18 ಅಡಿ ಎತ್ತರದ ಗಜಾನನ ಮಂಡ್ಯದ ರಾಜ!

7
ಬೀದಿಬೀದಿಯಲ್ಲಿ ಗಣಪತಿಗೆ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ

18 ಅಡಿ ಎತ್ತರದ ಗಜಾನನ ಮಂಡ್ಯದ ರಾಜ!

Published:
Updated:
Deccan Herald

ಮಂಡ್ಯ: ನಗರದ ಬೀದಿಬೀದಿಗಳಲ್ಲಿ ವಿವಿಧ ಮಾದರಿಯ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುತ್ತಿದೆ. ಅರ್ಧ ಅಡಿಯಿಂದ 18 ಅಡಿವರೆಗಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ನಗರದ ಬಂದೀಗೌಡ ಬಡಾವಣೆಯ ಗಣಪತಿ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾದ ಗಣಪತಿ ಜಿಲ್ಲೆಗೆ ಅತಿ ದೊಡ್ಡ ಮೂರ್ತಿಯಾಗಿದೆ. 18 ಅಡಿ ಎತ್ತರವಿದ್ದು ತಂತ್ರಜ್ಞಾನದ ಮೂಲಕ ಕಣ್ಣು ಮಿಟುಕಿಸುವ ವಿಶೇಷತೆ ಸೃಷ್ಟಿಸಲಾಗಿದೆ. ಹಿಮಾಲಯ ಪರ್ವತ, ಋಷಿಮುನಿಗಳ ತಪಸ್ಸು ಮಾಡುವುದು, ಅಮರನಾಥ ಶಿವಲಿಂಗದ ಮಾದರಿಯ ಜೊತೆಗೆ ಸಿಂಹದ ಮೇಲೆ ಕುಳಿತಿರುವ ಗಣೇಶ ಮೂರ್ತಿಯನ್ನು ಪ‍್ರತಿಷ್ಠಾಪಿಸಲಾಗಿದ್ದು ಭಕ್ತರ ಗಮನ ಸೆಳೆಯುತ್ತಿದೆ.

‘ಮೂರು ತಿಂಗಳ ಹಿಂದೆಯೇ ಗಣೇಶ ಮೂರ್ತಿಯನ್ನು ಕಾಯ್ದಿರಿಸಿದ್ದೆವು. ಆಂಧ್ರಪ್ರದೇಶದ ಪ್ರಖ್ಯಾತ ಕಲಾವಿದರೊಬ್ಬರು ಇದನ್ನು ತಯಾರಿಸಿದ್ದಾರೆ. ಕ್ರೇನ್‌ ಮೂಲಕ ಮೇಲೆತ್ತಿ ಲಾರಿಯಲ್ಲಿ ಇಟ್ಟುಕೊಂಡು ತಂದಿದ್ದೇವೆ. ಶನಿವಾರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ, ಸೆ.16ಕ್ಕೆ ರಸಮಂಜರಿ, ಸೆ.17ರಂದು ರಂಗೋಲಿ ಸ್ಪರ್ಧೆ, ಸೆ.18ಕ್ಕೆ ನೃತ್ಯ ಹಾಗೂ ಗಾಯನ ಸ್ಪರ್ಧೆ, ಸೆ.19 ಹೋಮ ಹವನ, ವಿಶೇಷ ಪೂಜೆ, ಸೆ.20ರಂದು ವಿಶೇಷ ಅನ್ನ ಸಂತರ್ಪಣೆ ನಡೆಸಲಾಗುವುದು. ಸೆ.22 ರಂದು ಗಣೇಶಮೂರ್ತಿ ವಿಸರ್ಜನೆ ಮಾಡಲಾಗುವುದು’ ಸಂಘಟಕ ಎಂ.ಪಿ.ನೃಪತುಂಗ ಹೇಳಿದರು.

ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಓಪಿ) ಗಣೇಶ ಮೂರ್ತಿ ನಿಷೇಧ ಮಾಡಿರುವ ಕಾರಣ ವಿವಿಧೆಡೆ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಆರಾಧನೆ ಮಾಡಲಾಗುತ್ತಿದೆ.  ಪ್ರತಿದಿನ ಪ್ರಸಾದ ವಿತರಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಸ್ಪರ್ಧೆ ಆಯೋಜನೆ ಮಾಡಲಾಗಿದೆ.

ಕೆಲವೆಡೆ ಹಿಂದೂ, ಮುಸ್ಲಿಂ ಸದಸ್ಯರು ಒಟ್ಟಾಗಿ ಸಾಮರಸ್ಯದಿಂದ ಗಣೇಶ ಮೂರ್ತಿ ಕೂರಿಸಿದ್ದಾರೆ. ಜನರಲ್ಲಿ ಐಕ್ಯತಾ ಭಾವ ಮೂಡಿಸಲು ಗಣೇಶ ಹಬ್ಬ ವೇದಿಕೆಯಾಗಿದೆ. ಗಾಂಧಿನಗರ ಬಡಾವಣೆಯಲ್ಲಿ ಗಣ ಕಲಾಮೃತ ಬಳಗದ ವತಿಯಿಂದ 101 ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ನಡುವೆ ದೊಡ್ಡ ಗಣಪತಿ ಇದ್ದು, ಸುತ್ತಲೂ ಚಿಕ್ಕದಾದ ನೂರು ಗಣಪತಿಗಳು ತಿರುಗುತ್ತವೆ. ಇದು ನೋಡುಗರ ಕಣ್ಣಿನಲ್ಲಿ ಭಕ್ತಿಯ ಅಲೆ ಸೃಷ್ಟಿಸುತ್ತದೆ.

ಗುತ್ತಲು ಕಾಲೊನಿಯ ಸಾಹುಕಾರ್‌ ಚನ್ನಯ್ಯ ಬಡಾವಣೆಯಲ್ಲಿ 16 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಕ್ರಿಯೆಟಿವ್‌ ಸ್ಟಾಫ್‌ ಅಸೋಸಿಯೇಷನ್‌ ಸದಸ್ಯರು ಮೂರ್ತಿ ಕೂರಿಸಿದ್ದಾರೆ. ಪ್ರತಿನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಗಾಂಧಿನಗರದ ಮೂರನೇ ಅಡ್ಡರಸ್ತೆಯಲ್ಲಿ 12 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇದು ಋಷಿಮುನಿ ತಪಸ್ಸು ಕೂರುವ ಹಾಗೆ ತಯಾರಿಸಲಾಗಿದೆ. ಗಣೇಶ ಲೋಕಕಲ್ಯಾಣಕ್ಕಾಗಿ ತಪಸ್ಸು ಮಾಡುತ್ತಿದ್ದಾನೆ ಎಂಬುದು ವ್ಯಕ್ತವಾಗುತ್ತಿದೆ. ನಗರದ ಪೇಟೆಬೀದಿ, ಕಲ್ಲಹಳ್ಳಿ ಬಡಾವಣೆ, ಅಶೋಕ್‌ನಗರ, ಸುಭಾಷ್ ನಗರ, ಕುವೆಂಪು ನಗರ, ನೆಹರು ನಗರ, ಹೊಸಹಳ್ಳಿ ಬಡಾವಣೆ ಸೇರಿ ಎಲ್ಲೆಡೆ ಗಣೇಶ ಮೂರ್ತಿ ಕೂರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !