ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮ ಸೇವಾ ಭಕ್ತ ಮಂಡಳಿ ರಾಮೋತ್ಸವಕ್ಕೆ 89ರ ಸಂಭ್ರಮ

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಶ್ರೀರಾಮಪುರದ ಶ್ರೀರಾಮಸೇವಾ ಭಕ್ತಮಂಡಳಿಗೆ ಇದು 89ನೇ ವರ್ಷದ ರಾಮೋತ್ಸವ. ಈ ಭಾಗವನ್ನು 1928ರವರೆಗೂ  ‘ರೈತರ ಬ್ಲಾಕ್’ ಎಂದು ಕರೆಯುತ್ತಿದ್ದರು. ಶ್ರೀರಾಮಚಂದ್ರ ಪ್ರತಿಷ್ಠಾ ಸಭಾದವರ ಕೋರಿಕೆ ಮೇರೆಗೆ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರು ಬಡಾವಣೆಗೆ ‘ಶ್ರೀರಾಮಪುರ’ ಎಂದು 1929ರಲ್ಲಿ ನಾಮಕರಣ ಮಾಡಲು ಒಪ್ಪಿಗೆ ನೀಡಿದರು.

1929ರಲ್ಲಿ ರಾಮದೇವರ ಪ್ರತಿಷ್ಠೆಯಾಗಿ, ರಥೋತ್ಸವವನ್ನೂ ನಡೆಸಲಾಯಿತು. ದೇವಸ್ಥಾನದ ಮುಂದೆ ಚಪ್ಪರ ಹಾಕಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. 1949ರಲ್ಲಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಶ್ರೀರಾಮ ಕಲ್ಯಾಣ ಮಂದಿರದ ಶಂಕುಸ್ಥಾಪನೆ ನೆರವೇರಿಸಿದರು. 1950ರಲ್ಲಿ ಪೂರಿ ಜಗನ್ನಾಥ ಪೀಠಾಧೀಶ್ವರರಿಂದ ಮಂದಿರದ ಪ್ರವೇಶೋತ್ಸವ ನೆರವೇರಿತು. ದಿವಂಗತ ಕೃಷ್ಣಸ್ವಾಮಿ ಪಿಳ್ಳೆಯವರು ಧರ್ಮಾರ್ಥ ಕಟ್ಟಿಸಿಕೊಟ್ಟಿರುವ ಕಲ್ಯಾಣ ಮಂಟಪದಲ್ಲೇ ಈವರೆಗೂ ರಾಮೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ, ಪ್ರವಚನ, ಉಪನ್ಯಾಸ, ಶ್ರೀನಿವಾಸ ಕಲ್ಯಾಣ, ಭಾರತ ಪುರಾಣ, ತಿರುಪ್ಪಾವೈ, ಶಂಕರ ಚರಿತ್ರೆ- ಮುಂತಾದವುಗಳು ನಡೆಯುತ್ತವೆ. ಇದು ಆಸ್ತಿಕರ ಅಧ್ಯಾತ್ಮ ಕೇಂದ್ರವಾಗಿ ಎಲ್ಲರನ್ನೂ ಸೆಳೆಯುತ್ತಿದೆ.

ವಿವಿಧ ಮಠಗಳ ಹಿರಿಯ ಯತಿಗಳು ಇಲ್ಲಿಗೆ ಆಗಮಿಸಿ, ಆಶೀರ್ವದಿಸಿದ್ದಾರೆ. 1955ರಿಂದ 10 ವರ್ಷಗಳ ಅವಧಿಯಲ್ಲಿ ರಾಮನಾಮ ಕೋಟಿ ಪೂಜೆಯನ್ನು ನಡೆಸಿ, ಹೆಚ್ಚಿನ ಸಂಖ್ಯೆಯಲ್ಲಿ ರಾಮನಾಮ ಬರೆದ ಸಜ್ಜನರಿಗೆ ಬಹುಮಾನ ವಿತರಿಸಲಾಯಿತು. ಅಖಂಡ ಗೋಪಾಲ ನಾಮ ಸಂಕೀರ್ತನೆ, ಹರಿಕಥಾ ಸಪ್ತಾಹ ಹಾಗೂ ಅಖಂಡ ಭಾರತ ವಾಚನಗಳು ನಡೆಸಿರುವುದು - ಇನ್ನೊಂದು ಪ್ರಮುಖ ಸಂಗತಿ. 1989ರಲ್ಲಿ ಮಂಡಳಿಯ ಸ್ವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ, ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.

ಯುಗಾದಿಯಿಂದ ಆಚರಿಸುವ ‘ಗರ್ಭ ನವಮಿ’ಯಲ್ಲಿ ರಾಜ್ಯದ ಪ್ರಖ್ಯಾತ ಕಲಾವಿದರುಗಳು ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಹರಿಕಥೆ, ಉಪನ್ಯಾಸಗಳೂ ಪ್ರತಿ ವರ್ಷ ನಡೆಯುತ್ತವೆ. ಪಾನಕ ಪೂಜೆಯನ್ನೂ ಧಾರಾಳವಾಗಿ ನಡೆಸಿಕೊಂಡು ಬಂದಿದೆ.

ಯುಗಾದಿಯಿಂದ ನಡೆದ ಈ ವರ್ಷದ ರಾಮೋತ್ಸವದಲ್ಲಿ ಗಾಯನವಲ್ಲದೆ ವೀಣಾ ವಾದನ, ಸ್ಯಾಕ್ಸೋಫೋನ್ ಮುಂತಾದ ವಾದ್ಯ ಸಂಗೀತ ಕಛೇರಿಗಳು, ಭಜನೆ ಮತ್ತು ಭರತನಾಟ್ಯಗಳನ್ನು ಸಾದರಪಡಿಸಲಾಯಿತು. ಲಲಿತ ಸಹಸ್ರನಾಮ, ಸಾಮೂಹಿಕ ಪೂಜೆ, ಶ್ರೀರಾಮ ತಾರಕ ಹೋಮ ಮತ್ತು ಶ್ರೀರಾಮ ಪಟ್ಟಾಭಿಷೇಕಗಳಲ್ಲಿ ಸಾರ್ವಜನಿಕರು ಸಂಭ್ರಮ ಮತ್ತು ಶ್ರದ್ಧೆಗಳಿಂದ ಭಾಗವಹಿಸಿದ್ದರು.

ಕಿರಿಯರಿಗಾಗಿ ದೇವರನಾಮ ಹಾಗೂ ‘ಚಿತ್ರ ಬಿಡಿಸು- ಬಣ್ಣ ತುಂಬಿಸು’ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮುತ್ತಿನ ಪಲ್ಲಕ್ಕಿ ಉತ್ಸವವು ವೇದಘೋಷ, ನಾಗಸ್ವರ ಮತ್ತು ವಿದ್ಯುತ್ ಅಲಂಕಾರಗಳಿಂದ ಶ್ರೀರಾಮಪುರದ ಪ್ರಮುಖ ಬೀದಿಗಳಲ್ಲಿ ಸಾಗಿ, ಈ ವರ್ಷದ ರಾಮೋತ್ಸವಕ್ಕೆ ತೆರೆ ಬಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT