ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಕೈಬೀಸಿ ಕರೆಯುತ್ತಿವೆ ಹೂವು, ಹಣ್ಣಿನ ಕಲಾಕೃತಿ

Published 27 ಜನವರಿ 2024, 4:44 IST
Last Updated 27 ಜನವರಿ 2024, 4:44 IST
ಅಕ್ಷರ ಗಾತ್ರ

ಮಂಡ್ಯ: ತೋಟಗಾರಿಕೆ ಇಲಾಖೆ ಆವರಣ, ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿ ಹೂವು, ಹಣ್ಣಿನ ಕಲಾಕೃತಿಗಳು ಅರಳಿ ನಿಂತಿದ್ದು ಪ್ರೇಕ್ಷಕರನ್ನು ಕೈಬಿಸಿ ಕರೆಯುತ್ತಿವೆ. ಆಕರ್ಷಕ ದೀಪಾಲಂಕಾರ ಮಕ್ಕಳ ಮನಸೂರೆಗೊಳ್ಳುತ್ತಿದೆ, ಚುಮುಚುಮು ಚಳಿಯಲ್ಲಿ ತಿಂಡಿ ತಿನಿಸುಗಳು ಬಾಯಲ್ಲಿ ನೀರು ತರಿಸುತ್ತಿವೆ.

5 ದಿನಗಳ ವೈಭವದ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಶುಕ್ರವಾರ ಚಾಲನೆ ನೀಡಿದರು. ಮೊದಲ ದಿನ ಗಣರಾಜ್ಯೋತ್ಸವ ರಜೆಯೂ ಇದ್ದ ಕಾರಣ ಸಾವಿರಾರು ಜನರು ಪ್ರದರ್ಶನವನ್ನು ಕಣ್ತುಂಬಿಕೊಂಡರು. ಸಂಜೆಯಾಗುತ್ತಿದ್ದಂತೆ ದೀಪಾಲಂಕಾರದ ನಡುವೆ ಹೂವು, ಹಣ್ಣಿನ ವೈಭವವನ್ನು ವೀಕ್ಷಣೆ ಮಾಡಿದರು.

ಹೂವಿನಿಂದ ಅರಳಿದ ಆನೆ, ಹುಲಿ ಸೇರಿದಂತೆ ವಿವಿಧ ಪ್ರಾಣಿಗಳ ಕಲಾಕೃತಿಗಳು ಮಕ್ಕಳ ಮನಸೂರೆಗೊಳ್ಳುತ್ತಿವೆ. ಬಣ್ಣಬಣ್ಣದ ಹೂವುಗಳಿಂದ ಮಾಡಿದ ಚಿತ್ರಣಗಳು ಹೊಸ ಲೋಕವನ್ನೇ ಸೃಷ್ಟಿ ಮಾಡಿವೆ. 25ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಪೆಟೊನಿಯಾ ಅಂಟಿನಂ ಸಾಲ್ವಿಯಾ, ಮಾರಿಗೋಲ್ಡ್, ಜೀನಿಯಾ, ಸೇವಂತಿಗೆ, ಗುಲಾಬಿ, ಪಾಮ್ಮಿಸೆಟಿಯಾ ಹೂಗಳ ಪ್ರದರ್ಶನದಿಂದ ಸಸ್ಯಕಾಶಿಯೇ ಎದ್ದು ನಿಂತಿದೆ.

ಎತ್ತಿನ ಗಾಡಿ ಮತ್ತು ರೈತರ ಕಲಾಕೃತಿಗಳು, ಶಿವಪುರ ಧ್ವಜ ಸತ್ಯಾಗ್ರಹ ಸೌಧ ಸೇರಿದಂತೆ ವಿವಿಧ ಮಾದರಿಗಳು ಗಮನ ಸೆಳೆಯುತ್ತಿವೆ. 100ಕ್ಕೂ ಹೆಚ್ಚು ಬೋನ್ಸಾಯ್ ಜೋಡಣೆ ಇದೆ. ನುರಿತ ತರಕಾರಿ ಕೆತ್ತನೆ ತಜ್ಞರಾದ ಹರೀಶ್ ಬ್ರಹ್ಮಾವರ ಮತ್ತು ತಂಡದವರಿಂದ ಕಲ್ಲಂಗಡಿ, ಕುಂಬಳ, ಕ್ಯಾರೆಟ್ ಮತ್ತು ಇತರೆ ತರಕಾರಿಗಳಲ್ಲಿ ವಿವಿಧ ಆಕೃತಿಗಳನ್ನು ಕೆತ್ತನೆ ಮಾಡಲಾಗಿದೆ.

ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಜಿಲ್ಲೆಯ ರೈತ ಉತ್ಪಾದಕ ಕಂಪನಿಗಳು ಅಭಿವೃದ್ಧಿಪಡಿಸಿದ ಬ್ರ್ಯಾಂಡ್‌ಗಳನ್ನು ಜಿಲ್ಲೆಯ ಗ್ರಾಹಕರಿಗೆ ಪರಿಚಯಿಸುತ್ತಿವೆ. ಬೆಲ್ಲ, ರಾಗಿ, ಅಕ್ಕಿ ಮತ್ತು ಇತರೆ ಉತ್ಪನ್ನಗಳ ಮಾರಾಟವೂ ನಡೆಯುತ್ತಿದೆ. ಕೃಷಿ ಇಲಾಖೆ ವತಿಯಿಂದ ಸಂಕ್ರಾಂತಿ ಸುಗ್ಗಿ, ಬೆಲ್ಲದ ಪರಿಷೆ ಇರಲಿದೆ. ಮೀನುಗಾರಿಕೆ ಇಲಾಖೆಯಿಂದ ವಿವಿಧ ಅಲಂಕಾರಿಕ ಮೀನುಗಳ ಪ್ರದರ್ಶನ ಗಮನ ಸೆಳೆಯತ್ತಿವೆ.

ಸಾರ್ವಜನಿಕರು ತಮ್ಮಲ್ಲಿರುವ ಯಾವುದೇ ಅಲಂಕಾರಿಕ ವಸ್ತುಗಳನ್ನು ದಾನದ ರೂಪದಲ್ಲಿ ತಂದಿಡಬಹುದು, ಅವಶ್ಯಕವಿರುವವರು ಅವುಗಳನ್ನು ಉಚಿತವಾಗಿ ಪಡೆಯಬಹುದು. ಒಬ್ಬರಿಗೆ ಒಮ್ಮೆ ಮಾತ್ರ ಪಡೆಯಲು ಅವಕಾಶವಿರುತ್ತದೆ.

ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುವ ವಯಸ್ಕರಿಗೆ ₹ 25 ಪ್ರವೇಶ ದರ ನಿಗದಿ ಮಾಡಲಾಗಿದೆ. 6 ರಿಂದ 14 ವರ್ಷದ ಮಕ್ಕಳಿಗೆ ₹ 15 ದರವಿದೆ. ಶಾಲೆಯ ಗುರುತಿನ ಕಾರ್ಡ್ ತೋರಿಸಿ ಮಕ್ಕಳು ಉಚಿತವಾಗಿ ಪ್ರವೇಶ ಪಡೆಯಬಹುದು. ಸಂಜೆ 6 ರಿಂದ ರಾತ್ರಿ 8.30ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಳಿಗೆಗೆ ಸಚಿವರ ಭೇಟಿ; ಮೆಚ್ಚುಗೆ

ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಎಚ್‌.ಚಲುವರಾಯಸ್ವಾಮಿ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ಹಾಕಿದ್ದ ಮಳಿಗೆ, ಆರೋ‌ಗ್ಯ ಇಲಾಖೆ ವತಿಯಿಂದ ಆರೋಗ್ಯ ಜಾಗೃತಿ ಮಳಿಗೆಗಳನ್ನು ವೀಕ್ಷಿಸಿದರು. ಭ್ರೂಣಹತ್ಯೆ ವಿರುದ್ಧ ಜಾಗೃತಿ ಮೂಡಿಸುವ ಕಲಾಕೃತಿಯನ್ನು ನೋಡಿದರು.

ಅರಣ್ಯ ಇಲಾಖೆಯ ಪಕ್ಷಿಧಾಮ ಕಲಾಕೃತಿ, ಕೃಷಿ ಇಲಾಖೆಯ ಸುಗ್ಗಿ ಹಬ್ಬ, 20 ಸಾವಿರಕ್ಕೂ ಹೆಚ್ಚು ಹೂ ಬಳಸಿ ನಿರ್ಮಿಸಿರುವ ಕಲಾಕೃತಿಗಳು, ನಾಡಿನ ರೈರತ ಸೇವೆಯನ್ನು ಬಿಂಬಿಸುವ ಮಾದರಿ, ಎತ್ತಿನಗಾಡಿ, ಹಸು, ರೈತನ ಕಲಾಕೃತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ, ಜಿಲ್ಲಾಧಿಕಾರಿ ಕುಮಾರ, ಜಿ.ಪಂ.ಸಿಇಒ ಶೇಖ್‌ ತನ್ವೀರ್‌ ಆಸಿಫ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ರೂಪಶ್ರೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT