ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಪರಭಾರೆ | 206 ಎಕರೆ ಭೂ ಮರು ವಶ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

ಉನ್ನತ ತನಿಖೆಗೆ ಶಿಫಾರಸು; ಅಕ್ರಮದಲ್ಲಿ ಯಾರೇ ಭಾಗಿದ್ದರೂ ಕ್ರಮ ನಿಶ್ಚಿತ
Published 6 ಜನವರಿ 2024, 15:57 IST
Last Updated 6 ಜನವರಿ 2024, 15:57 IST
ಅಕ್ಷರ ಗಾತ್ರ

ಮಳವಳ್ಳಿ: ‘ತಾಲ್ಲೂಕಿನಲ್ಲಿ ಅಕ್ರಮವಾಗಿ ಪರಭಾರೆಯಾಗಿದ್ದ 206 ಎಕರೆ ಸರ್ಕಾರಿ ಭೂಮಿಯನ್ನು ಮತ್ತೆ ಸರ್ಕಾರದ ವಶಕ್ಕೆ ಪಡೆಯಲಾಗಿದೆ’ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿಯ ಶಾಸಕರ ಕಚೇರಿಯಲ್ಲಿ ಶನಿವಾರ ದಾಖಲೆಗಳೊಂದಿಗೆ ಅವರು ಮಾತನಾಡಿ, ‘ನಾನು ಚುನಾವಣೆಗೆ ಮುನ್ನವೇ ತಾಲ್ಲೂಕಿನ ಭೂ ಅಕ್ರಮದ ಬಗ್ಗೆ ಹೇಳಿದ್ದೆನು. ಅಧಿಕಾರಿಗಳು ದಾಖಲೆಗಳಿಲ್ಲದೇ ತನಿಖೆ ನಡೆಸುವುದು ಅಸಾಧ್ಯ. ಇದೀಗ ಎಲ್ಲವೂ ಬಹಿರಂಗವಾಗುತ್ತಿದೆ’ ಎಂದು ಹೇಳಿದರು.

‘ಹಗರಣ ಹೊರ ಬಂದ ಸಂದರ್ಭದಲ್ಲಿ ಈಗಾಗಲೇ ಒಬ್ಬರನ್ನು ಅಮಾನತು ಮಾಡಿ, ಎಫ್ಐಆರ್ ದಾಖಲಿಸಲಾಗಿದೆ. ಮತ್ತೊಬ್ಬ ಶಿರಸ್ತೇದಾರ ವಿರುದ್ಧವೂ ಕ್ರಮವಾಗಲಿದೆ. ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತ ತನಿಖೆ ನಡೆಸಿ ಅಕ್ರಮವಾಗಿ ಪರಭಾರೆಯಾಗಿದ್ದ ಸುಮಾರು 206 ಎಕರೆ ಭೂಮಿಯನ್ನು ಮರು ವಶಕ್ಕೆ ಪಡೆದಿದ್ದು, ಅಕ್ರಮ ಭೂ ಕಬಳಿಕೆ ಸಂಬಂಧ ವರದಿಯೊಂದನ್ನು ಸಿದ್ದಪಡಿಸಿಕೊಂಡು ಸರ್ಕಾರಕ್ಕೆ ಸಲ್ಲಿಸಿ ಉನ್ನತ ಮಟ್ಟದ ತನಿಖೆ ಮಾಡಲಾಗುವುದು’ ಎಂದು ಹೇಳಿದರು.

‘‘ಅಕ್ರಮ ಭೂ ಪರಭಾರೆಯಲ್ಲಿ ಜಮೀನು ಖರೀದಿಸಿ ನಾಲ್ಕೈದು ಮಂದಿಗೆ ಬದಲಾವಣೆಯಾಗಿರುತ್ತದೆ. ಆದರೆ ಕೊನೆಯದಾಗಿ ಜಮೀನು ಖರೀದಿ ಮಾಡಿದ್ದ ವ್ಯಕ್ತಿ ಪರಿತಪಿಸುವಂತಾಗಿದೆ. ಈಗ ವಶಕ್ಕೆ ಪಡೆದಿರುವ ಭೂಮಿ ಸ್ಪಲ್ಪ ಪ್ರಮಾಣವಾಗಿದೆ. ಮುಂದಿನ ದಿನಗಳಲ್ಲಿ ಭೂ ಅಕ್ರಮ ಬಗ್ಗೆ ಇನ್ನೂ ಹೆಚ್ಚಿನ ಸತ್ಯ ಹೊರ ಬರಲಿದೆ. ತನಿಖೆ ಮುಂದುವರಿಯುತ್ತಿದೆ. ನನ್ನ ಕುಟುಂಬದ ಸದಸ್ಯರಾಗಿದ್ದರೂ ಕೂಡ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ’ ಎಂದು ಹೇಳಿದರು.

‘ಕ್ಷೇತ್ರದಲ್ಲಿ ಅಕ್ರಮ ಮದ್ಯ, ಜೂಜು, ಗಾಂಜಾ ಮಾರಾಟ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಮಳೆಯ ಸಂದರ್ಭದಲ್ಲಿ ಹೊರತುಪಡಿಸಿ ಯಾವುದೇ ಅವಧಿಯಲ್ಲೂ ನೀರು ತುಂಬಿಸಲು ಸಾಧ್ಯವಾಗದ ಕೆರೆಗೆ ನೀರು ತುಂಬಿಸುವಂತೆ ಕೆಲವರನ್ನು ಎತ್ತಿಕಟ್ಟಿ ಉದ್ದೇಶಪೂರ್ವಕವಾಗಿ ಪ್ರತಿಭಟಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT