ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ರಸ್ತೆಗಿಳಿದ ಆಟೊ ಚಾಲಕರು, ಮಾಲೀಕರು

Published 31 ಜನವರಿ 2024, 15:22 IST
Last Updated 31 ಜನವರಿ 2024, 15:22 IST
ಅಕ್ಷರ ಗಾತ್ರ

ಮಂಡ್ಯ: ಆಪೇ ಆಟೊಗಳ ಸಂಚಾರ ನಿರ್ಬಂಧಿಸುವುದು, ಹೊಸ ಆಟೊಗಳಿಗೆ ಅನುಮತಿ ನೀಡುವುದನ್ನು ಸ್ಥಗಿತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆಟೊ ಚಾಲಕರು, ಮಾಲೀಕರು ಹಾಗೂ ಕರ್ನಾಟಕ ರಾಜೀವ್ ಗಾಂಧಿ ಆಟೊ ಟ್ಯಾಕ್ಸಿ ಚಾಲಕರ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.

ನಗರದಾದ್ಯಂತ ಆಟೊಗಳ ಸಂಚಾರ ಸ್ಥಗಿತ ಮಾಡಿ ಮುಷ್ಕರ ನಡೆಸಿದ ಚಾಲಕರು ಮೈಷುಗರ್ ಕಾರ್ಖಾನೆ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು.

ನಗರದ ಪ್ರದೇಶದಲ್ಲಿ ಸಂಚರಿಸಲು ಆಪೇ ಆಟೊಗಳಿಗೆ ಅನುಮತಿ ಇಲ್ಲ. ಆದರೂ ನಗರದ ಹೊರವಲಯದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ನಗರ ಪ್ರವೇಶಿಸಿ ಸಂಚಾರ ಮಾಡುತ್ತಿವೆ. ಇದರಿಂದ ಪ್ರಯಾಣಿಕರ ಆಟೊ ಚಾಲನೆಯನ್ನೇ ನಂಬಿ ಬದುಕುತ್ತಿರುವ ಚಾಲಕರಿಗೆ ನಷ್ಟವಾಗುತ್ತಿದೆ. ಸರಕು ಸರಂಜಾಮು ಸಾಗಿಸುವ ವಾಹನಗಳು ಅತಿಯಾದ ಹೊಗೆ ಸೂಸುತ್ತಿದ್ದು ನಗರ ಪರಿಸರವನ್ನು ಹಾಳು ಮಾಡುತ್ತಿವೆ. ಇದನ್ನು ನೋಡಿಯೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ನಗರದಲ್ಲಿ ಸಾರ್ವಜನಿಕರ ವ್ಯಾಪ್ತಿಗೆ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಪರ್ಮಿಟ್ ನೀಡಲಾಗುತ್ತಿದೆ. ಈಗಾಗಲೇ ಸಂಚರಿಸುತ್ತಿರುವ ಆಟೊ ಚಾಲಕರು ಜೀವನ ನಿರ್ವಹಣೆ ಮಾಡಲು ತೊಂದರೆಯಾಗುತ್ತಿದೆ. ಅದೇರೀತಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದರಿಂದ ಆಟೊ ನಂಬಿ ಬದುಕುತ್ತಿರುವವರಿಗೆ ಜೀವನ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಕ್ತಿ ಯೋಜನೆ ಜಾರಿ ನಂತರ ಆಟೊ ಚಾಲಕರು ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆ ಪಡೆಯಲು ಕಷ್ಟಪಡುವಂತಾಗಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಪರದಾಡುತ್ತಿದ್ದಾರೆ. ಇಂಧನ ಹಾಗೂ ಆಟೊ ಬಿಡಿ ಭಾಗಗಳ ಬೆಲೆ ಏರಿಕೆ ಆಗಿರುವುದರಿಂದ ಚಾಲಕರ ಸಂಕಷ್ಟ ಹೇಳತೀರದಾಗಿದೆ ಎಂದು ನೋವು ವ್ಯಕ್ತಪಡಿಸಿದರು.

ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಟೊ ಚಾಲಕರು ಮತ್ತಷ್ಟು ಸಂಕಷ್ಟಕ್ಕಿಡಾಗುತ್ತಿದ್ದಾರೆ. ಆಪೇ ಆಟೊಗಳಿಗೆ ಮಂಡ್ಯ ನಗರ ಪ್ರವೇಶ ನಿರ್ಬಂಧಿಸಬೇಕು. ಈಗಾಗಲೇ ಹೆಚ್ಚಿನ ಪ್ರಮಾಣದ ಆಟೊಗಳು ಸಂಚಾರ ಮಾಡುತ್ತಿರುವುದರಿಂದ ಮುಂದಿನ ಐದು ವರ್ಷಗಳ ಕಾಲ ಯಾವುದೇ ಹೊಸ ಆಟೊಗಳಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ಕೆ.ಆರ್.ರವೀಂದ್ರ, ಅಧ್ಯಕ್ಷ ಟಿ.ಕೃಷ್ಣ, ಮುಖಂಡರಾದ ಗುರು, ಶಂಕರ್, ಬೋರಲಿಂಗ, ಎಂ.ಎನ್.ಸತ್ಯನಾರಾಯಣ, ರವಿಕುಮಾರ್, ಎಂ.ರಾಜು, ಕೃಷ್ಣ, ನಾರಾಯಣ, ಸೈಯದ್ ನವಾಬ್ ಜಾನ್, ಕುಮಾರ್, ಶಿವಕುಮಾರ್, ಎಚ್.ಸಿ.ಮಹೇಶ್ ಪಾಲ್ಗೊಂಡಿದ್ದರು.

Highlights - ಹೊಸ ಆಟೊ ಅನಮತಿ ನೀಡದಂತೆ ಆಗ್ರಹ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವ ಆಪೇ ಆಟೊ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ

Cut-off box - ಪ್ರಯಾಣಿಕರ ಪರದಾಟ ಬುಧವಾರ ಬೆಳಿಗ್ಗೆಯಿಂದಲೇ ಆಟೊಗಳು ರಸ್ತೆಗೆ ಇಳಿಯಲಿಲ್ಲ. ಹೀಗಾಗಿ ನಗರದಾದ್ಯಂತ ಸಾರ್ವಜನಿಕರು ಪರದಾಡಬೇಕಾಯಿತು. ನಗರದ ಬಸ್‌ ನಿಲ್ದಾಣದಲ್ಲಿ ಆಟೊಗಳು ಸಿಗದೇ ಅಪಾರ ಸಂಖ್ಯೆಯ ಪ್ರಯಾಣಿಕರು ಕಾದು ನಿಂತಿದ್ದರು. ವಿವಿಧ ಹಳ್ಳಿ ಸ್ಥಳಗಳಿಗೆ ತೆರಳುವವರು ವೈಯಕ್ತಿಕ ವಾಹನಗಳನ್ನು ಕರೆಸಿ ನಂತರ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT