ಬುಧವಾರ, ಆಗಸ್ಟ್ 4, 2021
21 °C
ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಮುಖಂಡರು ಫಲಾನುಭವಿಗಳು

ಗಣಿ ಚಟುವಟಿಕೆಗೆ ಪಕ್ಷಭೇದವಿಲ್ಲ, ಗಣಿಗಾರಿಕೆಯೇ ಪಕ್ಷಗಳ ಚುನಾವಣಾ ನಿಧಿ!

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ರಾಜಕಾರಣ ವಿಚಾರದಲ್ಲಿ ಸಕ್ಕರೆ ನಾಡಿನ ವಿವಿಧ ಪಕ್ಷಗಳ ಮುಖಂಡರು ತೊಡೆ ತಟ್ಟಿ ಅಖಾಡಕ್ಕಿಳಿಯುತ್ತಾರೆ. ಆದರೆ, ಅಕ್ರಮ ಕಲ್ಲು ಗಣಿಗಾರಿಕೆ ವಿಷಯದಲ್ಲಿ ಎಲ್ಲ ಪಕ್ಷಗಳ ನಾಯಕರು ಫಲಾನುಭವಿಗಳೇ ಆಗಿದ್ದಾರೆ. ಗಣಿಗಾರಿಕೆ ಅವರಿಗೆ ಚುನಾವಣಾ ನಿಧಿಯಾಗಿದೆ.

ಗಣಿಗಾರಿಕೆ ಯಾವುದೋ ಒಂದು ಪಕ್ಷ, ಒಬ್ಬ ಜನಪ್ರತಿನಿಧಿಗೆ ಸೀಮಿತವಾಗಿಲ್ಲ. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಯ ಮುಖಂಡರು ಪ್ರತ್ಯಕ್ಷ, ಪರೋಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ಕೆಲವರು ನೇರವಾಗಿ, ಕೆಲವರು ಬೆಂಬಲಿಗರ ಮೂಲಕ ತೊಡಗಿದ್ದಾರೆ.

ಹಲವರಿಗೆ ವಂಶಪಾರಂಪರ್ಯ ವೃತ್ತಿಯಾಗಿದ್ದು, ತಮ್ಮ ರಾಜಕೀಯ ಪ್ರಾಬಲ್ಯ ಹೆಚ್ಚಿಸಿಕೊಂಡಿದ್ದಾರೆ. ತಮಗಷ್ಟೇ ಅಲ್ಲ, ಅನ್ಯ ಜಿಲ್ಲೆಗಳ ಮುಖಂಡರಿಗೂ ಆರ್ಥಿಕ ನೆರವು ಹರಿಸುವಷ್ಟು ಸದೃಢರಾಗಿದ್ದಾರೆ.

‘ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯದಲ್ಲಿ ಕಲ್ಲು ಗಣಿಗಾರಿಕೆ ಹೆಚ್ಚಾಗಿದೆ. ಆದರೆ, ರಾಜಧನ ಸಂಗ್ರಹ ತೀರಾ ಕಡಿಮೆ’ ಎಂದು ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದು, ಅಕ್ರಮ ಕಲ್ಲು ಗಣಿಗಾರಿಕೆಯ ವಿಸ್ತಾರವನ್ನು ತೆರೆದಿಟ್ಟಿದ್ದಾರೆ.

ಬೇಬಿಬೆಟ್ಟದಲ್ಲಿ ಮಾತ್ರವಲ್ಲ; ಶ್ರೀರಂಗಪಟ್ಟಣ, ನಾಗಮಂಗಲ ತಾಲ್ಲೂಕಿನಲ್ಲಿ ಅತಿ ಹೆಚ್ಚು ಗಣಿ ಕಂಪನಿಗಳು ಬೆಟ್ಟ, ಗುಡ್ಡಗಳನ್ನು ಆವರಿಸಿಕೊಂಡಿವೆ. ಎರಡೂ ಕ್ಷೇತ್ರಗಳ ಶಾಸಕರು, ಮಾಜಿ ಶಾಸಕರು ಗಣಿಗಾರಿಕೆಯಿಂದ ಅಪಾರ ಲಾಭ ಕಂಡವರೇ ಆಗಿದ್ದಾರೆ.

ಬಹುಭಾಗ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಗಣಿ ಚಟುವಟಿಕೆ ನಡೆಯುತ್ತಿದ್ದು, ಹಲವು ಪ್ರಕರಣಗಳು ದಾಖಲಾಗಿವೆ. ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ನಡುವೆ ಸಮನ್ವಯ ಇಲ್ಲದ ಕಾರಣ ಅರಣ್ಯ ಭೂಮಿ ತೆರವುಗೊಳಿಸಲು ಸಾಧ್ಯವಾಗಿಲ್ಲ ಎಂದು ರೈತ ಮುಖಂಡರು ಆರೋಪಿಸುತ್ತಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಹಂಗರಹಳ್ಳಿಯಲ್ಲಿ ಬಹುಕಾಲದಿಂದ ಗಣಿಗಾರಿಕೆ ನಡೆಯುತ್ತಿದೆ. ‘ಹಂಗರಹಳ್ಳಿ’ ಜೀತ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು. ಆಗಿನ ಕರಾಳ ದಿನಗಳ ನೆನಪು ಈಗಲೂ ಇಲ್ಲಿಯ ಜನರಲ್ಲಿ ಹಸಿರಾಗಿದೆ.

‘ನಮ್ಮ ಗಣಿ ಚಟುವಟಿಕೆ ಕೆಆರ್‌ಎಸ್‌ನಿಂದ 20 ಕಿ.ಮೀ ವ್ಯಾಪ್ತಿಯ ಹೊರಗಿರುವ ಕಾರಣ ನಾವು ಸ್ಥಗಿತಗೊಳಿಸಬೇಕಿಲ್ಲ. ಚಟುವಟಿಕೆ ಅಕ್ರಮವಾಗಿದ್ದರೆ ಸಕ್ರಮ ಮಾಡಿಕೊಡಿ’ ಎಂಬುದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ವಾದವಾಗಿದೆ.

ಗಣಿ ಪರ ನಿಂತ ಎಚ್‌ಡಿಡಿ: ಕೆ.ಆರ್‌.ಪೇಟೆ ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ವಿರುದ್ಧ ಹಲವು ದೂರು ದಾಖಲಾಗಿವೆ. ಗಣಿ ಮಾಲೀಕ, ಜೆಡಿಎಸ್‌ ಮುಖಂಡ ಎಚ್‌.ಟಿ.ಮಂಜು ಮಾಲೀಕರಾಗಿದ್ದು, ಕಲ್ಲು ಸ್ಫೋಟದ ವೇಳೆ ಹೇಮಾವತಿ ನಾಲೆಗೂ ಹಾನಿಯಾಗಿತ್ತು.

ದೂರು ಆಧರಿಸಿ ಗಣಿ ಇಲಾಖೆಯು ಯಂತ್ರಗಳನ್ನು ಜಪ್ತಿ ಮಾಡಿತ್ತು. ಆಗ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರು  ಮಂಜು ಪರ ನಿಂತಿದ್ದರು. ‘ಗಣಿಗಾರಿಕೆಗೆ ಅವಕಾಶ ನೀಡದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರಲಾಗುವುದು’ ಎಂದು ಬೆದರಿಕೆ ಹಾಕಿದ್ದರು. ನಂತರ ಗಣಿಗಾರಿಕೆಯ ಮೇಲಿನ ನಿಷೇಧ ತೆರವುಗೊಳಿಸಲಾಗಿತ್ತು.

‘ದೇವೇಗೌಡರ ಮಧ್ಯಪ್ರವೇಶದ ನಂತರ ಜಿಲ್ಲೆಯಾದ್ಯಂತ ಅಕ್ರಮ ಗಣಿಗಳ ಮೇಲಿನ ಕಟು ನಿಲುವು ಸಡಿಲಗೊಂಡಿತು’ ಎಂದು ರೈತ ಮುಖಂಡರೊಬ್ಬರು ತಿಳಿಸಿದರು.

ವಾಕ್ಸಮರಕ್ಕೆ ಕಾರಣವಾದ ಭೂವಿಜ್ಞಾನಿ ವರ್ಗಾವಣೆ

‘ಕೆಆರ್‌ಎಸ್‌ ಉಳಿಸಿ’ ಹೋರಾಟ ಹಿಂದಿನಿಂದಲೂ ನಡೆಯುತ್ತಿದ್ದು, ಸಂಸದೆ ಸುಮಲತಾ ಅವರದ್ದು ಹೊಸ ಸೇರ್ಪಡೆ. ಅದಕ್ಕೆ ಅಧಿಕಾರಿಯೊಬ್ಬರ ವರ್ಗಾವಣೆಯೇ ಕಾರಣ ಎಂಬ ಅಂಶ ಕುತೂಹಲ ಮೂಡಿಸುತ್ತದೆ.

ಅಕ್ರಮ ಗಣಿ ಮಾಲೀಕರಿಗೆ ₹ 500 ಕೋಟಿಯಷ್ಟು ದಂಡ ವಿಧಿಸಿದ್ದ ಹಿಂದಿನ ಹಿರಿಯ ಭೂವಿಜ್ಞಾನಿ ಟಿ.ವಿ.ಪುಷ್ಪಾ ಅವರನ್ನು ಏಪ್ರಿಲ್‌ನಲ್ಲಿ ದಿಢೀರ್‌ ವರ್ಗಾವಣೆ ಮಾಡಲಾಗಿತ್ತು. ಆಗ ಎಲ್ಲ ಪಕ್ಷಗಳ ಮುಖಂಡರು ಒಟ್ಟಾಗಿ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಮೇಲೆ ಒತ್ತಡ ಹಾಕಿದ್ದರು ಎಂಬ ಆರೋಪವಿದೆ.

ವರ್ಗಾವಣೆ ತಪ್ಪಿಸಲು ಸುಮಲತಾ ಯತ್ನಿಸಿದ್ದರು. ಮುಖ್ಯಮಂತ್ರಿ ಭೇಟಿಯಾದರೂ ರದ್ದಾಗಲಿಲ್ಲ. ಅವರ ಬೆಂಬಲಕ್ಕೆ ಆಗ ಯಾವ ಪಕ್ಷದ ಮುಖಂಡರೂ ಬರಲಿಲ್ಲ. ಇದರಿಂದ ಅಸಮಾಧಾನಗೊಂಡು, ‘ಕೆಆರ್‌ಎಸ್‌ ಜಲಾಶಯ ಬಿರುಕು ಬಿಟ್ಟಿದೆ’ ಎಂಬ ಹೇಳಿಕೆ ಕೊಟ್ಟು ಗಣಿ ವಿರುದ್ಧದ ಹೋರಾಟ ಆರಂಭಿಸಿದರು. ಅಲ್ಲಿಂದ ಜೆಡಿಎಸ್‌ ಮುಖಂಡರು ಹಾಗೂ ಸುಮಲತಾ ನಡುವೆ ವಾಕ್ಸಮರ ಆರಂಭವಾಯಿತು. ರಾಜಕೀಯ ದ್ವೇಷಕ್ಕಾಗಿ ಕೆಆರ್‌ಎಸ್‌ ವಿಚಾರ ಎಳೆದುತಂದಿದ್ದಾರೆ ಎಂಬ ಆರೋಪವೂ ಇದೆ.

ರಂಗನತಿಟ್ಟು ಪಕ್ಷಿಧಾಮಕ್ಕೂ ಧಕ್ಕೆ

ರಂಗನತಿಟ್ಟು ಪಕ್ಷಿಧಾಮ ಸೂಕ್ಷ್ಮ ಪರಿಸರ ವಲಯದ ಕಾರೇಕುರ ಗ್ರಾಮದ ಬಳಿ ಬೃಹತ್‌ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿ ನಾಲ್ಕು ತಿಂಗಳ ಹಿಂದಷ್ಟೇ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಾಗಿದೆ.

ಸಾರ್ವಜನಿಕ ಉದ್ದೇಶದ ನೆಪದಲ್ಲಿ ಗಣಿ ಲಾರಿಗಳ ಸಂಚಾರಕ್ಕೆ ಸೇತುವೆ ನಿರ್ಮಾಣವಾಗುತ್ತಿದ್ದು, ಇದರಿಂದ ರಂಗನತಿಟ್ಟು ಪಕ್ಷಿಧಾಮದ ಪಕ್ಷಿಗಳಿಗೂ ತೊಂದರೆ ಉಂಟಾಗಲಿದೆ ಎಂದು ಆರೋಪಿಸಲಾಗಿದೆ.

***

ಬೇಬಿಬೆಟ್ಟದಲ್ಲಿ ನಾವು ಗಣಿ ಚಟುವಟಿಕೆ ನಡೆಸುತ್ತಿಲ್ಲ. ಕೆಆರ್‌ಎಸ್‌ ಸಮಸ್ಯೆ ಆರಂಭಗೊಂಡ ನಂತರ ನಮ್ಮ ಕುಟುಂಬದ ಕ್ರಷರ್‌ಗಳನ್ನು ಸ್ಥಳಾಂತರ ಮಾಡಿದ್ದೇವೆ.

- ಸಿ.ಎಸ್‌.ಪುಟ್ಟರಾಜು, ಶಾಸಕ, ಮೇಲುಕೋಟೆ ಕ್ಷೇತ್ರ

ನಾಗಮಂಗಲ ತಾಲ್ಲೂಕು ಮಾತ್ರವಲ್ಲದೇ ಮಂಡ್ಯ ಜಿಲ್ಲೆಯಾದ್ಯಂತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅದು ಸ್ಥಗಿತಗೊಳ್ಳಬೇಕು ಎಂಬುದು ನನ್ನ ಒತ್ತಾಯವಾಗಿದೆ.

-ಎನ್‌.ಚಲುವರಾಯಸ್ವಾಮಿ, ಕಾಂಗ್ರೆಸ್‌ ಮುಖಂಡ

ಜಲಾಶಯಕ್ಕೆ ಧಕ್ಕೆಯಾಗುವ ಅಕ್ರಮ ಗಣಿ ಚಟುವಟಿಕೆಯನ್ನು ತಕ್ಷಣವೇ ನಿಷೇಧಿಸಬೇಕು. ಜಲಾಶಯದ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಬೇಕು.

- ಅಶ್ವಥ್‌ ನಾರಾಯಣಗೌಡ, ಬಿಜೆಪಿ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು