು ಭೂಮಿಯ ಮೇಲೆ, ಭೂಮಿ ನಿಂತಿರುವುದು ರೈತನ ಮೇಲೆ. ರೈತ ಇಲ್ಲದೆ ಜಗತ್ತು ಇರುವುದಿಲ್ಲ’ ಎಂದರು.

‘ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌.ಎಂ.ವಿಶ್ವೇಶ್ವರಯ್ಯ ಕನ್ನಂಬಾಡಿ ಕಟ್ಟೆ ಕಟ್ಟುವಲ್ಲಿ ಬಹಳ ಕಷ್ಟಪಟ್ಟಿದ್ದಾರೆ. ಒಡೆಯರ್ ತಮ್ಮ ಪತ್ನಿಯ ಒಡೆವೆಗಳನ್ನು ಒತ್ತೆ ಇಟ್ಟು ಹಣ ತಂದಿದ್ದರು. ಜೊತೆಗೆ ಜನರು ಕೂಡ ಕೂಲಿ ಪಡೆಯದೇ ಜಲಾಶಯ ಕಟ್ಟಲು ಶ್ರಮದಾನ ಮಾಡಿದ್ದಾರೆ. ಅದರಲ್ಲಿ ಶ್ರೀರಂಗಪಟ್ಟಣ ಭಾಗದ ಜನರು ಹೆಚ್ಚಾಗಿ ಜಲಾಶಯಯ ನಿರ್ಮಾಣಕ್ಕೆ ಉಚಿತವಾಗಿ ಶ್ರಮದಾನ ಮಾಡಿದ್ದಾರೆ’ ಎಂದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ ‘ರೈತ ವಿಜ್ಞಾನಿಯ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಸಂತಸದ ವಿಷಯ. ಪ್ರಸ್ತುತ ಸಂದರ್ಭದಲ್ಲಿ ರೈತರು ಉಳಿಯುವುದು ಪ್ರಮುಖ ವಿಚಾರವಾಗಬೇಕು. ಹಿಂದೆ ಪ್ರತಿ ಎಕರೆಗೆ 40–45 ಟನ್‌ ಕಬ್ಬು ಬೆಳೆಯುತ್ತಿದ್ದರು. ಆದರೆ ಸ್ವಾಮಿಗೌಡರು 80–90 ಟನ್‌ ಕಬ್ಬು ಬೆಳೆಯುವ ತಳಿ ಸಂಶೋಧಿಸಿರುವುದು ರೈತರಿಗೆ ಉಪಯುಕ್ತವಾಗಿದೆ’ ಎಂದರು.

‘ಕನ್ನಡ ಸಾಹಿತ್ಯ ವಿಶ್ವ ಮೆಚ್ಚುವ ಸಾಹಿತ್ಯ ಪರಂಪರೆಯಾಗಿದೆ. ಕರ್ನಾಟಕ ಒಗ್ಗೂಡಿ ಮುನ್ನಡೆಯಬೇಕು ಎಂಬ ಅಂಶವನ್ನು ಸಾಹಿತಿಗಳು ನಮ್ಮ ಮುಂದಿಟ್ಟಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟ ಎಂದು ಕುವೆಂಪು ನಮಗೆ ನಾಡಗೀತೆ ಕೊಟ್ಟಿದ್ದಾರೆ. ಅವರ ಆಶಯಗಳಂತೆ ನಾವು ಹೆಜ್ಜೆ ಇಡಬೇಕು’ ಎಂದರು.

ಸಭೆಯಲ್ಲಿ ಪ್ರೊ.ಎಸ್‌.ಶ್ರೀಕಂಠಸ್ವಾಮಿ, ಡಾ.ಪ್ರಭುದೇವ್‌, ಡಾ.ಸಿ.ಗೀತಾ ಅವರನ್ನು ಅಭಿನಂದಿಸಲಾಯಿತು. ಜಿ.ಪಂ ಸಿಇಒ ಶಾಂತಾ ಎಲ್‌ ಹುಲ್ಮನಿ, ಧಾರ್ಮಿಕ ಕ್ರಿಯಾ ಸಮಿತಿ ಮುಖ್ಯಸ್ಥ ಡಾ.ಭಾನುಪ್ರಕಾಶ್‌ ಶರ್ಮಾ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್‌ ಚಾಮಲಾಪುರ, ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್‌ ಇದ್ದರು.

ಎತ್ತಿನ ಗಾಡಿಯಲ್ಲಿ ಬಂದ ಅಧ್ಯಕ್ಷರು

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಕೃಷಿ ವಿಜ್ಞಾನಿ ಡಾ.ಎಸ್‌.ಎನ್‌. ಸ್ವಾಮಿಗೌಡ ಅವರನ್ನು ಎತ್ತಿನ ಗಾಡಿಯಲ್ಲಿ ಕರೆ ತರಲಾಯಿತು. ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಿಂದ ಎರಡು ಕಿ.ಮೀ ದೂರದ ಖಾಸಗಿ ಬಸ್‌ ನಿಲ್ದಾಣದ ಸಮ್ಮೇಳನದ ವೇದಿಕೆ ವರೆಗೆ ಸರ್ವಾಲಂಕೃತ ಎತ್ತಿನ ಗಾಡಿಯಲ್ಲಿ ಸಂಘಟಕರು ಅವರನ್ನು ಕರೆತಂದರು. ಹತ್ತಾರು ಎತ್ತಿನ ಗಾಡಿಗಳು, ಡೊಳ್ಳು ಕುಣಿತ, ವೀರಗಾಸೆ, ಚರ್ಮ ವಾದ್ಯ, ಕಂಸಾಳೆ ಕಲಾವಿದರು ಮೆರವಣಿಗೆಗೆ ಮೆರಗು ನೀಡಿದರು. ಪೂರ್ಣ ಕುಂಭ ಹೊತ್ತ ಮಹಿಳೆಯರು ಹೆಜ್ಜೆ ಹಾಕಿದರು. ಮಿನಿ ವಿಧಾನಸೌಧ, ಮುಖ್ಯ ರಸ್ತೆ, ಪುರಸಭೆ ವೃತ್ತದ ಮೂಲಕ ಮೆರವಣಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ವೇದಿಕೆ ತಲುಪಿತು.

ಕನ್ನಡ ಸಾಹಿತ್ಯ ಪರಿಷತ್‌ನ ನಗರ ಘಟಕದ ಅಧ್ಯಕ್ಷೆ ಎನ್‌. ಸರಸ್ವತಿ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಕನ್ನಡ ರಥವನ್ನು ಮುಖ್ಯ ರಸ್ತೆಯಲ್ಲಿ ಎಳೆದು ಗಮನ ಸೆಳೆದರು. ವಿದ್ಯಾರ್ಥಿಗಳು ಬ್ಯಾಂಡ್‌ಸೆಟ್‌ ಬಾರಿಸುತ್ತಾ ಸಾಗಿದರು.

ಸಮ್ಮೇಳನದ ಮುಖ್ಯ ವೇದಿಕೆಯ ಎಡ ಬದಿಯಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು. ಮಂಡ್ಯ. ಮೈಸೂರು, ಬೆಂಗಳೂರಿನ ಪ್ರಕಾಶಕರು ಮತ್ತು ಲೇಖಕರು ತಮ್ಮ ಪುಸ್ತಕಗಳನ್ನು ಇಟ್ಟಿದ್ದರು. ಆರೋಗ್ಯ, ಪಂಚಾಯತ್‌ರಾಜ್‌ ಮತ್ತು ಕೃಷಿ ಇಲಾಖೆಗಳ ಮಾಹಿತಿ ಮಳಿಗೆಗಳೂ ಇದ್ದವು.

ಸಾಹಿತ್ಯ ಸಮ್ಮೇಳನದಲ್ಲಿ ಇಂದು

9 ಗಂಟೆಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಬೆಳಿಗ್ಗೆ 10.30ಕ್ಕೆ ಸಂಕೀರ್ಣ ಗೋಷ್ಠಿಯಲ್ಲಿ ಕರ್ನಾಟಕ ಪರಿಸರ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಪ್ರೊ.ಬಿ. ಶಿವಲಿಂಗಯ್ಯ ‘ಕೃಷ್ಣರಾಜ ಸಾಗರ ಒಂದು ವಿಶ್ಲೇಷಣೆ’ ಹಾಗೂ ನಿವೃತ್ತ ನ್ಯಾಯಾಧೀಶ ಎಸ್‌.ಎನ್‌. ಕೆಂಪೇಗೌಡರ್‌ ‘ಕನ್ನಡದಲ್ಲಿ ತೀರ್ಪುಗಳ ಅಗತ್ಯತೆ’ ಕುರಿತು ವಿಷಯ ಮಂಡನೆ. ವಿಶ್ರಾಂತ್‌ ನ್ಯಾಯಮೂರ್ತಿ ಅರಳಿ ನಾಗರಾಜ್‌ ಅಧ್ಯಕ್ಷತೆ. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌. ನಾಗರಾಜು ಅವರಿಂದ ಆಶಯ ನುಡಿ.

ಮಧ್ಯಾಹ್ನ 12 ಗಂಟೆಗೆ ಸನ್ಮಾನ ಗೋಷ್ಠಿಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಡಾ.ಸಿ. ಸೋಮಶೇಖರ್‌ ಅಭಿನಂದನೆ.. ಡಾ.ಜೆ.ಎನ್‌. ರಾಮಕೃಷ್ಣೇಗೌಡ ಧ್ಯಕ್ಷತೆ, ಉಪ ವಿಭಾಗಾಧಿಕಾರಿ ಎಲ್‌.ಎಂ. ನಂದೀಶ್‌ ಅಭಿನಂದನಾ ನುಡಿ. ಮಧ್ಯಾಹ್ನ 1.30ಕ್ಕೆ ಯರಹಳ್ಳಿ ಪುಟ್ಟಸ್ವಾಮಿ ಅವರಿಂದ ಜನಪದ ಹಾಸ್ಯ ಮತ್ತು ಗಾಯನ.
ಮಧ್ಯಾಹ್ನ 2.30ಕ್ಕೆ ‘ಶ್ರೀರಂಗಪಟ್ಟಣ ತಾಲ್ಲೂಕು ದರ್ಶನ’ ಗೋಷ್ಠಿ. ಡಾ.ಶಿವಕುಮಾರ್‌ ಕಾರೇಪುರ ‘ಸಾಹಿತ್ಯ ಕ್ಷೇತ್ರಕ್ಕೆ ಮೈಸೂರು ಸಂಸ್ಥಾನದ ಕೊಡುಗೆ‘ ವಿಷಯ ಮಂಡನೆ, ಸಾಹಿತಿ ತೈಲೂರು ವೆಂಕಟಕೃಷ್ಣ ಅಧ್ಯಕ್ಷತೆ.

ಪ್ರೊ.ಎಚ್‌.ಎಲ್‌. ಮಹದೇವ ಅವರಿಂದ ಆಶಯ ನುಡಿ. ಸಂಜೆ 4 ಗಂಟೆಗೆ ಸಮ್ಮೇಳನದ ಅಧ್ಯಕ್ಷರ ಜತೆ ಸಂವಾದ. ಸಂಜೆ 5 ಗಂಟೆಗೆ ಸಂಸದ ಪ್ರತಾಪಸಿಂಹ ಸಮಾರೋಪ ಭಾಷಣ. ಸಂಸದೆ ಸುಮಲತಾ ಅಂಬರೀಷ್‌ರಿಂದ ಸಮ್ಮೇಳನದ ಅಧ್ಯಕ್ಷರ ನಸ್ಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT