ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌: ಶೇ 100ರಷ್ಟು ದಾಖಲಾತಿ ನಿರೀಕ್ಷೆ

ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಮೂಲ ಸೌಲಭ್ಯದ ಕೊರತೆ, ವಿದ್ಯಾರ್ಥಿಗಳಿಗೆ ಆತಂಕ
Last Updated 23 ಮೇ 2022, 3:05 IST
ಅಕ್ಷರ ಗಾತ್ರ

ಮಂಡ್ಯ: ಮೇ ತಿಂಗಳಲ್ಲೇ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಭರದಿಂದ ಸಾಗಿದೆ. ಈ ಬಾರಿ ಕೋವಿಡ್‌ ಭೀತಿ ಇಲ್ಲದ ಕಾರಣ ಹಾಸ್ಟೆಲ್‌ಗಳು ಶೇ 100ರಷ್ಟು ಭರ್ತಿಯಾಗುವ ನಿರೀಕ್ಷೆ ಇದೆ.

ಕಳೆದೆರಡು ವರ್ಷಗಳಿಂದ ಕೋವಿಡ್‌ ಇದ್ದ ಪರಿಣಾಮ ಜಿಲ್ಲೆಯಾ ದ್ಯಂತ ಶೇ 30ರಷ್ಟು ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳು ಖಾಲಿ ಇದ್ದವು. ಬಹುತೇಕ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ದಾಖಲಾಗಿದ್ದರೂ ಕೊರೊನಾ ಸೋಂಕಿನ ಭಯದ ಹಿನ್ನೆಲೆಯಲ್ಲಿ ಮನೆ ಸೇರಿದ್ದರು. ಆದರೆ, ಈ ಬಾರಿ ಈಗಾಗಲೇ ಶಾಲೆಗಳು ಆರಂಭವಾಗಿದ್ದು, ಮಕ್ಕಳು ವಸತಿನಿಲಯಗಳತ್ತ ಹೆಜ್ಜೆ ಇಡುತ್ತಿದ್ದಾರೆ.

ಜಿಲ್ಲೆಯ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿವೆ. ಒಟ್ಟು 65 ವಸತಿ ನಿಲಯಗಳು ಈ ಇಲಾಖೆಯ ವ್ಯಾಪ್ತಿಯಲ್ಲಿವೆ. ಅವುಗಳಲ್ಲಿ 49 ಬಾಲಕರ ಮೆಟ್ರಿಕ್‌ ಪೂರ್ವ ವಸತಿ ನಿಲಯಗಳು, 16 ಬಾಲಕಿಯರ ಮೆಟ್ರಿಕ್‌ ಪೂರ್ವ ವಸತಿ ನಿಲಯಗಳಿವೆ. ಒಟ್ಟಾರೆ 3,475 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಅವಕಾಶವಿದೆ.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 46 ಮೆಟ್ರಿಕ್‌ ಪೂರ್ವ ವಸತಿ ನಿಲಯಗಳಿವೆ. ಅವುಗಳಲ್ಲಿ 20 ಬಾಲಕರ ವಸತಿನಿಲಯ, 10 ಬಾಲಕಿಯರ ವಸತಿನಿಲಯಗಳಿವೆ. ಒಟ್ಟು 3,482 ಸಾವಿರ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಅವಕಾಶವಿದೆ. ಈಗಾಗಲೇ ವಸತಿ ನಿಯಲಗಳಲ್ಲಿ ದಾಖಲಾತಿ ಆರಂಭಗೊಂಡಿದೆ.

ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ವಸತಿ ಶಾಲೆಗಳ ದಾಖಲಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇದೆ. ಜೊತೆಗೆ ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಶಾಲೆ ಆಯ್ಕೆಗೆ ಕೌನ್ಸೆಲಿಂಗ್‌ ನಡೆಸಲಾಗುತ್ತದೆ.

ಆದರೆ ಮೆಟ್ರಿಕ್‌ ಪೂರ್ವ ವಸತಿ ನಿಲಯಗಳ ದಾಖಲಾತಿಗಾಗಿ ಯಾವುದೇ ಪ್ರವೇಶ ಪರೀಕ್ಷೆ ಇರುವುದಿಲ್ಲ. ನೇರವಾಗಿ ಆಯಾ ಹಾಸ್ಟೆಲ್‌ ವಾರ್ಡನ್‌ಗಳಲ್ಲಿ ಅರ್ಜಿ ಪಡೆದು ಸಲ್ಲಿಕೆ ಮಾಡಬಹುದು. ವಿದ್ಯಾರ್ಥಿ ಓದುತ್ತಿರುವ ಶಾಲೆ ವ್ಯಾಪ್ತಿಯಲ್ಲಿರುವ ವಸತಿ ನಿಲಯದಲ್ಲಿ ಸೀಟು ಪಡೆಯಬಹುದಾಗಿದೆ.

ಸೌಲಭ್ಯಗಳ ಕೊರತೆ: ಮೆಟ್ರಿಕ್‌ ಪೂರ್ವ ವಸತಿ ನಿಲಯಗಳಿಗೆ ಸೇರುವ ಮಕ್ಕಳು 6–10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಾಗಿರುತ್ತಾರೆ. ಇವರಿಗೆ ಹಾಸ್ಟೆಲ್‌ನಲ್ಲಿ ಹೆಚ್ಚು ಕಾಳಜಿಯ ಅವಶ್ಯಕತೆ ಇರುತ್ತದೆ. ಆದರೆ, ಜಿಲ್ಲೆಯ ವಿವಿಧೆಡೆ ಮೆಟ್ರಿಕ್‌ ಪೂರ್ವ ವಸತಿ ನಿಲಯಗಳಿಗೆ ಮೂಲ ಸೌಲಭ್ಯ ಇಲ್ಲದಾಗಿದೆ. ರುಚಿಕರವಾದ ಊಟ, ಉತ್ತಮ ಶೌಚಾಲಯ, ಸ್ವಚ್ಛ ವಸತಿ ಸೌಲಭ್ಯ ಒದಗಿಸುವಲ್ಲಿ ಇಲಾಖೆಗಳು ವಿಫಲವಾಗಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಪಿಸುತ್ತಾರೆ.

ಮದ್ದೂರು ತಾಲ್ಲೂಕಿನಲ್ಲಿ ಒಟ್ಟು 8 ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಲಯ ಗಳಿದ್ದು, ಮದ್ದೂರು ಪಟ್ಟಣದಲ್ಲಿ 2, ಭಾರತಿನಗರದಲ್ಲಿ 2, ಕೊಪ್ಪದಲ್ಲಿ 1, ಬೆಕ್ಕಳಲೆಯಲ್ಲಿ 1, ಹೊನ್ನಲಗೆರೆಯಲ್ಲಿ 1, ಕೆ.ಕೆ ಹಳ್ಳಿಯಲ್ಲಿ 1 ಇವೆ. ಬಹುತೇಕ ವಿದ್ಯಾರ್ಥಿನಿಲಯಗಳು ಮೂಲ ಸೌಲಭ್ಯ ಗಳಿಂದ ವಂಚಿತವಾಗಿವೆ. ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 6 ಮೆಟ್ರಿಕ್‌ ಪೂರ್ವ ವಸತಿ ನಿಲಯಗಳಿದ್ದು 1,500 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿದೆ.

ಕೊಪ್ಪದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸ್ವಂತ ಕಟ್ಟಡವಿದರೂ ವಿದ್ಯಾರ್ಥಿಗಳ ಪ್ರಮಾಣಕ್ಕೆ ಅನುಗುಣವಾಗಿ ಸ್ಥಳಾವಕಾಶವಿಲ್ಲ. ಹೊಸಗಾವಿ ಬೆಕ್ಕಳಲೆ ಹಾಗೂ ಕೊಪ್ಪದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿಸಿಎಂ ಇಲಾಖೆಯ ವಿದ್ಯಾರ್ಥಿ ನಿಲಯಗಳು ಸ್ವಂತ ಕಟ್ಟಡದಲ್ಲಿ ನಡೆಯುತ್ತಿದ್ದರೂ ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ.

ಕೊಪ್ಪ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲ. ಕಿರಿದಾದ ಜಾಗದಲ್ಲಿ ವಿದ್ಯಾರ್ಥಿಗಳು ವೇದನೆ ಪಡುವಂತಾಗಿದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯವನ್ನು ಸೇರಲು ಉತ್ಸುಕರಾಗಿದ್ದಾರೆ. ಆದರೆ, ಮೂಲಸೌಲಭ್ಯಗಳ ಕೊರತೆ ಕಾಡುತ್ತಿರುವುದರಿಂದ ಪೋಷಕರು ನಿರಾಸಕ್ತಿ ವಹಿಸುತ್ತಿದ್ದಾರೆ.

‘ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದರೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ವಿದ್ಯಾರ್ಥಿ ನಿಲಯಗಳ ಗುಣಮಟ್ಟ ಕಾಪಾಡಿಕೊಳ್ಳಲು ಆಗುತ್ತಿಲ್ಲ ತಕ್ಷಣ ಸಂಬಂಧಿಸಿದವರು ಗಮನಹರಿಸಬೇಕು’ ಎಂದು ಸ್ಥಳೀಯರಾದ ಶಿವಕುಮಾರ್ ಒತ್ತಾಯಿಸಿದ್ದಾರೆ.

ಮಳವಳ್ಳಿ ತಾಲ್ಲೂಕಿನಲ್ಲಿ ಒಟ್ಟು 8 ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳಿದ್ದು, ಎಲ್ಲವೂ ಸ್ವಂತ ಕಟ್ಟಡಗಳನ್ನು ಹೊಂದಿವೆ. ತಾಲ್ಲೂಕಿನ ವಡ್ಡರಹಳ್ಳಿಯ ಕಿತ್ತೂರು ರಾಣಿ ವಸತಿ ಶಾಲೆ, ಹನೋರಹುಂಡಿಯ ಇಂದಿರಾ ಗಾಂಧಿ ವಸತಿ ಶಾಲೆ, ಬ್ಯಾಡರಹಳ್ಳಿ ಮತ್ತು ಅಂತರಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಲ್ಕುಣಿಯ ಮೌಲಾನಾ ಅಬ್ದುಲ್ ಕಲಾಂ ವಸತಿ ಶಾಲೆ, ಹಲಗೂರಿನ ಕಸ್ತೂರ ಬಾ ಗಾಂಧಿ ವಸತಿ ನಿಲಯ ಇವೆ.

‘ಎಲ್ಲ ವಸತಿ ಶಾಲೆಗಳಲ್ಲೂ ದಾಖಲಾತಿ ನಡೆಯುತ್ತಿದ್ದು, ಬೇಡಿಕೆ ಹೆಚ್ಚುತ್ತಿದೆ. ಬೇಗ ಶಾಲೆಗಳು ಆರಂಭವಾಗಿರುವ ಕಾರಣ ದಾಖಲಾತಿಗೆ ಅನುಕೂಲವಾಗಿದೆ’ ಎಂದು ಮಳವಳ್ಳಿಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಎನ್.ಜನಾರ್ದನ್ ಮಾಹಿತಿ ನೀಡಿದರು.

ಮಕ್ಕಳ ಸ್ವಾಗತಕ್ಕೆ ಸಕಲ ಸಿದ್ಧತೆ

ಈಗಾಗಲೇ ಶಾಲೆಗಳು ಆರಂಭಗೊಂಡಿದ್ದು ಹಾಸ್ಟೆಲ್‌ಗಳ ದಾಖಲಾತಿ ಹೆಚ್ಚುತ್ತಿದೆ. ಮಕ್ಕಳನ್ನು ಹಾಸ್ಟೆಲ್‌ಗಳಿಗೆ ವಿವಿಧ ಚಟುವಟಿಕೆಗಳ ಮೂಲಕ ಸ್ವಾಗತಿಸಲು ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಆಯಾ ಹಾಸ್ಟೆಲ್‌ಗಳ ವಾರ್ಡನ್‌ಗಳು ಚಿಂತನೆ ನಡೆಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ 14 ದಿನಗಳ ಮಕ್ಕಳ ಹಬ್ಬದ ಮೂಲಕ ಮಕ್ಕಳನ್ನು ಸ್ವಾಗತ ಕೋರಲಾಗುತ್ತಿದೆ. ಅದಕ್ಕೆ ‘ಮಳೆ ಬಿಲ್ಲು’ ಎಂದು ನಾಮಕರಣ ಮಾಡಲಾಗಿದೆ. ಅದೇ ರೀತಿಯಲ್ಲಿ ಹಾಸ್ಟೆಲ್‌ ಮಕ್ಕಳಿಗೂ ಸ್ವಾಗತ ಕೋರಲು ನಿರ್ಧರಿಸಲಾಗಿದೆ.

ಸ್ವಂತ ಕಟ್ಟಡವಿಲ್ಲದೆ ಸಮಸ್ಯೆ

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಒಟ್ಟು ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ 41 ನಿಲಯಗಳಿಗೆ ಸ್ವಂತ ಕಟ್ಟಡ ಇದೆ. 24 ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸ್ವಂತ ಕಟ್ಟಡದ ಕೊರತೆಯಿಂದಾಗಿ ವಿದ್ಯಾರ್ಥಿಗಳು ಸೌಲಭ್ಯದ ಕೊರತೆ ಎದುರಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಬಹುತೇಕ ವಿದ್ಯಾರ್ಥಿನಿಲಯಗಳೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಬಿಸಿಎಂ ಇಲಾಖೆಗೆ ಸೇರಿದ ಒಟ್ಟು 8 ವಿದ್ಯಾರ್ಥಿನಿಲಯಗಳಿವೆ. ಈ ಪೈಕಿ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡ ಇಲ್ಲ. ಕೊಡಿಯಾಲ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಕೂಡ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಪಟ್ಟಣ ಮತ್ತು ತಾಲ್ಲೂಕಿನ ವಿವಿಧೆಡೆ 5 ವಿದ್ಯಾರ್ಥಿನಿಲಯಗಳಿದ್ದು ಎಲ್ಲವೂ ಸ್ವಂತ ಕಟ್ಟಡ ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT